ಬಾಸ್ಕೆಟ್‌ಬಾಲ್ ಪಂದ್ಯಾವಳಿಗೆ ಚಾಲನೆ ಆತಿಥೇಯರು ಉಪಾಂತ್ಯಕ್ಕೆ

1000528031.jpg
Published on

ದಾವಣಗೆರೆ: ಪದವಿ ಕಾಲೇಜುಗಳ ರಾಜ್ಯ ಮಟ್ಟದ ಬಾಸ್ಕೆಟ್‌ಬಾಲ್ ಪಂದ್ಯಾವಳಿ, ಜಿ.ಮಲ್ಲಿಕಾರ್ಜುನಪ್ಪ ಮೆಮೋರಿಯಲ್ ಕಪ್‌ಗೆ ನಗರದ ಜಿಎಂಐಟಿ ಕಾಲೇಜು ಮೈದಾನದಲ್ಲಿ ಶುಕ್ರವಾರ ಚಾಲನೆ ದೊರೆಯಿತು.
ದಾವಣಗೆರೆ ಅಲ್ಲದೆ ಹಾಸನ, ಮೈಸೂರು, ಧಾರವಾಡ, ಮಡಿಕೇರಿ ಸೇರಿ ವಿವಿಧ ಜಿಲ್ಲೆಗಳಿಂದ ವೈದ್ಯಕೀಯ, ಇಂಜಿನಿಯರಿಂಗ್, ದಂತ ವೈದ್ಯಕೀಯ ಒಳಗೊಂಡಂತೆ ಪುರುಷರ 12 ಹಾಗೂ ಮಹಿಳೆಯರ 6 ತಂಡಗಳಿಂದ 200 ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ.
ಜಿ.ಎಂ. ವಿಶ್ವವಿದ್ಯಾಲಯದ ವಿದ್ಯಾರ್ಥಿ ವ್ಯವಹಾರಗಳ ನಿರ್ದೇಶನಾಲಯ ಹಾಗೂ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ವತಿಯಿಂದ ಟೂರ್ನಿ ಆಯೋಜಿಸಲಾಗಿದೆ. ಹೊನಲು -ಬೆಳಕಿನಾಟದ ಮಧ್ಯೆ ಕ್ರೀಡಾಳುಗಳು ಲೀಗ್ ಹಂತದ ಪಂದ್ಯಗಳಲ್ಲಿ ತಮ್ಮ ಆಟದ ಚಾಕಚಕ್ಯತೆ ಪ್ರದರ್ಶಿಸಿದರು.
ಜಿಎಂ ವಿವಿ ಕುಲಪತಿ ಡಾ.ಎಸ್.ಆರ್.ಶಂಕಪಾಲ್ ಅವರು ಬಾಸ್ಕೆಟ್‌ನತ್ತ ಚೆಂಡೆಸೆಯುವ ಮೂಲಕ ಪಂದ್ಯಾವಳಿ ಉದ್ಘಾಟಿಸಿದರು. ಪಠ್ಯ- ಪಠ್ಯೇತರ ಚಟುವಟಿಕೆಗಳು ಒಂದು ನಾಣ್ಯದ ಎರಡು ಮುಖಗಳು. ಶಿಕ್ಷಣದ ಜತೆಯಲ್ಲೇ ಪಠ್ಯೇತರ ಕಾರ್ಯಕ್ರಮ, ಕ್ರೀಡೆಗಳಲ್ಲೂ ಭಾಗಿಯಾಗಿ ಪ್ರತಿಭೆ ಪ್ರದರ್ಶಿಸಬೇಕು. ಆಯಾ ರಂಗಲ್ಲೂ ಸಾಧನೆ ಮಾಡಬೇಕು ಎಂದು ಹೇಳಿದರು.
ಸಂಶೋಧನೆ ವಿಭಾಗದ ಡೀನ್ ಡಾ. ಕೆ.ಎನ್. ಭರತ್, ವಿದ್ಯಾರ್ಥಿ ವ್ಯವಹಾರಗಳ ನಿರ್ದೇಶನಾಲಯದ ನಿರ್ದೇಶಕ ಡಾ. ಎಚ್.ಎಸ್. ಕಿರಣ್ ಕುಮಾರ್, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ನಿರ್ದೇಶಕ ಜಿ.ಬಿ. ಅಜ್ಜಯ್ಯ ಇತರರಿದ್ದರು.  

ಆತಿಥೇಯ ಜಿ. ಎಂ. ವಿಶ್ವವಿದ್ಯಾಲಯ, ಜೆಜೆಎಂ ವೈದ್ಯಕೀಯ ಕಾಲೇಜು, ಎಸ್ ಎಸ್ ಸಂಶೋಧನಾ ಕೇಂದ್ರ ಹಾಗೂ ಕೊಡಗಿನ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪುರುಷರ ತಂಡಗಳು ರಾಜ್ಯ ಬಾಸ್ಕೆಟ್ ಬಾಲ್ ಟೂರ್ನಿಯಲ್ಲಿ ಸೆಮಿಫೖನಲ್ ಗೆ ಪ್ರವೇಶಿಸಿವೆ.
ಮೖಸೂರಿನ ವಿವಿಸಿಇ, ದಾವಣಗೆರೆಯ ಬಿಐಇಟಿ ಕಾಲೇಜು, ಜಿ. ಎಂ. ವಿವಿ, ಎಸ್ ಎಸ್ ಐ ಎಂ. ಎಸ್ ಕಾಲೇಜು ಮಹಿಳಾ ತಂಡಗಳು ಕ್ವಾರ್ಟರ್ ಹಂತಕ್ಕೆ ಪ್ರವೇಶ ಪಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net