

ದಾವಣಗೆರೆ: ಮಲೆನಾಡಿನಲ್ಲಿ ಈ ಬಾರಿ ಉತ್ತಮ ಮಳೆಯಾಗಿದ್ದು, ಭದ್ರಾ ಜಲಾಶಯ ಭರ್ತಿಯಾಗಿದೆ. ಈ ವರ್ಷ ರೈತರಿಗೆ ಎರಡು ಬೆಳೆಗೆ ನೀರು ಸಿಗುವುದು ಖಾತ್ರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ತಿಳಿಸಿದರು.
ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಮಲವಗೊಪ್ಪದಲ್ಲಿ ಭಾನುವಾರ ಭದ್ರಾ ಜಲಾಶಯಕ್ಕೆ ತೆರಳಿ ಬಾಗಿನ ಅರ್ಪಿಸಿ ಸುದ್ದಿಗಾರರ ಜತೆ ಮಾತನಾಡಿದರು.
ಕಳೆದ ಬಾರಿ ನೀರಿನ ಲಭ್ಯತೆ ಇಲ್ಲದ್ದರಿಂದ ಒಂದು ಬೆಳೆಗೆ ನೀರು ಹರಿಸಲಾಗಿತ್ತು. ಈ ಬಾರಿ ಹೆಚ್ಚಿನ ನೀರು ಸಂಗ್ರಹಣೆಯಾಗಿದ್ದರಿಂದ ಆತಂಕವಿಲ್ಲ. ಶಿವಮೊಗ್ಗ, ದಾವಣಗೆರೆ ಜಿಲ್ಲೆ ಹಾಗೂ ಹರಪನಹಳ್ಳಿಗೆ ಸಂಪನ್ಮೂಲವಾಗಿರುವ ಭದ್ರಾ ನೀರಿನಿಂದ ರೈತರಿಗೆ ಒಳಿತಾಗಲಿ. ಈ ವರ್ಷ ಉತ್ತಮ ಇಳುವರಿಯಾಗಿ ಯೋಗ್ಯ ಬೆಳೆ ಕಾಣುವಂತಾಗಲಿ ಎಂದು ಆಶಿಸಿದರು.
ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ ಈ ವರ್ಷ ರಾಜ್ಯಾದ್ಯಂತ ಉತ್ತಮ ಮಳೆಯಾಗಿದ್ದು ಜಲಾಶಯಗಳು ಭರ್ತಿಯಾಗಿವೆ. ಪ್ರತಿ ವರ್ಷವೂ ಇದೇ ರೀತಿಯ ಸಮೃದ್ಧತೆ ಕಾಣುವಂತಾಗಲಿ. ಅನ್ನದಾತರು ಸುಖವಾಗಿರುವ ಜತೆಗೆ ಎಲ್ಲರಲ್ಲೂ ಸಂತೋಷ ಮೂಡಲಿ ಎಂದರು.
ಸಚಿವರು, ಸಂಸದರು ಹಾಗೂ ಇತರ ಜನಪ್ರತಿನಿಧಿಗಳು ಹಸಿರು ಶಾಲು ಧರಿಸಿ ಬಾಗಿನ ಅರ್ಪಿಸಿದ್ದು ವಿಶೇಷವಾಗಿತ್ತು. ಸಚಿವ ಮಲ್ಲಿಕಾರ್ಜುನ್ ಅವರ ಪುತ್ರ ಸಮರ್ಥ್, ಪುತ್ರಿ ಶ್ರೇಷ್ಠಾ, ಶಾಸಕರಾದ ಡಿ.ಜಿ.ಶಾಂತನಗೌಡ, ಕೆ.ಎಸ್.ಬಸವಂತಪ್ಪ, ಬಸವರಾಜ್ ವಿ.ಶಿವಗಂಗಾ, ಲತಾ ಮಲ್ಲಿಕಾರ್ಜುನ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ, ಮುಖಂಡರು ಬಾಗಿನ ಸಲ್ಲಿಸಿದರು. ಜಿಲ್ಲೆಯ ವಿವಿಧ ಭಾಗಗಳಿಂದ ತೆರಳಿದ್ದ ಕಾರ್ಯಕರ್ತರು, ರೈತರು ಕಣ್ತುಂಬಿಕೊಂಡರು.
ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್, ಜಿಪಂ ಸಿಇಒ ಸುರೇಶ್ ಬಿ.ಇಟ್ನಾಳ್, ಭದ್ರಾ ಅಧೀಕ್ಷಕ ಇಂಜಿನಿಯರ್ ಸುಜಾತಾ ಭಾಗಿಯಾಗಿದ್ದರು.
ಸಿಎಂ ರಾಜೀನಾಮೆ ನೀಡಲ್ಲ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಪ್ಪೇ ಮಾಡಿಲ್ಲ. ಹೀಗಿರುವಾಗ ರಾಜೀನಾಮೆ ನೀಡುವ ಮಾತಿಲ್ಲ ಎಂದು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಇದೇ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ವಿಪಕ್ಷಗಳ ಷಡ್ಯಂತ್ರ. ಈ ವಿಚಾರದಲ್ಲಿ ನಾವು ಸಿಎಂ ಜತೆಗಿದ್ದೇವೆ. ಅವರು ಅಂಜಬೇಕಿಲ್ಲ ಎಂದರು. ಇದೇ ವಿಚಾರವಾಗಿ ಕಾಂಗ್ರೆಸ್‌ನಿಂದ ಸೋಮವಾರ ರಾಜ್ಯವ್ಯಾಪಿ ಪ್ರತಿಭಟನೆ ಆಯೋಜಿಸಲಾಗಿದೆ ಎಂದೂ ತಿಳಿಸಿದರು.
------