

ದಾವಣಗೆರೆ: ಪರೀಕ್ಷೆಗಳಲ್ಲಿ ಗಳಿಸುವ ಅಂಕಗಳೇ ಪ್ರಗತಿಯ ಮಾನದಂಡವಲ್ಲ. ಅದಕ್ಕೂ ಮಿಗಿಲಾಗಿ ಜೀವನವನ್ನು ಪ್ರೀತಿಸಿ ಎಂದು ಚನ್ನಗಿರಿ ವಿರಕ್ತಮಠದ ಶ್ರೀ ಗುರುಬಸವ ಸ್ವಾಮೀಜಿ ವಿದ್ಯಾರ್ಥಿಗಳಿಗೆ ಹೇಳಿದರು.
ವಿಶ್ವ ವೀರಶೈವ ಲಿಂಗಾಯತ ಏಕೀಕರಣ ಪರಿಷತ್ತು ಹಾಗೂ ವಿಶ್ವ ಕಲ್ಯಾಣ ಪರಿಸರ ಗ್ರಾಹಕ ಸಾಂಸ್ಕೃತಿಕ ಪರಿಷತ್ತು ಸಹಯೋಗದಲ್ಲಿ ಜಿಲ್ಲಾ ಗುರುಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಸವ ಜಯಂತ್ಯುತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಫಲಿತಾಂಶದಲ್ಲಿ ಇತರರನ್ನು ಹೋಲಿಸಿಕೊಂಡು, ಒಂದಂಕಿ ಕಡಿಮೆ ಬಂದ ಕಾರಣಕ್ಕೂ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ವಿಷಾಧನೀಯ. ಓದಿನಲ್ಲಿ ಅಂಕ ಕಡಿಮೆಯಾದರೂ ಸರಿ, ಎತ್ತರದ ಜೀವನ ರೂಪಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ, ಜಗಜ್ಯೋತಿ ಬಸವೇಶ್ವರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್, ಇಂದಿನ ಭ್ರಷ್ಟಾಚಾರ ತಡೆಯಲು ಯುವಜನರು ಕಂಕಣಬದ್ಧರಾಗಬೇಕು ಎಂದರು. ಜೀವನದಲ್ಲಿ ಅಡೆತಡೆಗಳ ನಡುವೆಯೂ ಛಲ ಬಿಡದೆ ವಿದ್ಯಾಭ್ಯಾಸ ಮಾಡಿದ್ದನ್ನು ವಿವರಿಸಿದರು.
ನ್ಯಾಯವಾದಿ ಡಾ. ರೇವಣ್ಣ ಬಳ್ಳಾರಿ ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಶ್ರದ್ಧೆ, ಶ್ರಮ, ಶಿಸ್ತು ಪಾಲಿಸಿದರೆ ದಡ್ಡರೂ ಸಹ
ಸಾಧಕರಾಗಲು ಅವಕಾಶವಿದೆ ಎಂದರು. ಸತ್ಯಶುದ್ಧ ಕಾಯಕ ಕುರಿತು ಕುಸುಮಾ ಲೋಕೇಶ್, ಬಸವ ವಚನ ಜೀವನಾಮೃತ ಕುರಿತಾಗಿ ಜಿ.ಕೆ. ಶಕುಂತಲಾ ಉಪನ್ಯಾಸ ನೀಡಿದರು.
ಸಾಹಿತಿ ಯು.ಎನ್. ಸಂಗನಾಳಮಠ್, ಮೈಸೂರಿನ ಎಂ.ವಿ. ರಮೇಶ್, ಬೇರ್ಯ ರಾಮ್‌ಕುಮಾರ್, ಡಾ.ರವೀಂದ್ರಕುಮಾರ್, ಎಚ್.ಎಸ್. ಶಿವಕುಮಾರ್, ಎನ್. ರಾಜು ಅವರಿಗೆ ಬಸವಶ್ರೀ, ನಿವೃತ್ತ ಶಿಕ್ಷಕಿ ಸಂಧ್ಯಾ ಸುರೇಶ್, ಮಾಹಿನೂರು ಖಾನಂ, ಹನುಮಕ್ಕ ಅವರಿಗೆ ಕಾಯಕಯೋಗಿ ಶರಣೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪತ್ರಕರ್ತ ಮಂಜುನಾಥ ಎಕಬೋಟೆ ಬಿ.ಆರ್. ಬಸವರಾಜ್ ಇತರರಿದ್ದರು. ಎಸ್ಸೆಸ್ಸೆಲ್ಸಿ- ಪಿಯುನ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಉಮಾದೇವಿ ಪ್ರಾರ್ಥಿಸಿದರು. ಎ.ಬಿ. ರುದ್ರಮ್ಮ ಸ್ವಾಗತಿಸಿದರು. ಶಿವಕುಮಾರ್ ಶೆಟ್ಟರ್ ಪ್ರಾಸ್ತಾವಿಕ ಮಾತನಾಡಿದರು. ಎನ್.ಜೆ. ಶಿವಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.
---