ಜಿಲ್ಲಾ ಬಿಜೆಪಿಯಲ್ಲಿ ತಿಳಿಯಾಗದ ಒಳಬೇಗುದಿ  ನಾವು ಪಕ್ಷ ವಿರೋಧಿ ಕೆಲಸ ಮಾಡಿಲ್ಲ   ರವೀಂದ್ರನಾಥ್ ಬಣದ ಸಮರ್ಥನೆ

1000190267.jpg
Published on

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಸೋಲಿನ ಬಳಿಕವೂ ಬಿಜೆಪಿ ಒಳಜಗಳ ಕಡಿಮೆಯಾಗಿಲ್ಲ. ಜಿಲ್ಲೆಯಲ್ಲಿ ಎಸ್.ಎ.ರವೀಂದ್ರನಾಥ್ ಹಾಗೂ ಜಿ.ಎಂ.ಸಿದ್ದೇಶ್ವರ ಬಣಗಳು ಮತ್ತೆ ಪರಸ್ಪರ ಟೀಕಾಸ್ತ್ರ ಪ್ರಯೋಗಿಸುತ್ತಿವೆ.
ರಾಜ್ಯ ನಾಯಕರು ಮತ್ತು ಸ್ಥಳೀಯ ಕೆಲವರ ಪಿತೂರಿಯಿಂದ ದಾವಣಗೆರೆ ಲೋಕಸಭಾ ಕ್ಷೇತ್ರವು ಈ ಬಾರಿ ಬಿಜೆಪಿಯ ಕೈತಪ್ಪಿತು ಎಂಬುದಾಗಿ ಬಿಜೆಪಿ ಕಾರ್ಯಕರ್ತರ ಕೃತಜ್ಞತಾ ಸಭೆಯಲ್ಲಿ ಹರಿಹರ ಶಾಸಕ ಬಿ.ಪಿ. ಹರೀಶ್ ಕಿಡಿ ಕಾರಿದ್ದು ಪಕ್ಷದಲ್ಲಿನ ಅಸಮಾಧಾನಕ್ಕೆ ತುಪ್ಪ ಸುರಿದಂತಾಗಿದೆ.
ಶಿರಮಗೊಂಡನಹಳ್ಳಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಲಗಾನ್ ತಂಡ, ‘ನಾವು ನೋವಿನಲ್ಲೂ ಪ್ರಾಮಾಣಿಕ ಕೆಲಸ ಮಾಡಿದ್ದೇವೆ, ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಒಳಒಪ್ಪಂದವೂ ಆಗಿಲ್ಲ. ನಾಲ್ಕು ಬಾರಿ ಸಂಸದರನ್ನು ಗೆಲ್ಲಿಸಿದ್ದು ನಾವೇ. ಚುನಾವಣಾ ಉಸ್ತುವಾರಿ ರವೀಂದ್ರನಾಥ್ ನೇತೃತ್ವದಲ್ಲಿ ಒಂದು ಸಭೆಯನ್ನೂ ಮಾಡಲಿಲ್ಲ. ಪಕ್ಷದ ಸೋಲಿಗೆ ಬಿ.ಪಿ.ಹರೀಶ್‌ರಂತಹ ಮುಖಂಡರ ದುರಂಹಕಾರವೇ ಸೋಲಿಗೆ ಕಾರಣ’ ಎಂದು ವಾಗ್ದಾಳಿ ನಡೆಸಿತು.
ಆಲದಮರದ ಕೆಳಗೆ ಕುಳಿತು ಶಾಂತರಾಗಿ
‘ನಾನು ಐದು ಬಾರಿ ಗೆದ್ದಿದ್ದೇನೆ. ಅಷ್ಟೇ ಬಾರಿ ಸೋತಿದ್ದೇನೆ. ಆದರೆ, ಸೋತಾಗ ಯಾರ ಬಗ್ಗೆಯೂ ಹಗುರವಾಗಿ ಮಾತನಾಡಿಲ್ಲ. ನಾಲ್ಕು ಬಾರಿ ಗೆದ್ದು ಒಂದು ಸಲ ಸೋತ ಮಾತ್ರಕ್ಕೆ ಆತಂಕ ಪಡಬೇಕಿಲ್ಲ. ಯಾವುದಾದರೂ ದೊಡ್ಡ ಆಲದಮರದ ಕೆಳಗೆ ಕೂತು ಶಾಂತರಾಗಿ’ ಎಂದು ಮಾಜಿ ಸಚಿವ ಎಸ್.ಎ.ರವೀಂದ್ರನಾಥ್, ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಅವರಿಗೆ ಸಲಹೆ ನೀಡಿದರು.
