

ದಾವಣಗೆರೆ: ಸಾರ್ವಜನಿಕ ಗಣೇಶ ಚತುರ್ಥಿ ವೇಳೆ ಪ್ರತಿಷ್ಠಾಪಿಸಲಾದ ವಿನಾಯಕ ಮೂರ್ತಿಗಳ ವಿಸರ್ಜನೆ ಹಾಗೂ ಈದ್‌ಮಿಲಾದ್ ಹಬ್ಬ ಆಚರಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳು ಕೆಲವು ಸೂಚನೆ ಪಾಲಿಸುವಂತೆ ಎಸ್ಪಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಬಾರ್ ರೆಸ್ಟೋರೆಂಟ್ ಅಸೋಸಿಯೇಷನ್ ಪದಾಧಿಕಾರಿಗಳ ಸಭೆ ನಡೆಸಿ ಕೆಲವು ಸೂಚನೆಗಳನ್ನು ನೀಡಲಾಗಿದೆ.
ನಿತ್ಯ ಬಾರ್‌ಗಳನ್ನು ಈಗಿರುವ ನಿಯಮಗಳ ಹಾಗೂ ಸಿಎಲ್ ಸಂಖ್ಯೆ ಪ್ರಕಾರ ನಿಗದಿತ ಸಮಯದಲ್ಲಿ ತೆರೆಯಬೇಕು ಮತ್ತು ಮುಚ್ಚಬೇಕು. ಜಿಲ್ಲಾಧಿಕಾರಿ ಸೂಚನೆಯಂತೆ ಗಣೇಶ, ಈದ್‌ಮಿಲಾದ್ ಹಬ್ಬದಂದು ಮದ್ಯ ಮಾರಾಟ ನಿಷೇಧಿಸಬೇಕು. ಅಕ್ರಮ ಮದ್ಯ ಮಾರಾಟವಾಗದಂತೆ ನಿಗಾ ವಹಿಸಬೇಕು.
ಗ್ರಾಮಗಳಲ್ಲಿ ಅಕ್ರಮ ಮದ್ಯ ಸರಬರಾಜು, ಮಾರಾಟ ಮಾಡಬಾರದು. ಮಾರಾಟ ಮಾಡಿದ ಬಾರ್ ಮಾಲೀಕರ ಮೇಲೆ ಪ್ರಕರಣ ದಾಖಲಿಸಿ ಪರವಾನಗಿ ರದ್ದುಗೊಳಿಸಲು ಕ್ರಮ ವಹಿಸಬೇಕು. ಬಾರ್‌ಗಳಲ್ಲಿ ಅಪ್ರಾಪ್ತರನ್ನು ಸೇರಿಸಬಾರದು, ಪರವಾನಗಿಯಂತೆ ಮದ್ಯ ಮಾರಬೇಕು. ಅನುಮತಿ ಇಲ್ಲದೇ ಮದ್ಯ ಸೇವಿಸಲು ಅವಕಾಶ ನೀಡಬಾರದು. ಬಾರ್‌ಗಳಲ್ಲಿ ಗಲಾಟೆಗಳು ಆಗದಂತೆ ಕ್ರಮವಹಿಸಬೇಕು ಅಂತಹ ಸಂದರ್ಭಗಳು ಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆ ಅಥವಾ 112 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ತಿಳಿಸಬೇಕು
ಸುಪ್ರೀಂಕೋರ್ಟ್ ನಿಯಮದನ್ವಯ ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಧ್ವನಿವರ್ಧಕಗಳನ್ನು ಪಾಲನೆ ಮಾಡಬೇಕು. ಬಾರ್, ವೈನ್, ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮರಗಳನ್ನು ಆಳವಡಿಸುವುದು ಗ್ರಾಮೀಣ ಪ್ರದೇಶಗಳಲ್ಲಿ ಅಧಿಕೃತವಾಗಿ ಮದ್ಯ ಮಾರಾಟದಂಗಡಿಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕು.
ಮೆರವಣಿಗೆ ಸಂದರ್ಭದಲ್ಲಿ ಅಬಕಾರಿ ತಂಡಗಳನ್ನು ನಿಯೋಜಿಸಿ ಅಕ್ರಮ ಮದ್ಯ ಮಾರಾಟ ಮತ್ತು ಸಾಗಣೆ ತಡೆಯಬೇಕು. ಬಾರ್ ಮತ್ತು ರೆಸ್ಟೋರೆಂಟ್‌ಗಳನ್ನು ಕಾಲಕಾಲಕ್ಕೆ ಅಬಕಾರಿ ಇಲಾಖೆಯಿಂದ ಪರವಾನಿಗೆ ನವೀಕರಿಸಿಕೊಳ್ಳಬೇಕು.
ನವೀಕರಣ ಪ್ರಮಾಣ ಪತ್ರವನ್ನು ಅಂಗಡಿ ಮುಂಭಾಗದಲ್ಲಿ ಪ್ರಕಟಿಸಬೇಕು. ಡಾಬಾಗಳಲ್ಲಿ ಮದ್ಯ ಸರಬರಾಜು ಮಾಡಬಾರದು. ಬಾರ್‌ಗಳಲ್ಲಿ ಡ್ರಗ್ಸ್ ಸೇವನೆಗೆ ಅವಕಾಶ ನೀಡಬಾರದು ಡ್ರಗ್ಸ್ ಸೇವನೆ ಮಾಡಿದವರನ್ನು ಸೇರಿಸಿದ್ದು ಕಂಡುಬಂದಲ್ಲಿ ಸ್ಥಳೀಯ ಠಾಣೆಗೆ / ಸಹಾಯವಾಣಿ ಸಂಖ್ಯೆ 112ಗೆ ಮಾಹಿತಿ ನೀಡಬೇಕೆಂದು ಸೂಚಿಸಲಾಗಿದೆ ಎಸ್ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
----