

ದಾವಣಗೆರೆ: ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಮುಸ್ಲಿಮರು ಜಿಲ್ಲಾದ್ಯಂತ ಸೋಮವಾರ ಶ್ರದ್ಧಾ ಭಕ್ತಿಯಿಂದ ಆಚರಿಸಿದರು.
ನಗರದ ಪಿಬಿ ರಸ್ತೆಯ ಹಳೆಯ ಈದ್ಗಾ ಮೈದಾನದ ಬಳಿ ಸಾಮೂಹಿಕ ಪ್ರಾರ್ಥನೆಯಲ್ಲಿ ಸಾವಿರಾರು ಸಂಖ್ಯೆಯ ಮುಸ್ಲಿಮರು ಭಾಗಿಯಾಗಿದ್ದರು. ಮಾಗಾನಹಳ್ಳಿ ರಸ್ತೆಯ ರಜ್ಹಾ ಉಲ್ ಮುಸ್ತಫಾ ನಗರದ ಹೊಸ ಈದ್ಗಾ ಮೈದಾನ, ಎಸ್‌ಒಜಿ ಕಾಲನಿಯ ಈದ್ಗಾದ ಬಳಿಯೂ ಪ್ರಾರ್ಥನೆಯ ಸಡಗರ ಜೋರಾಗಿತ್ತು.
ಹಿರಿಯರು, ಯುವಕರು ಪರಸ್ಪರ ಆಲಂಗಿಸಿ ಶುಭಾಶಯ ವಿನಿಮಯ ಮಾಡಿಕೊಂಡರು. ಸಂಪ್ರದಾಯದಂತೆ ಬಡವರಿಗೆ ಇದೇ ವೇಳೆ ದಾನ ಮಾಡಿದರು. ಆಕರ್ಷಕ ಪೋಷಾಕುಗಳಲ್ಲಿ ಮಕ್ಕಳು ಗಮನ ಸೆಳೆದರು. ತಂಜಿಂ ಸಮಿತಿ ಅಧ್ಯಕ್ಷ ದಾದಾಪೀರ್ ಸೇರಿ ಪದಾಧಿಕಾರಿಗಳು ಭಾಗಿಯಾಗಿದ್ದರು.
ಹಳೇ ಈದ್ಗಾ ಮೈದಾನದ ಬಳಿ ಎಸ್ಪಿ ಉಮಾ ಪ್ರಶಾಂತ್, ಎಎಸ್ಪಿ ವಿಜಯಕುಮಾರ್ ಭೇಟಿ ನೀಡಿ ಹಬ್ಬದ ಶುಭಾಶಯ ಹೇಳಿದರು. ಸಾಮೂಹಿಕ ಪ್ರಾರ್ಥನೆ ಹಿನ್ನೆಲೆಯಲ್ಲಿ ನಗರದ ಕೆಲವೆಡೆ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.