ಹಿಂದೆಲ್ಲ ಹಳ್ಳಿಗಳಲ್ಲಿ ಪ್ರಚಾರಕ್ಕೆ ಹೋದಾಗ ಜನರು ಕಲ್ಲು, ಕಣಗ ಹಿಡಿದು ಬರುತ್ತಿದ್ದರು. ಅಂತಹ ಪರಿಸ್ಥಿತಿ ಈಗಿಲ್ಲ.  ಕಾರ್ಯಕರ್ತರ ಬಳಿ ಹೋಗಿ. ಮುಂದೆ ನಿಮ್ಮ ಮಕ್ಕಳನ್ನಾರೂ ಜನ ಗೆಲ್ಲಿಸುತ್ತಾರೆ. ಹೊಸ ಅಧ್ಯಾಯ ಎಂದುಕೊಂಡು ಸ್ವಲ್ಪ ದಿನ ಶಾಂತವಾಗಿರಿ ಎಂದು ಹೇಳಿದರು.
ಎಸ್. ನಿಜಲಿಂಗಪ್ಪ ಹೊಸದುರ್ಗದಲ್ಲಿ, ಸಿದ್ದವೀರಪ್ಪ ಹರಿಹರದಲ್ಲಿ ಈ ಹಿಂದಿನ ಚುನಾವಣೆಯಲ್ಲಿ ಜನಸಾಮಾನ್ಯರಿಂದ ಸೋತಿರುವ ನಿದರ್ಶನವಿದೆ. ಗಾಯತ್ರಿ ಸಿದ್ದೇಶ್ವರ ಅವರು ದೊಡ್ಡ ಕುಳದ ಎದುರು ಸೋತಿದ್ದಾರೆ. ರಾಜಕಾರಣದಲ್ಲಿ ಸೋಲು-ಗೆಲುವು ಸಹಜ ಎಂದರು.
ವಿಪಕ್ಷ ಮುಖಂಡರೊಂದಿಗೆ ಕೈ ಕುಲುಕಿದ ಮಾತ್ರಕ್ಕೆ, ಪ್ರಭಾ ಮಲ್ಲಿಕಾರ್ಜುನ್ ನಮ್ಮ ಮನೆಗೆ ಬಂದು ಮತಹೋದ ಮಾತ್ರಕ್ಕೆ  ಕಾಂಗ್ರೆಸ್ ಜತೆ ಒಳ ಒಪ್ಪಂದ ಮಾಡಿಕೊಂಡಿದ್ದೇನೆ ಎಂಬುದು ತಪ್ಪುಗ್ರಹಿಕೆ ಎಂದು ಶಾಸಕ ಹರೀಶ್‌ಗೆ ಕಿವಿಮಾತು ಹೇಳಿದರು.
ಹರಿಹರ-ಜಗಳೂರಲ್ಲಿ ಲೀಡ್ ಏಕಿಲ್ಲ?
ಶಾಸಕ ಬಿ.ಪಿ.ಹರೀಶ್ ಪಕ್ಷದ ತತ್ವ ಸಿದ್ಧಾಂತ ಮರೆತು ಮಾಧ್ಯಮದೆದುರು ರಾಜ್ಯಾಧ್ಯಕ್ಷ, ಮಾಜಿ ಸಿಎಂರನ್ನು ಟೀಕಿಸಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದರು. ನಮ್ಮ ವಿರುದ್ಧ ಕ್ರಮಕ್ಕೆ ಪಕ್ಷದ ನಾಯಕರಿಗೆ ದೂರು ನೀಡುವ ಹರೀಶ್, ಹರಿಹರ-ಜಗಳೂರು ಕ್ಷೇತ್ರದಲ್ಲಿ ಮತಗಳ ಹಿನ್ನಡೆಗಾದ ಕಾರಣಗಳನ್ನು ತಿಳಿಸಲಿ ಎಂದು ಸವಾಲು ಹಾಕಿದರು.
ಹರಿಹರ ವಿಧಾನಸಭೆ ಕ್ಷೇತ್ರದಲ್ಲಿ 1 ಲಕ್ಷ ಮತಗಳಿಂದ ಗೆದ್ದಿರುವ ಹರೀಶ್, 1.25 ಲಕ್ಷ ಲೀಡ್ ನೀಡುವುದಾಗಿ ಹೇಳಿದ್ದರೂ ಬಂದಿದ್ದು  70 ಸಾವಿರ ಮತಗಳು ಮಾತ್ರ. ಹರೀಶ್, ಮಾಜಿ ಶಾಸಕ ಶಿವಶಂಕರ್, ಚುನಾವಣಾ ಸಂಚಾಲಕರು ಮೂವರೂ ಇದ್ದಾಗ್ಯೂ ಅಲ್ಲಿ ಕಾಂಗ್ರೆಸ್‌ಗೆ ಲೀಡ್ ಆಗಿದ್ದೇಕೆ ಎಂಬುದನ್ನು ಶಾಸಕರು ಪ್ರತಿಕ್ರಿಯಿಸಲಿ. ಜಗಳೂರಲ್ಲೂ ಹೆಚ್ಚು ಲೀಡ್ ಸಿಗಲಿಲ್ಲ. ಹಾಗಾದರೆ ಅಲ್ಲಿನ ಚುನಾವಣೆ ಉಸ್ತುವಾರಿ ವಹಿಸಿದ್ದ ಸಂಸದರ ಪುತ್ರರೂ ಪಕ್ಷ ವಿರೋಧಿಗಳೇ ಎಂದು ಪ್ರಶ್ನಿಸಿದರು.
ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರಾಗಿ ಶಿವಶಂಕರಪ್ಪ ಅವರು ಬಿ.ವೈ.ರಾಘವೇಂದ್ರ ಅವರ ಕೆಲಸದ ಬಗ್ಗೆ ಹೊಗಳಿದ್ದರು. ಆದರೆ ಇದೇ ಕಾರಣಕ್ಕೆ ರಾಜ್ಯಾಧ್ಯಕ್ಷ ವಿಜಯೇಂದ್ರ, ಮಾಜಿ ಸಿಎಂ ಯಡಿಯೂರಪ್ಪ ಅವರು ಹೊಂದಾಣಿಕೆ ರಾಜಕಾರಣ ಮಾಡಿದರು ಎಂಬ ಹರೀಶ್ ಹೇಳಿಕೆ ಸರಿಯಲ್ಲ.
2014ರ ಚುನಾವಣೆ ಹಿಂದಿನ ದಿನ ಕಾಂಗ್ರೆಸ್ ಸೇರಿದ್ದ ನಿಮ್ಮನ್ನು ಮತ್ತೆ ಬಿಜೆಪಿಗೆ ಕರೆತಂದವರೇ ರವೀಂದ್ರನಾಥ್. ಅದನ್ನು ಮರೆತಿರಾ? ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದ ನಿಮಗೆ ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಕಿಡಿ ಕಾರಿದರು.
ಹರೀಶ್‌ಗೆ ಮಾನಸಿಕ ಸ್ಥಿಮಿತವಿಲ್ಲ
ಮಾಡಾಳು ವಿರೂಪಾಕ್ಷಪ್ಪ ಭ್ರಷ್ಟಾಚಾರ ಮಾಡಿದ್ದರಿಂದ ಕಳೆದ ಚುನಾವಣೆಯಲ್ಲಿ ಬಿಜೆಪಿ ಕಡಿಮೆ ಸ್ಥಾನ ಗೆದ್ದಿದೆ ಎಂದು ಹರೀಶ್ ಟೀಕಿಸಿದ್ದರು. ನನ್ನ ತಂದೆಯವರ ವಿರುದ್ಧದ ಮೊಕದ್ದಮೆ ಹೈಕೋರ್ಟ್‌ನಲ್ಲಿ ರದ್ದಾಗಿದ್ದ ವಿಚಾರವನ್ನು ತಿಳಿಸುವ ಜತೆಗೆ ಸರಿಯಾಗಿ ಅರ್ಥ ಮಾಡಿಕೊಳ್ಳದಿದ್ದರೆ ಜನರೇ ನಿಮ್ಮ ಹುಚ್ಚು ಬಿಡಿಸುತ್ತಾರೆ ಎಂದು ಹೇಳಿದ್ದು ನಿಜ ಎಂದು ಮುಖಂಡ ಮಾಡಾಳು ಮಲ್ಲಿಕಾರ್ಜುನ ಸಮರ್ಥಿಸಿಕೊಂಡರು.
ಶಾಸಕರು ತಮ್ಮನ್ನು ಗೆಲ್ಲಿಸಿದ ಹರಿಹರ ಕ್ಷೇತ್ರದ ಜನರ ಕೆಲಸ ಮಾಡಲಿ. ನಮ್ಮ ಕುಟುಂಬದ ಬಗ್ಗೆ ಟೀಕಿಸಿದರೆ ಸುಮ್ಮನಿರಲ್ಲ ಎಂದರಲ್ಲದೆ ಯಾರನ್ನೋ ಓಲೈಸಲು ಹರೀಶ್ ಹೇಳಿಕೆ ನೀಡಿದರೆ ಕುರುಡು ಹುಲಿಯನ್ನು ಜನರೇ ಬೋನಿಗೆ ತಳ್ಳುತ್ತಾರೆ ಎಂದೂ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಬಿ.ಜಿ.ಅಜಯಕುಮಾರ್, ಲೋಕಿಕೆರೆ ನಾಗರಾಜ್, ಎಂ.ಬಸವರಾಜನಾಯ್ಕ, ಡಾ. ಎ.ಎಚ್.ಶಿವಯೋಗಿಸ್ವಾಮಿ ಇತರರಿದ್ದರು.
---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net