

ದಾವಣಗೆರೆ: ರಾರಾಜಿಸಿದ ಹನುಮ-ಗರುಡ ಧ್ವಜಗಳು, ಯುವಕರ ಹರ್ಷೋದ್ಗಾರದೊಂದಿಗೆ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಾಲ್ಮೀಕಿ ಸಮಾಜದ ಯುವಕರ ಬೈಕ್ ರ‌್ಯಾಲಿ ಗಮನ ಸೆಳೆಯಿತು.
ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಅಂಗವಾಗಿ ದಾವಣಗೆರೆ ಜಿಲ್ಲಾ ವಾಲ್ಮೀಕಿ ಯುವ ಘಟಕ ಆಯೋಜಿಸಿದ್ದ ಎಂಟನೇ ವರ್ಷದ ಈ ರ‌್ಯಾಲಿಗೆ ಮಾಜಿ ಶಾಸಕ ಎಸ್.ವಿ. ರಾಮಚಂದ್ರಪ್ಪ ಅವರು ಚಾಲನೆ ನೀಡಿದರು.
ವೀರಮದಕರಿನಾಯಕ ವೃತ್ತದಲ್ಲಿನ ಪ್ರತಿಮೆಗೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ, ಬೈಕ್ ರ‌್ಯಾಲಿಗೆ ವಾಲ್ಮೀಕಿ ಸಮಾಜದ ಲಾಂಛನವಾದ ಹನುಮ-ಗರುಡ ಧ್ವಜದ ಹಸಿರುನಿಶಾನೆ ತೋರಿದರು.
ನಂತರ ಮಾತನಾಡಿದ ಎಸ್.ವಿ.ರಾಮಚಂದ್ರಪ್ಪ, ಬಿಜೆಪಿ ಸರ್ಕಾರದಲ್ಲಿ ಕರ್ನಾಟಕ ವಾಲ್ಮೀಕಿ ನಿಗಮದ ಅಧ್ಯಕ್ಷನಾಗಿದ್ದಾಗ ರಾಜ್ಯದಲ್ಲಿ ಉತ್ತಮ ಕೆಲಸ ಮಾಡಲು ಸಾಧ್ಯವಾಗಿತ್ತು. ಈಗಿನ ಕಾಂಗ್ರೆಸ್ ಸರ್ಕಾರದಲ್ಲಿ ಸಮಾಜದ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಎಸ್ಸಿಎಸ್ಟಿ ಸಮುದಾಯಗಳಿಗೆ ಈ ಸರ್ಕಾರದಲ್ಲಿ ಅನ್ಯಾಯವಾಗಿದೆ ಎಂದು ಹೇಳಿದರು.
ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷ ಬಿ. ವೀರಣ್ಣ ಮಾತನಾಡಿ ರಾಜ್ಯ ಸರ್ಕಾರ ಇತ್ತೀಚೆಗೆ ಕೆಲ ಸಮುದಾಯಗಳನ್ನು ಎಸ್ಟಿ ಪಟ್ಟಿಗೆ ಸೇರ್ಪಡೆ ಮಾಡಲು ಮುಂದಾಗಿದೆ. ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಜತೆ ಚರ್ಚಿಸಿ ಬೆಂಗಳೂರಿನಲ್ಲಿ ಬೃಹತ್ ಹೋರಾಟಕ್ಕೆ ಸಮಾಜ ಸಜ್ಜಾಗಬೇಕಿದೆ ಎಂದು ಹೇಳಿದರು.
ಜಾಥಾವು ದುರ್ಗಾಂಬಿಕಾ ದೇವಸ್ಥಾನ, ಹಗೇದಿಬ್ಬ ವೃತ್ತ, ಅರಳೀಮರ ವೃತ್ತ, ಬಂಬೂಬಜಾರ್, ಎಪಿಎಂಸಿ, ಪಿ. ಬಿ. ರಸ್ತೆ, ಕಿತ್ತೂರು ರಾಣಿ ಚನ್ನಮ್ಮ ವೃತ್ತ, ವಿನೋಬನಗರ 2ನೇ ಕ್ರಾಸ್, ಚರ್ಚ್ ರಸ್ತೆ, ಹರಳೆಣ್ಣೆ ಕೊಟ್ರಬಸಪ್ಪ ವೃತ್ತ, ಅಂಬೇಡ್ಕರ್ ವೃತ್ತ, ಶಿವಪ್ಪಯ್ಯ ವೃತ್ತ, ಕೆಟಿಜೆ ನಗರ, ಎಚ್.ಕೆ.ಆರ್ ವೃತ್ತ ಮಾರ್ಗವಾಗಿ ನಿಟುವಳ್ಳಿ ದುರ್ಗಾಂಬಿಕಾ ದೇವಸ್ಥಾನ ಆವರಣಕ್ಕೆ ತೆರಳಿ ಸಮಾಪನೆಗೊಂಡಿತು.
