

ದಾವಣಗೆರೆ: ಭಾರತದಲ್ಲಿನ ಬಡತನಕ್ಕೆ ಮೌಢ್ಯ ಸೇರಿ ಅನೇಕ ಕಾರಣಗಳಿವೆ. ಮೂಢನಂಬಿಕೆಗಳನ್ನು ತೊರೆದರೆ ಜಗತ್ತೇ ಸ್ವರ್ಗವಾಗಲಿದೆ ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.
ನಗರದ ವಿರಕ್ತಮಠದಲ್ಲಿ ಬಸವ ಪಂಚಮಿ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಹಾಲು ಕುಡಿಸುವ ಹಬ್ಬ ಕಾರ್ಯಕ್ರಮದ ನೇತೃತ್ವ ವಹಿಸಿ ಆಶೀರ್ವಚನ ನೀಡಿದರು.
ಅಮೃತ ಸಮಾನವಾದ ಹಾಲನ್ನು ದೇವರು-ಧರ್ಮದ ಹೆಸರಲ್ಲಿ ಹಾಳುಗೆಡುವುದು ಶ್ರೇಷ್ಠವಲ್ಲ. ಈ ಹಾಲನ್ನು ಮಕ್ಕಳು, ಬಡವರು, ರೋಗಿಗಳು ಹಾಗೂ ವೃದ್ಧರಿಗೆ ನೀಡಿದರೆ ನಿಜವಾಗಿಯೂ ದೇವರು ಸಂತೃಪ್ತಿಯಾಗುತ್ತಾನೆ. ಹಸಿದ ಜನರಲ್ಲಿ ದೇವರನ್ನು ಕಾಣಬೇಕು ಎಂದು ಹೇಳಿದರು.
ಹಾಲನ್ನು ಕಲ್ಲನಾಗಪ್ಪಗೆ ಅಪ್ಪ-ಅಮ್ಮ ಇತರೆ ಹೆಸರಿನಲ್ಲಿ ಎಂದು ಮಣ್ಣುಪಾಲು ಮಾಡಬೇಡಿ. ಅದನ್ನು ಮತ್ತೊಬ್ಬರಿಗೆ ಕುಡಿಸುವ ಮೂಲಕ ಬಸವ ಪಂಚಮಿಯಾಗಿ ಆಚರಿಸಬೇಕೆಂದು ಚಿತ್ರದುರ್ಗ ಮುರುಘಾಮಠವು ಕರೆ ನೀಡಿದೆ. ಮೂವತ್ತು ವರ್ಷಗಳಿಂದ ಆಚರಿಸುತ್ತ ಬಂದಿರುವ ಬಸವ ಪಂಚಮಿ ಪರಿಕಲ್ಪನೆಯನ್ನು ಅನೇಕ ಪ್ರಗತಿಪರ ಸಂಘಟನೆಗಳು ಮುಂದುವರಿಸಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಹಾಲು, ಹಾವಿನ ಆಹಾರವಲ್ಲ. ಸಸ್ತನಿಯಾದ ಕಾರಣಕ್ಕೆ ಹಾವು, ಹಾಲನ್ನು ಸೇವಿಸುವುದಿಲ್ಲ ಎಂಬುದಾಗಿ ವಿಜ್ಞಾನ ಹೇಳುತ್ತದೆ. ಈ ವೈಜ್ಞಾನಿಕ ಅಂಶವನ್ನು ನಾವು ಅರಿಯಬೇಕು. ವೈಜ್ಞಾನಿಕ ಚಿಂತನೆ ಅಡಿಯಲ್ಲೇ ಧರ್ಮ-ದೇವರ ಆಚರಣೆ ಮಾಡಬೇಕು. ಈ ದಿಸೆಯಲ್ಲಿ ಬಸವಣ್ಣನವರು ನೀಡಿದ ಲಿಂಗಾಯತ ಧರ್ಮ ಜಗತ್ತಿನಲ್ಲಿಯೇ ವೈಜ್ಞಾನಿಕ , ವೈಚಾರಿಕತೆ, ಸಮಾನತೆಯ ಧರ್ಮವಾಗಿದೆ ಎಂದು ಸ್ವಾಮೀಜಿ ಹೇಳಿದರು.
ಪತ್ರಕರ್ತ ಬಸವರಾಜ ದೊಡ್ಮನಿ ಮಾತನಾಡಿ ಮುರುಘಾಮಠವು ನಾಡಿನಲ್ಲಿ ವೈಚಾರಿಕ ಪ್ರಜ್ಞೆ ಬೆಳೆಸುವ ಕಾರ್ಯ ಮಾಡುತ್ತಿದೆ. ನೊಂದವರು, ದುಃಖಿತರ ಪರವಾಗಿ ಬಸವಣ್ಣನವರು ಮಾಡಿದ ಕೆಲಸವನ್ನು ನಾವು ಪಾಲಿಸಬೇಕಾಗಿದೆ. ಬಸವತತ್ವಗಳು ಜಗತ್ತಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡಲಿವೆ ಎಂದು ಹೇಳಿದರು.
ದೂಡಾ ಸದಸ್ಯೆ ವಾಣಿ ಬಕ್ಕೇಶ್ ಅವರು ಮಕ್ಕಳಿಗೆ ಹಾಲನ್ನು ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಮಾರಂಭದಲ್ಲಿ ವಿರಕ್ತಮಠದ ಮುಖಂಡರಾದ ಎಸ್.ಓಂಕಾರಪ್ಪ , ಟಿ.ಎಂ. ವೀರೇಂದ್ರ , ಲಂಬಿ ಮುರುಗೇಶಪ್ಪ , ಸುಜಾತಾ ಬೂಸ್ನೂರು ಇದ್ದರು.
---