ನರಲೋಕದ ಜನಕೆ ಆನೆ ತಣ್ಣೀರು ಉಗ್ಗೀತಲೆ..              ಆನೆಕೊಂಡ ಬಸವೇಶ್ವರ ದೇವರ ಕಾರ್ಣೀಕ

pixlr_20240827010248319.jpg
Published on

ದಾವಣಗೆರೆ
ರಾಮ ರಾಮ ಎಂದು ನುಡಿದೀತಲೆ
ನರಲೋಕದ ಜನಕೆ ಆನೆ ತಣ್ಣೀರು ಉಗ್ಗೀತಲೆ
ಮುತ್ತೈದೆಯರ ಭೂತಾಯಿ ಉಡಿ ತುಂಬೀತಲೆ
ನರಲೋಕದ ಜನಕೆ ದೃಷ್ಟಿ ಹುಚ್ಚಾದೀತಲೆ...

ಆನೆಕೊಂಡದ ಮರಡಿ ಬಸವೇಶ್ವರ ದೇವಸ್ಥಾನ ಎದುರು ಸೋಮವಾರ ಸಂಜೆ ಪದ್ಧತಿಯಂತೆ ಜರುಗಿದ ಬಸವೇಶ್ವರ, ನೀಲಾನಹಳ್ಳಿಯ ಆಂಜನೇಯ ಸ್ವಾಮಿಯ ಕಾರ್ಣೀಕವಿದು.
ಬಾತಿ ಸಮೀಪದ ನೀಲಾನಹಳ್ಳಿಯ ಆಂಜನೇಯ ಸ್ವಾಮಿಯೊಂದಿಗೆ ಸಂಜೆ ಕುದುರೆ ಮೆರವಣಿಗೆ ಮೇಲೆ, ನಿಟುವಳ್ಳಿ ದುರ್ಗಾಂಬಿಕೆ, ಬೇತೂರು ರಸ್ತೆಯ ವೆಂಕಟೇಶ್ವರ ಸ್ವಾಮಿ ಒಳಗೊಂಡು ಸುತ್ತಮುತ್ತಲ ದೇವರನ್ನು ಆನೆಕೊಂಡಕ್ಕೆ ಕರೆ ತರಲಾಯಿತು.
ಪದ್ಧತಿಯಂತೆ ಆನೆಕೊಂಡದ ಪುರಾತನ ಬಾವಿಯಲ್ಲಿ ಸ್ನಾನ ಮಾಡಿ, ದೇವಸ್ಥಾನ ಬಳಿ ಸಿದ್ಧಗೊಂಡ ವೇದಿಕೆಯಲ್ಲಿ, ಸಾವಿರಾರು ಜನರ ಸಮ್ಮುಖದಲ್ಲಿ ಎತ್ತರದ ಕಂಬವನ್ನೇರಿದ ದಾಸಪ್ಪನವರು ಈ ಕಾರ್ಣೀಕ ನುಡಿದರು.
ನೆರೆದಿದ್ದ ಭಕ್ತರು ಹರ್ಷೋದ್ಗಾರದೊಂದಿಗೆ ಈ ಸನ್ನಿವೇಶ ಕಣ್ತುಂಬಿಕೊಂಡರು. ಕಾರ್ಣೀಕ ವಾಣಿಯನ್ನು ತಂತಮ್ಮ ಮೊಬೈಲ್‌ಗಳಲ್ಲಿ ಸೆರೆ ಹಿಡಿದರು. ಅಕ್ಕ ಪಕ್ಕದ ಗ್ರಾಮಸ್ಥರು ಭಾಗಿಯಾಗಿದ್ದರು. ಈ ಬಾರಿ ಉತ್ತಮ ಮಳೆಯಾಗಬಹುದು ಎಂಬುದಾಗಿ ಕೆಲವರು ವಿಶ್ಲೇಷಿಸುತ್ತಾರೆ.
ಬೆಳಗ್ಗೆಯಿಂದಲೇ ಆನೆಕೊಂಡ ದೇವಸ್ಥಾನ ಭಕ್ತರಿಂದ ಕಳೆಗಟ್ಟಿತ್ತು. ಬಸವೇಶ್ವರ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವರ ದರ್ಶನ ಪಡೆದ ಭಕ್ತರು ಹಣ್ಣು-ಕಾಯಿ ಸಲ್ಲಿಸಿದರು.
---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net