ಆ.1ರಂದು ದಾವಣಗೆರೆಯಲ್ಲಿ ಸಿದ್ಧರಾಮೇಶ್ವರ ರಥದ ವಜ್ರ ಮಹೋತ್ಸವ

BHOVI SWAMI
Published on

ದಾವಣಗೆರೆ: ಭೋವಿ ಗುರು ಪೀಠದಿಂದ ಶಿವಯೋಗಿ ಸಿದ್ಧರಾಮೇಶ್ವರ ದೇವರ ರಥದ ವಜ್ರ ಮಹೋತ್ಸವ (60ನೇ ರಥೋತ್ಸವ) ಹಾಗೂ ಸಿದ್ಧರಾಮೇಶ್ವರ ಸ್ವಾಮೀಜಿ ಅವರ 20ನೇ ಸಂಸ್ಮರಣೋತ್ಸವ ಆ. 1 ರಂದು ನಡೆಯಲಿದೆ ಎಂದು ಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇದು ಜಾತ್ಯತೀತ ಕಾರ್ಯಕ್ರಮವಾಗಿದ್ದು, ಭಾರತೀಯ ಸಂಸ್ಕೃತಿಯನ್ನು ಅನಾವರಣ ಮಾಡಲಾಗುವುದು. ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸಲಿದ್ದಾರೆ. ಇದೊಂದು ಧಾರ್ಮಿಕ ದಿಕ್ಸೂಚಿಯಾಗಲಿದೆ ಎಂದು ಹೇಳಿದರು.

ಅಂದು ಅರಳಿ ಮರದ ಸರ್ಕಲ್ ಬಳಿ ಸಿದ್ಧರಾಮೇಶ್ವರ ದೇವರ ರಥದ ವಜ್ರ ಮಹೋತ್ಸವಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ಚಾಮರಾಜ ವೃತ್ತದಲ್ಲಿ ಕೊರಟಿಗೆರೆ ಮುನಿಯಪ್ಪ ಹೆಲಿಕಾಪ್ಟರ್ ಮೂಲಕ ರಥಕ್ಕೆ ಪುಷ್ಪವೃಷ್ಟಿ ಮಾಡುವರು. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ 60 ಶರಣರ ಸ್ತಬ್ಧ ಚಿತ್ರಗಳ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.

ರಥೋತ್ಸವದಲ್ಲಿ ಗಜದಳ, ಅಶ್ವದಳಗಳ ಜತೆಗೆ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಒಡಿಶಾ, ಮಧ್ಯಪ್ರದೇಶ, ಹರಿಯಾಣ, ಮೇಘಾಲಯ, ಪಂಜಾಬ್, ಗುಜರಾತ್, ಪಾಂಡಿಚೇರಿ ಸೇರಿ 20 ರಾಜ್ಯಗಳ ಜಾನಪದ ಕಲಾತಂಡಗಳು, ಕುಂಭಮೇಳದಲ್ಲಿ 25 ಸಾವಿರ ಮಹಿಳೆಯರು ಭಾಗವಹಿಸುವರು ಎಂದರು.

ಚಿತ್ರದುರ್ಗ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು, ಹಿಂದುಳಿದ ದಲಿತ ಮಠಾಧೀಶರ ಒಕ್ಕೂಟದ ಅಧ್ಯಕ್ಷರಾದ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಕುಂಚಿಟಿಗ ಗುರುಪೀಠದ ಶಾಂತವೀರ ಸ್ವಾಮೀಜಿ, ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸೇರಿ 100 ಕ್ಕೂ ಹೆಚ್ಚು ಮಠಾಧಿಪತಿಗಳು ಸಾನ್ನಿಧ್ಯ ವಹಿಸಲಿದ್ದಾರೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net