

ಡಿ.ಎಂ.ಮಹೇಶ್, ದಾವಣಗೆರೆ: ಮುಂದೂಡಿಕೆ ಆಗುತ್ತಲೇ ಇದ್ದ, 50 ಹಾಸಿಗೆ ಸಾಮರ್ಥ್ಯವುಳ್ಳ ಜಿಲ್ಲಾ ಮಟ್ಟದ ಸರ್ಕಾರಿ ಸಂಯುಕ್ತ ಆಯುಷ್ ಆಸ್ಪತ್ರೆ ಕಟ್ಟಡ ಶುಭಾರಂಭಕ್ಕೆ ಯೋಗಾಯೋಗ ಕೂಡಿಬಂದಿದೆ. ಜೂ. 16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದರ ಶಿಲಾಫಲಕ ಅನಾವರಣಗೊಳಿಸುವ ನಿರೀಕ್ಷೆ ಇದೆ.
ಆಯುರ್ವೇದ, ಯುನಾನಿ, ಹೋಮಿಯೋಪಥಿ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಎಲ್ಲವೂ ಒಂದೇ ಸೂರಿನಡಿ ಸಿಗಬಲ್ಲ ಈ ನೂತನ ಆಸ್ಪತ್ರೆ ತಡವಾಗಿಯಾದರೂ ಉದ್ಘಾಟನೆಗೊಳ್ಳುತ್ತಿದೆ. ದಾವಣಗೆರೆ ಹೊರವಲಯದ ನಾಗಮ್ಮ ಕೇಶವಮೂರ್ತಿ ಬಡಾವಣೆಯಲ್ಲಿನ ಈ ಕಟ್ಟಡಕ್ಕೆ, ಅಧಿಕಾರಿಗಳು-ರೋಗಿಗಳ ಮನಸ್ಸಿಗೆ ಉಲ್ಲಾಸ ತರುವ, ನಿಶ್ಯಬ್ದದ ಪ್ರಾಕೃತಿಕ ವಾತಾವರಣದ ಆಕರ್ಷಣೆ ಇದೆ.
ಆಯಷ್ ಇಲಾಖೆಯ ರಾಜ್ಯ ವಲಯದಡಿ ಕರ್ನಾಟಕದಲ್ಲಿ ನಿರ್ಮಾಣಗೊಂಡ, 50 ಹಾಸಿಗೆ ಸಾಮರ್ಥ್ಯದ ಮೂರನೇ ಆಸ್ಪತ್ರೆ ಇದಾಗಿದೆ. 2019ರ ಜೂನ್‌ನಲ್ಲಿ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿದ್ದರು. ಒಟ್ಟು 9 ಕೋಟಿ ರೂ. ವೆಚ್ಚದ ಈ ಕಟ್ಟಡ ನೆಲಮಹಡಿ ಸೇರಿ ನಾಲ್ಕಂತಸ್ತನ್ನು ಹೊಂದಿದೆ.
ನೆಲ ಮಹಡಿಯಲ್ಲಿ ಆಡಳಿತ ಬ್ಲಾಕ್, ಹೊರರೋಗಿಗಳ ವಿಭಾಗ, ಪ್ರಯೋಗಾಲಯವಿದೆ. ಮೊದಲು ಮತ್ತು ಎರಡನೇ ಅಂತಸ್ತಿನಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಚಿಕಿತ್ಸಾ ಕೊಠಡಿಗಳಿವೆ. ಮೂರನೇ ಮಹಡಿಯಲ್ಲಿ ಔಷಧದ ಉಗ್ರಾಣ ಇತ್ಯಾದಿ ವ್ಯವಸ್ಥೆಗಳಿವೆ. ಅದರ ಮೇಲ್ಭಾಗದಲ್ಲಿ ಯೋಗ ಚಟುವಟಿಕೆಗಳಿಗಾಗಿ ಶೀಟಿನ ಹೊದಿಕೆಯ ಸಭಾಂಗಣ ಸಿದ್ಧ್ದವಾಗಿದೆ.
