

ಡಿ.ಎಂ.ಮಹೇಶ್, ದಾವಣಗೆರೆ: ವಿದ್ಯಾನಗರ ಸಮೀಪದ ಬೈಪಾಸ್ ರಸ್ತೆಗೆ ಲಗತ್ತಾಗಿರುವ ಬನಶಂಕರಿ ಬಡಾವಣೆ, ದಾವಣಗೆರೆಯಲ್ಲಿ ಬೆಳೆಯುತ್ತಿರುವ ಹೊರ ವಲಯದ ಪ್ರದೇಶಗಳಲ್ಲೊಂದು. ನಗರಪಾಲಿಕೆಯ 41ನೇ ವಾರ್ಡ್ ವ್ಯಾಪ್ತಿಯ ಬಡಾವಣೆಯಲ್ಲಿ ಐದುನೂರು ಮನೆಗಳಿವೆ. ಹಸಿರು ಪರಿಸರದ ಉದ್ಯಾನ ಇಲ್ಲಿನ ನಿವಾಸಿಗಳಿಗೆ ಆರಾಮದಾಯಕ ವಾತಾವರಣ ಕಲ್ಪಿಸುತ್ತಿದೆ.
1 ಎಕರೆಯ ವಿಶಾಲ ಏರಿಯಾದಲ್ಲಿ ವಿಸ್ತರಿಸಿದ ಈ ಪಾರ್ಕ್‌ಗೆ ನಿರ್ದಿಷ್ಟ ನಾಮಕರಣವಾಗಿಲ್ಲ. ಮೂರು ವರ್ಷದ ಹಿಂದೆ ನೆಡಲಾಗಿದ್ದ ಮಹಾಗನಿ, ಹೊಂಗೆ, ಬಾದಾಮಿ, ಬೇವು, ಗಸಗಸೆ, ಸ್ಪೆತೋಡಿಯ, ಟಿಕೋಮೊ, ಬಸವನಪಾದ, ನೇರಳೆ, ಹಲಸು ಸೇರಿ 600 ಗಿಡಗಳಿಂದ ಉದ್ಯಾನ ಹಚ್ಚಹಸಿರಾಗಿದೆ.
ಬನಶಂಕರಿ ಬಡಾವಣೆ ಹಿತರಕ್ಷಣಾ ಸಮಿತಿಯ ಚಂದ್ರಪ್ಪ, ಡಾ.ಶೇಖರಪ್ಪ, ಭರಮಪ್ಪ ಮೊದಲಾದವರ ಜತನದಿಂದಾಗಿ ಪಾರ್ಕ್ ಸೂಕ್ತ ನಿರ್ವಹಣೆ ಆಗುತ್ತಿದೆ. ಬೆಳಗ್ಗೆ ಮತ್ತು ಸಂಜೆ ಬರುವ ಅನೇಕ ವಾಯುವಿಹಾರ ಮಾಡುತ್ತಾರೆ. ಪಾರ್ಕ್‌ನಲ್ಲಿ ಅನ್ಯ ಚಟುವಟಿಕೆಗೆ ನಿರ್ಬಂಧ ಹಾಕಲು ಸಮಿತಿಯವರೇ ನಿರ್ದಿಷ್ಟ ಅವಧಿಯವರೆಗೆ ಗೇಟ್ ಬಂದ್ ಮಾಡುತ್ತಾರೆ!
ಮಕ್ಕಳಿಗಾಗಿ ಇಲ್ಲಿ ಜಾರುಬಂಡಿ, ಜೋಕಾಲಿ ಇತರೆ ಆಟಿಕೆಗಳಿವೆ. ಕೆಲವು ಸಮರ್ಪಕವಾಗಿ ಬಳಕೆಯಾಗದೆ ದುರಸ್ತಿ ಆಗಬೇಕಿದೆ. ಪಾರ್ಕ್ ಮಧ್ಯಬಿಂದುವಾಗಿ ಕಾಣುವ ಹೈಮಾಸ್ಟ್ ದೀಪದಲ್ಲಿ 12 ದೀಪಗಳಿವೆ. ಅದರಲ್ಲಿ ನಾಲ್ಕಕ್ಕೆ ಇರುಳುಗಣ್ಣು! ಅವು ದುರಸ್ತಿಯಾಗದ್ದರಿಂದ ಸಂಜೆ ವಿಹಾರ ತುಸು ಪ್ರಯಾಸವೇ ಸರಿ.
