

ದಾವಣಗೆರೆ: ಭೋವಿ ಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರ 37ನೇ ವರ್ಷದ ಜನ್ಮ ದಿನ ಹಾಗೂ ದೀಕ್ಷಾ ರಜತ ಮಹೋತ್ಸವವನ್ನು ಭೋವಿ ಜನೋತ್ಸವವಾಗಿ ಚಿತ್ರದುರ್ಗದ ಭೋವಿ ಗುರುಪೀಠದ ಆವರಣದಲ್ಲಿ ಜುಲೈ 20 ರಂದು ಆಚರಿಸಲು ಭಾನುವಾರ ನಿರ್ಧರಿಸಲಾಯಿತು.
ನಗರದ ಅಪೂರ್ವ ಹೋಟೆಲ್ ಸಭಾಂಗಣದಲ್ಲಿ ಸೇರಿದ್ದ ಭೋವಿ ಸಮಾಜದ ಮುಖಂಡರು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಆಚರಣೆ ಮಾಡುವ ಬಗ್ಗೆ ಸಭೆ ನಡೆಸಿ ನಿರ್ಣಯಿಸಿದರು.
ಸಭೆಯ ಸಾನ್ನಿಧ್ಯ ವಹಿಸಿದ್ದ ಭೋವಿ ಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ ಕರ್ನಾಟಕವಲ್ಲದೆ ಇತರೆ ರಾಜ್ಯದ ಸಮುದಾಯದ ಮುಖಂಡರು ಭಾಗಿಯಾಗಲಿದ್ದು, ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೃತಿ ಬಿಡುಗಡೆ ಮಾಡಲಿದ್ದಾರೆ ಎಂದರು.
ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಷಿ, ಎಚ್.ಡಿ.ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ವಿ. ಸೋಮಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಮಾಜಿ ಸಚಿವ ಅರವಿಂದ ಲಿಂಬಾವಳಿ ಹಾಗೂ ಹಾಲಿ, ಮಾಜಿ ಜನಪ್ರತಿನಿಧಿಗಳು ಭಾಗಿಯಾಗುವರು ಎಂದು ತಿಳಿಸಿದರು.
ಮಂತ್ರಾಲಯದ ಸುಭುದೇಂದ್ರ ತೀರ್ಥರು, ಕನಕ ಗುರುಪೀಠದ ಜಗದ್ಗುರು, ಹಿಂದುಳಿದ ದಲಿತ ಮಠಾಧೀಶರು ಸೇರಿ ರಾಜ್ಯದ ವಿವಿಧ ಮಠಾಧೀಶರ ಸಾನಿಧ್ಯದಲ್ಲಿ ಅಂದು ಬೆಳಗ್ಗೆ ಧರ್ಮ ಸಂಸತ್ತು ಜರುಗಲಿದೆ. ಇದೇ ವೇಳೆ ಎಸ್ಸೆಸ್ಸೆಲ್ಸಿ-ಪಿಯುನ ಪ್ರತಿಭಾನ್ವಿತರಿಗೆ ಪ್ರತಿಭಾ ಪುರಸ್ಕಾರ, ಯುಪಿಎಸ್‌ಸಿ ಸಾಧಕರಿಗೆ ಸನ್ಮಾನ, ರಕ್ತದಾನ ಮತ್ತು ಆರೋಗ್ಯ ಶಿಬಿರ, ವಧು-ವರರ ಸಮಾವೇಶವನ್ನೂ ಸಂಘಟಿಸಲಾಗುತ್ತಿದೆ. ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು.
ಶ್ರಮಿಕ ಸಮಾಜ ಹಿಂದಿನಿಂದಲೂ ಮೌಢ್ಯ- ಕಂದಾಚಾರದಿಂದಾಗಿ ಅತಿ ಶೋಷಣೆಗೆ ಒಳಗಾಗುತ್ತಿದೆ. ಹಿಂದುಳಿದ ಭೋವಿ ಸಮಾಜ ಕೂಡ 1999ರಲ್ಲಿ ಧಾರ್ಮಿಕವಾಗಿ ಚೇತರಿಸಿಕೊಂಡು ಬೆಳೆಯುತ್ತ ಬಂದಿದೆ. ಅಭಿವೃದ್ಧಿ ದೃಷ್ಟಿಕೋನದಡಿ ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸಲಾಗಿದೆ. ಸಮಾಜದ ಕಾರ್ಯಕ್ರಮ ನಡೆದರೆ ಹೆಚ್ಚು ಜನರು ಸೇರುವಂತಹ ಸಾಮಾಜಿಕ ಜಾಗೃತಿ ಮೂಡಿದೆ. ಸಮಾಜದ ರಾಜ್ಯಾದ್ಯಂತ ಸಂಘಟನೆ ಆಗುತ್ತಿದೆ ಎಂದರು.
ಸಮಸಮಾಜದ ಬದುಕಿಗಾಗಿ ನಾವು ಪ್ರಜ್ಞಾವಂತರಾಗಬೇಕಿದೆ. ಆಯಾ ಕಾಲಕ್ಕನುಸಾರ ಹಕ್ಕುಗಳಿಗಾಗಿ ಸಮಾವೇಶ ನಡೆಸುವ ಮೂಲಕ ರಾಜಕಾರಣಿಗಳನ್ನು ಸ್ಥಾನಮಾನದ ಮೂಲಕ ದಡ ಸೇರಿಸಲಾಗಿದೆ ಎಂದ ಶ್ರೀಗಳು, ಜು. 20ರಂದು ನಡೆಯುವ ಭೋವಿ ಜನೋತ್ಸವವು ಸಮಾಜದ ಮುಂದಿನ ದಿಕ್ಸೂಚಿ ಆಗಲಿದೆ ಎಂದರು. ಸಮಾಜದ ಮುಖಂಡರು ಗೊಂದಲ ಬದಿಗಿಟ್ಟು ಸಂಘಟನೆ ದೃಷ್ಟಿಯಿಂದ ಲೋಪಗಳನ್ನು ಸರಿಪಡಿಸಿಕೊಳ್ಳಬೇಕು ಎಂದೂ ಕಿವಿಮಾತು ಹೇಳಿದರು.
ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್ ಮಾತನಾಡಿ ಸಮಾಜದ ಬಲವರ್ಧನೆಗಾಗಿ ಸ್ವಾಮೀಜಿ ಅವರೊಂದಿಗೆ ತಾವೂ ರಾಜ್ಯವ್ಯಾಪಿ ಪ್ರವಾಸ ಮಾಡುತ್ತಿದ್ದೇವೆ. ಕಾರ್ಯಕ್ರಮ ಆಚರಣೆ ಸಂಬಂಧ ಬೆಂಗಳೂರಲ್ಲಿ ಸಚಿವರೊಂದಿಗೆ ಸಭೆ ನಡೆಸಿ ರೂಪರೇಷೆ ನಿರ್ಧರಿಸಲಾಗಿದೆ. ಸಿದ್ದರಾಮೇಶ್ವರ ಸ್ವಾಮೀಜಿ ಅವರು 25 ವರ್ಷದಿಂದ ಸಮಾಜವನ್ನು ಕಟ್ಟಿ ಬೆಳೆಸುತ್ತಿದ್ದಾರೆ. ಅವರ ಶಕ್ತಿ ಬಲಪಡಿಸಿ, ಮಠವನ್ನು ಮತ್ತಷ್ಟು ಬೆಳೆಸೋಣ ಎಂದರು.
ಕೆಪಿಸಿಸಿ ವಕ್ತಾರ ಡಿ.ಬಸವರಾಜ್ ಮಾತನಾಡಿ 25 ವರ್ಷದ ಹಿಂದೆ ಭೋವಿ ಗುರುಪೀಠ ಸ್ಥಾಪನೆಯಾಗಿದ್ದು ದಾವಣಗೆರೆಗೆ ಹೆಮ್ಮೆ ತರುವ ವಿಚಾರ. ಸಿದ್ದರಾಮೇಶ್ವರ ಸ್ವಾಮೀಜಿ ಅವರು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ಎಲ್ಲ ರಂಗದಲ್ಲಿ ಸಮಾಜ ಗುರುತಿಸುವಷ್ಟರ ಮಟ್ಟಿಗೆ ಸಮಾಜವನ್ನು ಸಂಘಟಿಸಿದ್ದಾರೆ. ಮಠ ಸಾಮಾಜಿಕ ಪ್ರಜ್ಞೆ ಮೂಡಿಸಿದೆ ಎಂದು ಸ್ಮರಿಸಿದರು.
ಭೋವಿ ಸಮಾಜದ ಜಿಲ್ಲಾಧ್ಯಕ್ಷ ಎಚ್. ಜಯಣ್ಣ ಮಾತನಾಡಿ ಭೋವಿ ಜನೋತ್ಸವ ಕಾರ್ಯಕ್ರಮ ಕೇವಲ ಚಿತ್ರದುರ್ಗದಲ್ಲಿ ನಡೆದರೆ ಸಾಲದು. ಪ್ರತಿ ವರ್ಷ ಬೇರೆ ಜಿಲ್ಲೆಗಳಲ್ಲಿ ನಡೆಸಬೇಕು. ತರಳಬಾಳು ಉತ್ಸವದ ಮಾದರಿಯಲ್ಲಿ ಆಯೋಜಿಸಿ ಬಂದ ದೇಣಿಗೆ ಹಣದಲ್ಲಿ ಕಾರ್ಯಕ್ರಮ ಆಯೋಜಿಸುವ ಸ್ಥಳದಲ್ಲೇ ಸಮಾಜದ ಹಾಸ್ಟೆಲ್, ಶಾಲೆ, ಸಮುದಾಯ ಭವನ ನಿರ್ಮಾಣ ಆದಲ್ಲಿ ಅರ್ಥಪೂರ್ಣವಾಗಲಿದೆ ಎಂದು ಸಲಹೆ ನೀಡಿದರು.
ಸಭೆಯಲ್ಲಿ ಭೋವಿ ಸಮಾಜದ ಜಿಲ್ಲಾ ಗೌರವಾಧ್ಯಕ್ಷ ಬಿ.ಟಿ.ಸಿದ್ದಪ್ಪ, ಮುಖಂಡ ಬಿ.ಎಸ್.ಶ್ಯಾಮ್, ಚನ್ನಗಿರಿ ತಾಲೂಕು ಅಧ್ಯಕ್ಷ ರಾಜಪ್ಪ, ಜಗಳೂರು ತಾಲೂಕು ಅಧ್ಯಕ್ಷ ಅರ್ಜುನ್, ಹರಿಹರ ತಾಲೂಕು ಅಧ್ಯಕ್ಷ ವೀರಭದ್ರಪ್ಪ, ಹೊನ್ನಾಳಿ ತಾಲೂಕು ಉಪಾಧ್ಯಕ್ಷ ಚಂದ್ರಪ್ಪ, ಬೆಂಕಿಕೆರೆ ಹನುಮಂತಪ್ಪ, ಶ್ರೀನಿವಾಸ್, ಮಂಜುನಾಥ್ ಇತರರಿದ್ದರು.