ಕಟ್ಟಡದ ಹಿಂಬದಿ ಸೆಫ್ಟಿಕ್ ಟ್ಯಾಂಕ್, ಸೋಪಿಟ್ ಟ್ರೀಟ್ಮೆಂಟ್ ಪ್ಲಾಂಟ್‌ಗಳಿವೆ. ಆಸ್ಪತ್ರೆ ಎಡಭಾಗ ಹುಲ್ಲುಗಾವಲಲ್ಲಿ ಆಯುಷ್ ಇಲಾಖೆ ಎಂಬ ಬರಹ ಕಾಣಿಸಿಕೊಳ್ಳಲಿದೆ. ಆವರಣದಲ್ಲಿ ಔಷಧೀಯ ಸಸಿಗಳನ್ನು ನೆಡಲು ಯೋಜಿಸಲಾಗಿದೆ. ಸನಿಹದಲ್ಲೇ ಜಿಲ್ಲಾ ಆಯುಷ್ ಅಧಿಕಾರಿಗಳ ಕಚೇರಿ ಇದ್ದು ಎರಡೂ ಕಟ್ಟಡ ಸೇರಿ 1 ಎಕರೆ 8 ಗುಂಟೆ ಜಾಗ ಇಲಾಖೆ ಸುಪರ್ದಿಯಲ್ಲಿದೆ.
ಆಯಾ ವೈದ್ಯ ಪದ್ಧತಿಯಡಿ ವೈದ್ಯಕೀಯ ಉಪಕರಣ, ಹಾಸಿಗೆ, ಮಂಚ ಸೇರಿ ಪೀಠೋಕರಣಗಳ ಸೌಲಭ್ಯಗಳು ಈಗಾಗಲೆ ಸಜ್ಜುಗೊಂಡಿವೆ. ಕಾರ್ಯ ನಿರ್ವಹಣೆಗಾಗಿ ಆಯುಷ್ ನಿರ್ದೇಶನಾಲಯದಿಂದ ಹುದ್ದೆಗಳು ಮಂಜೂರಾಗಬೇಕಿದೆ. ಇದು ಸದ್ಯಕ್ಕೆ ಆರ್ಥಿಕ ಇಲಾಖೆ ಹಂತದಲ್ಲಿದೆ.
ಆದಾಗ್ಯೂ ಆರಂಭಿಕ ಹಂತದಲ್ಲಿ 10 ಹಾಸಿಗೆ ಸಾಮರ್ಥ್ಯಕ್ಕೆ ತಕ್ಕಂತೆ ಆರೋಗ್ಯ ಸೇವೆ ಆರಂಭಿಸಲು ಇಲಾಖೆ ಅಧಿಕಾರಿಗಳು ತಯಾರಿ ನಡೆಸಿದ್ದಾರೆ. ವಾರಕ್ಕೆ 2-3 ದಿನದಂತೆ ಸೇವೆ ಪಡೆಯಲು ಜಿಲ್ಲೆಯ ಆಯುರ್ವೇದ ಚಿಕಿತ್ಸಾಲಯಗಳ ಪರಿಣತ ವೈದ್ಯರು ಸೇರಿ ಒಟ್ಟು 11 ಸಿಬ್ಬಂದಿ ಪಟ್ಟಿ ಸಿದ್ಧ್ದವಾಗಿದೆ. ರೋಗಿಗಳಿಗೆ ಊಟದ ಸೌಲಭ್ಯ ಕಲ್ಪಿಸಲು ಇಲಾಖೆ ಮಾರ್ಗಸೂಚಿ ನಿರೀಕ್ಷಿಸಲಾಗಿದೆ.
ದೀರ್ಘಕಾಲಿಕ ಕಾಯಿಲೆಗೆ ನೆರವು
ಮೂಲವ್ಯಾಧಿ, ಚರ್ಮರೋಗ, ವಾತ, ಅಸ್ತಮಾ, ಪಾರ್ಶ್ವವಾಯು, ಮಂಡಿನೋವು, ಕೀಲುನೋವು ಸೇರಿ ದೀರ್ಘಕಾಲಿಕ ಕಾಯಿಲೆಗಳಿಗೆ ಇಲ್ಲಿ ಚಿಕಿತ್ಸೆ ಸಿಗಲಿದೆ. ಜಿಲ್ಲೆಯ ನಾಗರಿಕರು ಇದರ ಲಾಭ ಪಡೆಯಬಹುದು. ಒಳರೋಗಿಗಳಿಗೆ ಉಚಿತವಾಗಿ ಔಷಧದ ಜತೆಯಲ್ಲೇ ಪಂಚಕರ್ಮ ಚಿಕಿತ್ಸೆ ಹಾಗೂ ವಿವಿಧೇತರ ಥೆರಪಿಯ ಉಪಚಾರಗಳು ಸಿಗಲಿವೆ.
