

ದಾವಣಗೆರೆ: ಬಿಜೆಪಿ ಹೈಕಮಾಂಡ್ ಹಾಗೂ ವರಿಷ್ಠರು ವಿಶ್ವಾಸವಿಟ್ಟು ನೀಡಿದ ರಾಜ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದೇನೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 130 ಕ್ಕೂ ಅಧಿಕ ಸ್ಥಾನ ಗಳಿಸಿ ಅಧಿಕಾರಕ್ಕೆ ಬರಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಭಾನುವಾರ ಹೊನ್ನಾಳಿ ಪಟ್ಟಣದಲ್ಲಿ ಸಂಗೊಳ್ಳಿ ರಾಯಣ್ಣ ಹಾಗೂ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
130 ಸ್ಥಾನಗಳ ಪೈಕಿ ಜಿಲ್ಲೆಯಲ್ಲಿ ಎಂ.ಪಿ.ರೇಣುಕಾಚಾರ್ಯ, ಮಾಡಾಳು ಮಲ್ಲಿಕಾರ್ಜುನ್ ಗೆಲುವಿಗಾಗಿ ಪಕ್ಷ ಸಂಘಟನೆ ಹಾಗೂ ಅಸಮರ್ಥ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಆಡಳಿತ ಪಕ್ಷದ ಚಳಿ ಬಿಡಿಸಲು ಬಿಜೆಪಿ-ಜೆಡಿಎಸ್ ಪಕ್ಷದ ಶಾಸಕರು ಸಜ್ಜಾಗಿರುವುದಾಗಿ ಹೇಳಿದ ವಿಜಯೇಂದ್ರ, ವಕ್ಫ್ , ಮುಡಾ, ವಾಲ್ಮೀಕಿ ನಿಗಮದ ಹಗರಣ, ಬಳ್ಳಾರಿಯಲ್ಲಿ ಬಾಣಂತಿಯರ ಸಾವು ವಿಚಾರವನ್ನು ಸದನದಲ್ಲಿ ಬೆಳಕಿಗೆ ತರಲಿದ್ದೇವೆ ಎಂದು ಹೇಳಿದರು.
ಗ್ಯಾರಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ರಾಜ್ಯದಲ್ಲಿ ಅಭಿವೃದ್ಧಿ ಕಾಮಗಾರಿಗಳ ಗುದ್ದಲಿಪೂಜೆ ಮಾಡದ ದರಿದ್ರ ಸರ್ಕಾರವಾಗಿದೆ. ಬಿಜೆಪಿ ಸರ್ಕಾರವಿದ್ದಾಗ ಹೊನ್ನಾಳಿ-ನ್ಯಾಮತಿ ತಾಲೂಕಿಗೆ ಸಾವಿರಾರು ಕೋಟಿ ರೂ. ಅನುದಾನ ನೀಡಿದ್ದೆವು. ಈಗಿನ ಕಾಂಗ್ರೆಸ್ ಶಾಸಕರ ಬಳಿ ಇರುವ ಗುದ್ದಲಿ ತುಕ್ಕು ಹಿಡಿದಿದೆ. ಅಭಿವೃದ್ಧಿಗೆ ಸರ್ಕಾರ ನಯಾಪೈಸೆ ನೀಡಿಲ್ಲ ಎಂದು ಕಿಡಿ ಕಾರಿದರು.
ರೈತರಿಗೆ 4 ಸಾವಿರ ರೂ. ನೆರವು, ವಿದ್ಯಾರ್ಥಿಗಳಿಗೆ ವಿದ್ಯಾಶ್ರೀ ಯೋಜನೆ, ಹಿಂದಿನ ಗೃಹಲಕ್ಷ್ಮೀ ಯೋಜನೆ ಸೇರಿ ಅನೇಕ ಜನಪರ ಯೋಜನೆಗಳನ್ನು ರದ್ದು ಮಾಡಿದೆ. ಬಿಜೆಪಿ ಸರ್ಕಾರ ರೈತರಿಗೆ ಉಚಿತ ಪಂಪ್‌ಸೆಟ್ ಯೋಜನೆ ಜಾರಿಗೆ ತಂದಿತ್ತು. ಈಗಿನ ಸರ್ಕಾರದಲ್ಲಿ ಪಂಪ್‌ಸೆಟ್‌ಗೆ ವಿದ್ಯುತ್ ಅಳವಡಿಸಿಕೊಳ್ಳಲು 1 ರಿಂದ 2 ಲಕ್ಷ ರೂ. ಖರ್ಚು ಮಾಡಬೇಕಿದೆ. ಇಂತಹ ಸರ್ಕಾರ ರಾಜ್ಯಕ್ಕೆ ಅಗತ್ಯವಿಲ್ಲ ಎಂದರು.
ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಬಿ.ವೈ. ವಿಜಯೇಂದ್ರ ಅವರು ಶಿಕಾರಿಪುರ ಕ್ಷೇತ್ರದಿಂದ ಅತ್ಯಧಿಕ ಮತಗಳಿಂದ ಗೆದ್ದು ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಭವಿಷ್ಯ ನುಡಿದರು.
ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ. ಗ್ಯಾರಂಟಿ ಯೋಜನೆ ಅಸಮರ್ಪಕವಾಗಿವೆ. ಅಭಿವೃದ್ಧಿ ಕಾರ್ಯಗಳಿಗೂ
ಅನುದಾನ ಮೀಸಲಿಡದೆ ದ್ರೋಹ ಬಗೆದಿದೆ ಎಂದು ಟೀಕಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್, ತಾಲೂಕು ಅಧ್ಯಕ್ಷ ಸುರೇಶ್, ಮುಖಂಡರಾದ ನಾಗರಾಜ್ ಅರಕೆರೆ, ನೆಲಹೊನ್ನೆ ಮಂಜುನಾಥ್, ಚನ್ನಗಿರಿಯ ಮಾಡಾಳು ಮಲ್ಲಿಕಾರ್ಜುನ್, ಲೋಕಿಕೆರೆ ನಾಗರಾಜ್, ಪುರಸಭೆ ಮಾಜಿ ಅಧ್ಯಕ್ಷ ರಂಗನಾಥ್, ದೊಡ್ಡೇರಿ ರಾಜಣ್ಣ, ಗಿರೀಶ್ ಹಾಗೂ ಕಾರ್ಯಕರ್ತರು ಇದ್ದರು.