ಇಂದಿನಿಂದ ರಾಜ್ಯ ಬ್ಯಾಸ್ಕೆಟ್‌ಬಾಲ್ ಪಂದ್ಯಾವಳಿ

1000526877.jpg
Published on

ದಾವಣಗೆರೆ: ನಗರದ ಜಿಎಂ ವಿಶ್ವವಿದ್ಯಾಲಯ ಮೈದಾನದಲ್ಲಿ ನ. 29, 30ರಂದು ಜಿ.ಮಲ್ಲಿಕಾರ್ಜುನಪ್ಪ ಮೆಮೋರಿಯಲ್ ಕಪ್-ಪದವಿ ಕಾಲೇಜುಗಳ ರಾಜ್ಯ ಮಟ್ಟದ ಹೊನಲು-ಬೆಳಕಿನ ಬ್ಯಾಸ್ಕೆಟ್‌ಬಾಲ್ ಪಂದ್ಯಾವಳಿ ನಡೆಯಲಿದೆ.
ಜಿ.ಎಂ. ವಿಶ್ವವಿದ್ಯಾಲಯದ ವಿದ್ಯಾರ್ಥಿ ವ್ಯವಹಾರಗಳ ನಿರ್ದೇಶನಾಲಯ ಹಾಗೂ ದೈಹಿಕ ಶಿಕ್ಷಣ- ಕ್ರೀಡಾ ವಿಭಾಗದ ವತಿಯಿಂದ ಈ ಟೂರ್ನಿ ಆಯೋಜಿಸಲಾಗಿದೆ ಎಂದು ನಿರ್ದೇಶನಾಲಯದ ನಿರ್ದೇಶಕ ಡಾ.ಎಚ್.ಎಸ್. ಕಿರಣ್‌ಕುಮಾರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ದಾವಣಗೆರೆ, ಹಾಸನ, ಮೈಸೂರು, ಧಾರವಾಡ, ಮಡಿಕೇರಿ ಸೇರಿ ವಿವಿಧ ಜಿಲ್ಲೆಗಳಿಂದ ವೈದ್ಯಕೀಯ, ಇಂಜಿನಿಯರಿಂಗ್, ದಂತ ವೈದ್ಯಕೀಯ ಸೇರಿದಂತೆ ಎಲ್ಲ ಪದವಿ ಕಾಲೇಜುಗಳಿಂದ ಪುರುಷ, ಮಹಿಳೆಯರ ವಿಭಾಗದ ಸುಮಾರು 30 ತಂಡಗಳು ಭಾಗವಹಿಸಲಿವೆ. ಸ್ಥಳದಲ್ಲೇ ನೊಂದಣಿಗೆ ಅವಕಾಶ ನೀಡಲಾಗಿದೆ ಎಂದು ಹೇಳಿದರು.
ವಿಜೇತ ಪುರುಷ ತಂಡಕ್ಕೆ ಪ್ರಥಮ ಬಹುಮಾನವಾಗಿ 20 ಸಾವಿರ ನಗದು, ಆಕರ್ಷಕ ಪಾರಿತೋಷಕ, ದ್ವಿತೀಯ ಬಹುಮಾನವಾಗಿ 10 ಸಾವಿರ ನಗದು, ಆಕರ್ಷಕ ಪಾರಿತೋಷಕವಿದೆ. ಮಹಿಳಾ ತಂಡಕ್ಕೆ ಕ್ರಮವಾಗಿ 10 ಸಾವಿರ ನಗದು, 7500 ನಗದು ಹಾಗೂ ಟ್ರೋಫಿ ನೀಡಲಾಗುವುದು ಎಂದು ತಿಳಿಸಿದರು.
ಜಿಎಂ ವಿವಿ ಕುಲಪತಿ ಡಾ. ಎಸ್.ಆರ್. ಶಂಕಪಾಲ್, ನ. 29ರಂದು ಬೆಳಗ್ಗೆ 10 ಗಂಟೆಗೆ ಟೂರ್ನಿಗೆ ಚಾಲನೆ ನೀಡುವರು. ಸಹ ಕುಲಪತಿ ಡಾ. ಎಚ್.ಡಿ. ಮಹೇಶಪ್ಪ, ಕುಲಸಚಿವ ಡಾ. ಬಿ.ಎಸ್. ಸುನಿಲ್ ಕುಮಾರ್, ಸಂಶೋಧನೆ ವಿಭಾಗದ ಡೀನ್ ಡಾ. ಕೆ.ಎನ್. ಭರತ್, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ನಿರ್ದೇಶಕ ಜಿ.ಬಿ. ಅಜಯ್ಯ ಹಾಗೂ ಪ್ರಾಚಾರ್ಯರು,  ವಿವಿಧ ವಿಭಾಗಗಳ ಮುಖ್ಯಸ್ಥರು ಭಾಗವಹಿಸುವರು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಎಂ ವಿವಿ ಸಂಶೋಧನೆ ವಿಭಾಗದ ಡೀನ್ ಡಾ. ಕೆ.ಎನ್. ಭರತ್, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ನಿರ್ದೇಶಕ ಜಿ.ಬಿ. ಅಜ್ಜಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net