ಹೆಣ್ಣುಮಕ್ಕಳನ್ನು 'ಅಕ್ಕ'ನಂತೆ ಬೆಳೆಸಿ

1000916086.jpg
Published on
ದಾವಣಗೆರೆ: ಜಗತ್ತನ್ನು ಸರಿದಾರಿಗೆ ತರಲು ಕೆಲವರ ಅಗತ್ಯವಿದೆ. ಹೀಗಾಗಿ ಕುಟುಂಬದ ಕೆಲವು ಹೆಣ್ಣುಮಕ್ಕಳನ್ನಾದರೂ ಅಕ್ಕಮಹಾದೇವಿ ಅವರಂತೆ ಬೆಳೆಸಬೇಕು ಎಂದು ಪ್ರಜಾಪಿತ ಈಶ್ವರೀಯ ವಿವಿಯ ದಾವಣಗೆರೆ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ಆಶಯ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು, ವಚನ ಸಾಹಿತ್ಯ ಪರಿಷತ್ತು, ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ, ತೆಲಿಗಿಯ ಸ್ಫೂರ್ತಿ ಪ್ರಕಾಶನ, ಯೋಗಾನಂದ ಯೋಗ ಕೇಂದ್ರದ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಗಜ್ಯೋತಿ ಬಸವೇಶ್ವರರ ಜಯಂತ್ಯುತ್ಸವದಲ್ಲಿ ಮಾತನಾಡಿದರು. ಅಕ್ಕಮಹಾದೇವಿ ಜಯಂತಿ ಆಚರಿಸುವ ತಾಯಂದಿರು, ತಮ್ಮ ಹೆಣ್ಣುಮಕ್ಕಳು ಕೂಡ ಅಕ್ಕನಂತೆ ಆಧ್ಯಾತ್ಮಿಕ ಅನುಭಾವಿಗಳನ್ನಾಗಿ ಮಾಡುತ್ತಿಲ್ಲ. ಮದುವೆ ಮಾಡಿ ಜವಾಬ್ದಾರಿ ನಿಭಾಯಿಸುವ ಯೋಚನೆ ಮಾಡುತ್ತಿದ್ದಾರೆ. ಬ್ರಹ್ಮಾಕುಮಾರಿ ಸಂಸ್ಥೆಯಲ್ಲಿ 15 ಸಾವಿರ ಸೇವಾಕರ್ತೆಯರಿದ್ದಾರೆ. ಹೀಗಾಗಲು ಹೆಣ್ಣುಮಕ್ಕಳಲ್ಲಿ ಅಕ್ಕನ ಧೈರ್ಯ ತುಂಬಬೇಕು ಎಂದು ಕಿವಿಮಾತು ಹೇಳಿದರು. ಮಹಾತ್ಮರ ಜಯಂತಿ ಆಚರಣೆಗೆ ಸೀಮಿತವಾಗಿದೆ. ಅವರ ಆದರ್ಶ, ಉಪದೇಶಗಳು ಪಾಲನೆಯಾಗುತ್ತಿಲ್ಲ. ಶಿವಶರಣರ ವಚನಗಳನ್ನು ಓದುತ್ತಿದ್ದೇವೆ, ಅದರಂತೆ ನಡೆಯುತ್ತಿಲ್ಲ. ವಚನಗಳನ್ನು ಆಚರಣೆಗೆ ತಂದರೆ ಜೀವನದಲ್ಲಿ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದು ಹೇಳಿದರು. ಬಸವಣ್ಣನವರ ಕಳಬೇಡ ಎಂಬ ಒಂದು ವಚನ ಅರ್ಥ ಮಾಡಿಕೊಂಡರೂ ಉತ್ತಮ ಬದುಕು ನಡೆಸಬಹುದು. ಆದರೆ ಬಸವಣ್ಣನವರ ವಚನ ಹೇಳುವ ಕೆಲವರು ಸುಳ್ಳು, ಮೋಸ, ಅನಾಚಾರ ಮಾಡುತ್ತಿದ್ದಾರೆ. ಶೇ.50ರಷ್ಟು ವಚನ ಧಾರಣೆ ಮಾಡಿಕೊಂಡು ಎಲ್ಲರೂ ಬಸವಣ್ಣ ಅವರಂತಾದರೆ ವಿಶ್ವವೇ ಸ್ವರ್ಗ ಆಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಭಾರತ ದೇಶ ದೇವದೇವತೆಗಳು ವಾಸಿಸಿದ ದೇವಭೂಮಿ, ತಪಸ್ವಿಗಳು ಸಾಧನೆ ಮಾಡಿದ ತಪೋಭೂಮಿ, ಮಹಾತ್ಮರು ಆದರ್ಶ ಬಿಟ್ಟುಹೋದ ಮಹಾನ್‌ಭೂಮಿ. ಹೀಗಾಗಿ ಬೇರಾವ ದೇಶಗಳೂ ಮಾಡದಷ್ಟು, ಯಾವ ಧರ್ಮೀಯರೂ ಮಾಡದಷ್ಟು ಮಹಾತ್ಮರ ಜಯಂತಿ ಆಚರಣೆ ಮಾಡುತ್ತಿದ್ದೇವೆ. ಇದೇ ರೀತಿ ಸುಂದರವಾದ ಕರ್ನಾಟಕ ಸಮಾನ ಹವಾಗುಣ, ಸಮೃದ್ಧಿ ಹೊಂದಿದೆ. ಇಲ್ಲಿ ಹುಟ್ಟಿದ ನಾವೇ ಧನ್ಯರು ಎಂದು ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ, 12ನೇ ಶತಮಾನದಲ್ಲಿ ಸ್ತ್ರೀಯರಿಗೆ ಸಮಾನತೆ ನೀಡಿ,ವಚನ ಚಳವಳಿ ನಡೆಸಿ, ಇಂದಿನ ಸಂಸತ್ತಿನ ಪ್ರತಿಬಿಂಬವನ್ನು ಅಂದೇ ರೂಪಿಸಿದ್ದ ಬಸವಣ್ಣನವರು ವಿಶ್ವಮಾನ್ಯರು.ರಾಜ್ಯ ಸರ್ಕಾರ ಕೂಡ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಗುರುತಿಸಿದೆ ಎಂದು ಹೇಳಿದರು. ತಮಿಳಿನ ಚಿತ್ರನಟ ಕಮಲ್‌ಹಾಸನ್ ಜನಪ್ರಿಯತೆ, ಪ್ರಚಾರಕ್ಕಾಗಿ ಕನ್ನಡವಿರೋಧಿ ಹೇಳಿಕೆ ನೀಡಿದ್ದಾರೆ. ಕನ್ನಡ ದ್ರಾವಿಡ ಭಾಷೆಗಳಲ್ಲಿ ಒಂದು. ವಾಕ್ ಸ್ವಾತಂತ್ರೃದ ಹೆಸರಲ್ಲಿ ಒಂದು ಭಾಷೆಯನ್ನು ಹೀಯಾಳಿಸುವುದು ಸರಿಯಲ್ಲ. ಕನ್ನಡಿಗರನ್ನು ಕೆಣಕುವುದು ಕಟ್ಟಿದ ಸಿಂಹವನ್ನು ಕೆಣಕಿದಂತೆ ಎಂಬ ಕಪ್ಪೆ ಅರಭಟ್ಟನ ಶಾಸನವನ್ನು ಈ ನಟ ಓದಿದಂತಿಲ್ಲ ಎಂದು ಕಿರಿ ಕಾರಿದರು. ದೇಶವ್ಯಾಪಿ ಪ್ರಚಾರ ಪಡೆಯುವ ಕಾರಣಕ್ಕೆ, ವಿವಾದಿತ ಹೇಳಿಕೆ ಹಿನ್ನೆಲೆಯಲ್ಲಿ ಕ್ಷಮೆ ಕೇಳುತ್ತಿಲ್ಲ. ಕ್ಷಮೆ ಯಾಚಿಸಲು ಕನ್ನಡಪರ ಸಂಘಟನೆಗಳು ಜೂ.2ರವರೆಗೆ ಗಡುವು ನೀಡಿವೆ. ಈ ನಟನ ಸಿನಿಮಾ ಬಹಿಷ್ಕರಿಸಲು ಸರ್ಕಾರ ತೀರ್ಮಾನಿಸಿದೆ. ಈತನ ಹೇಳಿಕೆ ಖಂಡಿಸಬೇಕಾದ ಕನ್ನಡದ ಕಲಾವಿದರಾದ ಶಿವರಾಜ್‌ಕುಮಾರ್, ರಮ್ಯಾ ಕೂಡ ಸಮರ್ಥಿಸಿಕೊಳ್ಳುವುದು ಸರಿಯಲ್ಲ ಎಂದೂ ಅಸಮಾಧಾನ ವ್ಯಕ್ತಪಡಿಸಿದರು. ಇದೇ ವೇಳೆ ಬೆಳಗೆರೆಯ ಸಾಹಿತಿ ನಾ.ರ. ಸುತ ಪುಟ್ಟಣ್ಣ ಅವರಿಗೆ ವಿಶ್ವಗುರು ಬಸವಶ್ರೀ ಪ್ರಶಸ್ತಿ ಹಾಗೂ ಕೋಲಾರದ ಮಾಜಿ ಯೋಧ ಪಿ. ನಾರಾಯಣಪ್ಪ ಅವರಿಗೆ ವೀರಸೇನಾನಿ ಸೇನಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಎಚ್. ರಾಜಶೇಖರ ಗುಂಡಗಟ್ಟಿ, ಕಾರ್ಯದರ್ಶಿ ಕೆ.ಪಿ. ತಾರೇಶ್ ಅಣಬೇರು, ಸ್ಪೂರ್ತಿ ಪ್ರಕಾಶನ ಅಧ್ಯಕ್ಷ ಎಂ. ಬಸವರಾಜ್, ಯೋಗ ಶಿಕ್ಷಕ ಕೊಂಡಜ್ಜಿ ಉಮೇಶ್, ವಕೀಲ ತ್ಯಾವಣಗಿ ಮಲ್ಲಿಕಾರ್ಜುನಪ್ಪ, ಕೆ.ಎಸ್. ವೀರಭದ್ರಪ್ಪ ತೆಲಿಗಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net