ಕೊರೆಸಿದ 1 ಬೋರ್‌ವೆಲ್‌ನಿಂದ ಇಲ್ಲಿನ ಗಿಡಗಳಿಗೆ ನೀರುಣಿಸುವ ಕಾರ್ಯ ನಡೆಯುತ್ತಿದೆ. ಬರುವ ಜನರು, ಮಕ್ಕಳಿಗಾಗಿ ಶೌಚಗೃಹದ ಅಗತ್ಯವಿದೆ. ಪಾರ್ಕ್ ಆವರಣದಲ್ಲಿ ರಾಜಕಾರಣಿಗಳು ನೀಡಿದ ಭರವಸೆಯಂತೆ ಶುದ್ಧ ನೀರಿನ ಘಟಕ ಇನ್ನಷ್ಟೇ ತಲೆ ಎತ್ತಬೇಕಿದೆ. ಪಾರ್ಕ್‌ನಲ್ಲಿ ಹುಲುಸಾಗಿ ಬೆಳೆದ ಹುಲ್ಲುಗಳ ಕಟಾವಣೆಗೆ ಸ್ವಚ್ಛತಾ ಸಿಬ್ಬಂದಿ ಬಳಸಲಾಗುತ್ತಿದೆ.
ಸ್ಮಾರ್ಟ್‌ಸಿಟಿ ಲಿಮಿಟೆಡ್‌ನಿಂದ ಮೂರು ವರ್ಷದ ಹಿಂದೆ ಇಲ್ಲಿ ಅಳವಡಿಸಿದ್ದ ಜಿಮ್ ಸಾಧನಗಳು ನಿರ್ವಹಣೆ ಕೊರತೆಯಿಂದ ಸೊರಗುತ್ತಿವೆ. ಪಾಲಿಕೆ ಅಧಿಕಾರಿಗಳು ಇದರತ್ತ ಗಮನ ಹರಿಸದಿದ್ದರೆ ಈ ಸಲಕರಣೆಗಳು ಮೂಲೆಗುಂಪು ಆಗುವ ಸಾಧ್ಯತೆ ಹೆಚ್ಚಿದೆ. ಪಾರ್ಕ್‌ನ ಸುತ್ತಲೂ ವಾಕಿಂಗ್ ಪಾಥ್, ಸಿಮೆಂಟ್ ಬೆಂಚುಗಳಿವೆ. ಆದರೆ, ಪಾರ್ಕ್ ಮಧ್ಯೆಯೂ ಕುಳಿತು ಪರಿಸರ ಆಸ್ವಾದಿಸುವ ಇನ್ನಷ್ಟು ಡಸ್ಕ್‌ಗಳ ವ್ಯವಸ್ಥೆ ಆಗಬೇಕಿದೆ.
ಈ ಪಾರ್ಕ್ ಎದುರಿನಲ್ಲೇ ಇರುವ 30-120 ಅಡಿ ಸುತ್ತಳತೆಯ ಜಾಗದಲ್ಲಿ ಔಷಧೀಯ ಗಿಡಗಳನ್ನು ಬೆಳೆಸುವ ಇರಾದೆ ಈ ಬಡಾವಣೆ ಹಿತರಕ್ಷಣಾ ಸಮಿತಿಯದು. ಇದಕ್ಕಾಗಿ ಭರದ ಸಿದ್ಧತೆ ನಡೆಯುತ್ತಿದೆ.