‘ಸ್ವಾಭಿಮಾನದಿಂದ ಮೊಳಗಲಿ ನಾಯಕರ ಹೋರಾಟ ಮುನ್ನಡೆಯಲಿ’ ಎಂಬ ಹಾಡು ಜಾಥಾದುದ್ದಕ್ಕೂ ಮೊಳಗಿತು. ಶ್ವೇತ ವರ್ಣದ ಟಿ ಶರ್ಟ್ ಧರಿಸಿದ್ದ ಯುವಕರು ವಾಲ್ಮೀಕಿ, ಶ್ರೀರಾಮ, ಬೇಡರ ಕಣ್ಣಪ್ಪ, ಮದಕರಿನಾಯಕ, ಸಿಂಧೂರ ಲಕ್ಷ್ಮಣ, ಹಕ್ಕ-ಬುಕ್ಕ ಅವರಿಗೆ ಜೈಕಾರ ಹಾಕುತ್ತ ಸಾಗಿದರು.
ಚಿತ್ರನಟ ಸುದೀಪ್ ಅವರ ಚಿತ್ರಗಳಿದ್ದ ಫಲಕಗಳು ಕೂಡ ರ‌್ಯಾಲಿಯಲ್ಲಿ ಹರಿದಾಡಿದವು. ಜಾಥಾದ ಮುಂಭಾಗದಲ್ಲಿ ಕೆಲ ಮುಖಂಡರು ತೆರೆದ ಜೀಪ್‌ನಲ್ಲಿ ಕುಳಿತು ಸಾಗಿದರು.
ಜಾಥಾದಲ್ಲಿ ಜಿಲ್ಲಾ ವಾಲ್ಮೀಕಿ ಯುವ ಘಟಕದ ಅಧ್ಯಕ್ಷ ಬಸವರಾಜ ತೋಟದ, ಯುವ ಘಟಕದ ಸಂಸ್ಥಾಪಕ ಸದಸ್ಯ ಶ್ರೀನಿವಾಸ ದಾಸಕರಿಯಪ್ಪ, ಮುಖಂಡರಾದ ವಿನಾಯಕ ಪೈಲ್ವಾನ್, ಲಕ್ಷ್ಮಣ್ ಕೆಟಿಜೆ ನಗರ, ಶಾಮನೂರು ಪ್ರವೀಣ್, ಪ್ರಶಾಂತ್, ಫಣಿಯಾಪುರ ನಿಂಗರಾಜ್, ಜಗದೀಶ್, ಮಂಜುನಾಥ ಚುಕ್ಕಿ, ಕರೂರು ಹನುಮಂತಪ್ಪ, ಗೋಶಾಲೆ ಸುರೇಶ್, ಹದಡಿ ರಾಜಣ್ಣ, ಅಣ್ಣಪ್ಪ, ಹಾಲೋಳ ದುರುಗೇಶ್, ಎನ್.ಎಚ್. ಹಾಲೇಶ್, ನಾಗರಾಜ ಜಗಳೂರು, ಆವರಗೆರೆ ಪರಶುರಾಂ, ಶಶಿ ಶ್ರೀಕಂಠಪುರ, ಪರಶುರಾಮ ಕೆಟಿಜೆ ನಗರ, ಮಂಜು ಗೊಲ್ಲರಹಳ್ಳಿ, ಮರಾಠ ಸಮಾಜದ ಮುಖಂಡ ಯಶವಂತರಾವ್ ಜಾಧವ್ ಭಾಗವಹಿಸಿದ್ದರು.
---