ವಿದ್ಯಾರ್ಥಿ-ಮಹಿಳೆಯರಿಗೆ ಹೆಚ್ಚು ಸಾಲ ನೀಡಿ

1000743182.jpg
Published on
ದಾವಣಗೆರೆ: ವಿದ್ಯಾರ್ಥಿ ಹಾಗೂ ಮಹಿಳೆಯರಿಗೆ ಬ್ಯಾಂಕ್‌ಗಳು ಹೆಚ್ಚಿನ ಸಾಲ ಸೌಲಭ್ಯ ಒದಗಿಸಬೇಕೆಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಸೂಚನೆ ನೀಡಿದರು. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬ್ಯಾಂಕ್ ಅಧಿಕಾರಿಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ವೃತ್ತಿಪರ ಕೋರ್ಸ್‌ನ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ ಒದಗಿಸಬೇಕು. ಇದರಿಂದ ಅವರ ಮುಂದಿನ ಭವಿಷ್ಯ ಉತ್ತಮವಾಗಲಿದೆ. ಮಹಿಳೆಯರನ್ನು ಸ್ವಾವಲಂಬಿ ಆಗಿಸುವ ನಿಟ್ಟಿನಲ್ಲಿ ಬ್ಯಾಂಕ್ಗಳಲ್ಲಿ ಅವರಿಗೆ ಸಾಲ, ಸೌಲಭ್ಯಗಳನ್ನು ಕಲ್ಪಿಸಬೇಕೆಂದು ತಿಳಿಸಿದರು. ಡಿಸೆಂಬರ್‌ನಲ್ಲಿ 5954 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ ನೀಡಬೇಕಿದ್ದು ಇದರಲ್ಲಿ 2665 ಮಹಿಳೆಯರು ಇದ್ದಾರೆ. ಪಿಎಂ ವಿಶ್ವಕರ್ಮ ಯೋಜನೆಯಡಿ 11731 ಅರ್ಜಿಗಳನ್ನು ಸ್ವೀಕರಿಸಿದ್ದು ಇದರಲ್ಲಿ 4768 ಕ್ಕೆ ಮಂಜೂರಾತಿ ನೀಡಿ 5357 ಅರ್ಜಿ ತಿರಸ್ಕರಿಸಲಾಗಿದೆ. ಇನ್ನೂ 1606 ಅಭ್ಯರ್ಥಿಗಳ ಅರ್ಜಿಗಳು ಬಾಕಿ ಇದ್ದು ತ್ವರಿತವಾಗಿ ಇತ್ಯರ್ಥ ಮಾಡಿ ಸೌಲಭ್ಯ ನೀಡಬೇಕು. ವಿನಾಕಾರಣ ಅರ್ಜಿಗಳನ್ನು ತಿರಸ್ಕರಿಸಬಾರದು ಎಂದು ಹೇಳಿದರು. ಬ್ಯಾಂಕ್‌ಗಳಿಂದ ಶಿಕ್ಷಣ, ಮನೆ, ವೃತ್ತಿಪರ ಹೀಗೆ ವಿವಿಧ ರೀತಿಯ ಸಾಲ ಸೌಲಭ್ಯಗಳನ್ನು ಜನರಿಗೆ ಒದಗಿಸಿ ಸಬಲೀಕರಣ ಗೊಳಿಸಬೇಕು. ಬ್ಯಾಂಕ್‌ಗೆ ಸಾರ್ವಜನಿಕರು ಬಂದಾಗ ಸೌಜನ್ಯದಿಂದ ಸಹಕರಿಸಿ ಯೋಜನೆಗಳ ಬಗ್ಗೆ ಸೂಕ್ತ ಮಾಹಿತಿ ನೀಡಿ ಸದುಪಯೋಗ ಪಡಿಸಿಕೊಳ್ಳಬೇಕು. ಸರ್ಕಾರದ ಯೋಜನೆಗಳನ್ನು ಸರಿಯಾದ ವ್ಯಕ್ತಿಗಳಿಗೆ ಸಕಾಲಕ್ಕೆ ತಲುಪಿಸುವ ಕಾರ್ಯ ಆಗಬೇಕಿದೆ ಎಂದರು. ಪಿಎಂ ವಿಶ್ವಕರ್ಮ, ಮುದ್ರಾ ಇನ್ನಿತರೆ ಯೋಜನೆಗಳಲ್ಲಿ ಅರ್ಹ ಫಲಾನುಭವಿಗಳಿಗೆ ಸ್ವಂತ ಉದ್ಯೋಗ ಕೈಗೊಳ್ಳಲು ಕೌಶಲ ತರಬೇತಿ ನೀಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿ.ಪಂ. ಸಿಇಒ ಸುರೇಶ್ ಬಿ. ಇಟ್ನಾಳ್ ಮಾತನಾಡಿ, ಶೈಕ್ಷಣಿಕ ಸಾಲ, ಪಿಎಂಜೆಜೆವೈ, ಮುದ್ರಾ, ಪ್ರಧಾನ ಮಂತ್ರಿ ಆವಾಜ್ ಯೋಜನೆಯಲ್ಲಿನ ಅರ್ಹರಿಗೆ ಸಾಲ ಸೌಲಭ್ಯ ನೀಡಬೇಕು. ನಗರ, ಗ್ರಾಮೀಣ ಫಲಾನುಭವಿಗಳಿಗೆ ಹಾಗೂ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ, ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡುವ ಮೂಲಕ ಮತ್ತಷ್ಟು ಕ್ರಿಯಾಶೀಲರಾಗಿ ಕೆಲಸ ಮಾಡಬೇಕು ಎಂದರು. ಸಭೆಯಲ್ಲಿ ನಬಾರ್ಡ್ ಅಧಿಕಾರಿ ರಶ್ಮಿ ರೇಖಾ, ಆರ್‌ಬಿಐ ಎಜಿಎಂ ಅರುಣ್ ಕುಮಾರ್, ಲೀಡ್‌ಬ್ಯಾಂಕ್ ಮ್ಯಾನೇಜರ್ ಸಿದ್ದಾರ್ಥ್ ಎಸ್. ಆಚಾರ್ಯ, ಕೆನರಾ ಬ್ಯಾಂಕ್ ಎಜಿಎಂ ವೈ.ವಿ.ಎನ್. ಶಿವಪ್ರಸಾದ್ ಇತರರಿದ್ದರು. -------------
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net