ಖಾಸಗಿಯಾಗಿಯೇ ನಿರ್ವಹಣೆ ಆಗುತ್ತಿರುವ ಈ ಚೊಕ್ಕ ಪಾರ್ಕ್‌ನ ಸೌಂದರ್ಯೀಕರಣಕ್ಕೆ ಧಕ್ಕೆ ಆಗದಂತೆ ಬಳಕೆದಾರರೂ ಜವಾಬ್ದಾರಿ ನಿಭಾಯಿಸಬೇಕಿದೆ. ಪಾರ್ಕ್‌ನ ಒಳಹೊರಗೆ ಕಸ ಬಿಸಾಡುವ ಮನಸ್ಥಿತಿ ದೂರವಾದಲ್ಲಿ ಈ ಭಾಗದ ಜನರಿಗೆ ಇನ್ನಷ್ಟು ಹಿತಾನುಭವದ ಅವಕಾಶವಾದೀತು. ಏನೆಂದು ಹೆಸರಿಡಲಿ, ಈ ಚೆಂದ ಅನುಭವಕೆ.. ಎಂಬ ಹಾಡಂತೆ ಪಾರ್ಕ್‌ಗೆ ಏನೆಂದು ನಾಮಕರಣ ಮಾಡಬೇಕೆಂಬ ಗುಂಗು ನಿವಾಸಿಗಳ ತಲೆಗೀಗ ಹತ್ತಿದೆ!
--
ಬೆಂಗಳೂರು ಇತರೆ ಮಹಾನಗರಗಳ ಮಾದರಿಯಲ್ಲೇ ಪಾರ್ಕ್‌ಗಳ ಸ್ವಚ್ಛತೆಗೆ ಪಾಲಿಕೆಯಿಂದಲೇ ನಿಯಮಿತ ಸಿಬ್ಬಂದಿ ನಿಯೋಜಿಸಬೇಕು. ವಾಚ್ ಆ್ಯಂಡ್ ವಾರ್ಡ್ ವ್ಯವಸ್ಥೆ ಜಾರಿಗೆ ಬರಬೇಕು. ಶುದ್ಧ ನೀರಿನ ಘಟಕ ಆದಲ್ಲಿ ಪಾರ್ಕ್‌ಗೆ ಬರುವ ಜನರಿಗೆ ಅನುಕೂಲವಾಗಲಿದೆ.
ಕೆ.ಬಿ. ಶಿವಾನಂದಪ್ಪ
ಸ್ಥಳೀಯರು.
---
ಈ ಪಾರ್ಕ್‌ನಲ್ಲಿ ಉತ್ತಮ ಪರಿಸರವಿದ್ದು ಹಿರಿಯ ನಾಗರಿಕರ ವಾಕಿಂಗ್‌ಗೂ ಸೂಕ್ತವಾಗಿದೆ. ಹೈಮಾಸ್ಟ್ ದೀಪಗಳಲ್ಲಿ ಕೆಲವು ಹೊತ್ತುತ್ತಿಲ್ಲ. ಹೀಗಾಗಿ ಸಂಜೆ ವೇಳೆ ಓಡಾಡಲು ಭಯ ಆಗಲಿದೆ. ಇದರ ಜತೆಗೆ ಕೆಲವು ಜಿಮ್ ಸಾಮಗ್ರಿಗಳು ದುರಸ್ತಿ ಆಗಬೇಕಿದೆ.
ಜಿ. ವೀಣಾ.
ವಾಯುವಿಹಾರಿ.
---
ಸ್ವಚ್ಛತೆ ಸೇರಿ ಪಾರ್ಕ್ ನಿರ್ವಹಣೆಯ ಉಸ್ತುವಾರಿಯನ್ನು ನಗರಪಾಲಿಕೆಯೇ ವಹಿಸಿಕೊಳ್ಳಬೇಕು. ವಾಯುವಿಹಾರಕ್ಕೆ ಬರುವವರಿಗೆ ಪ್ರತ್ಯೇಕ ಶೌಚಗೃಹಗಳು ಹಾಗೂ ಕೂರಲು ಇನ್ನಷ್ಟು ಬೆಂಚುಗಳ ವ್ಯವಸ್ಥೆ ಆಗಬೇಕಿದೆ. ಪಾರ್ಕ್‌ಗೆ ಹೊಂದಿಕೊಂಡ ಮುಖ್ಯರಸ್ತೆಗೂ ಕಾಯಕಲ್ಪ ಬೇಕಿದೆ.
ಡಾ.ಎಚ್.ಜಿ.ಶೇಖರಪ್ಪ
ನಾಗರಿಕ ಹಿತರಕ್ಷಣಾ ಸಮಿತಿ ಸದಸ್ಯ.