56 ಹುದ್ದೆಗಳ ಭರ್ತಿ ನಿರೀಕ್ಷೆ
ಉಡುಪಿ, ಮಂಗಳೂರಿನ ಸಂಯುಕ್ತ ಆಯುಷ್ ಆಸ್ಪತ್ರೆ ಮಾದರಿಯಲ್ಲಿಯೇ ಇಲ್ಲಿಗೂ 56 ಹುದ್ದೆಗಳ ಮಂಜೂರಾತಿ ಆಗಬೇಕಿದೆ. ಈ ಪೈಕಿ ಮುಖ್ಯ ವೈದ್ಯಾಧಿಕಾರಿ 1, ಹಿರಿಯ ವೈದ್ಯಾಧಿಕಾರಿ 3, ವೈದ್ಯಾಧಿಕಾರಿ-4, ಶುಶ್ರೂಷಕ ಅಧೀಕ್ಷಕರು 1, ಶುಶ್ರೂಷಣಾಧಿಕಾರಿ 12, ಫಾರ್ಮಸಿ ಅಧಿಕಾರಿ 3, ಪ್ರಯೋಗಶಾಲಾ ತಂತ್ರಜ್ಞರು 2, ಯೋಗ ತರಬೇತುದಾರರು-1, ಮಸಾಜ್-ಪಂಚಕರ್ಮ ಸಿಬ್ಬಂದಿ 2, ಅಡುಗೆ ತಯಾರಕರು 2, ಕಾವಲುಗಾರರು-3, ವಾರ್ಡ್ ಬಾಯ್/ ಆಯಾ 6, ಡ್ರೆಸ್ಸರ್-1, ನೈರ್ಮಲ್ಯಪಾಲಕರು, ಎಸ್‌ಡಿಎ, ಎಸ್‌ಡಿಎ, ಕಂಪ್ಯೂಟರ್ ಆಪರೇಟರ್ ಮೊದಲಾದ ಹುದ್ದೆಗಳ ನಿರೀಕ್ಷೆ ಇಲ್ಲಿದೆ.
ಆಯುಷ್ ಅಧಿಕಾರಿ ಕಚೇರಿ ಇನ್ನು ಸ್ವತಂತ್ರ
ಜಿಲ್ಲಾ ಆಯುಷ್ ಅಧಿಕಾರಿಗಳ ಕಚೇರಿ ಕಟ್ಟಡ ಕೂಡ ಆಸ್ಪತ್ರೆ ಸನಿಹವೇ, ಜಿಪಂ ಇಂಜಿನಿಯರಿಂಗ್ ವಿಭಾಗದಿಂದ 1.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ. 2008ರಿಂದ ಚಿಗಟೇರಿ ಆಸ್ಪತ್ರೆ, ಪಿ.ಜೆ. ಬಡಾವಣೆ, ದೇವರಾಜ ಅರಸು ಬಡಾವಣೆ ಬಳಿಕ 2021ರಿಂದ ಜಿಪಂ ಇಂಜಿನಿಯರಿಂಗ್ ಇಲಾಖೆ ಕಟ್ಟಡದಲ್ಲಿ ಕಚೇರಿ ಕಾರ್ಯ ನಿರ್ವಹಿಸುತ್ತಿದೆ. 17 ವರ್ಷ ಬಳಿಕ ಸ್ವತಂತ್ರ ಕಟ್ಟಡಕ್ಕೆ ಕಚೇರಿ ಸ್ಥಳಾಂತರವಾಗುತ್ತಿದೆ.
ಚಿಕಿತ್ಸೆಗೆ ಬಲ ಜಿಲ್ಲಾ ದವಾಖಾನೆ
ದಾವಣಗೆರೆ ಜಿಲ್ಲೆಯಲ್ಲಿ 25 ಆಯುರ್ವೇದ ಚಿಕಿತ್ಸಾಲಯ, ನಾಲ್ಕು ಆಯುಷ್ ಆಸ್ಪತ್ರೆಗಳಿವೆ. ತಿಂಗಳೊಂದಕ್ಕೆ 10 ಸಾವಿರದಷ್ಟು ರೋಗಿಗಳ ದೀರ್ಘಕಾಲೀನ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿರುವ ಅಂದಾಜಿದೆ. ಸಂಯುಕ್ತ ಆಯುಷ್ ಆಸ್ಪತ್ರೆ ಶುರುವಾದಲ್ಲಿ ಇನ್ನಷ್ಟು ಗುಣಮಟ್ಟದ ಸೇವೆ ಸಾರ್ವಜನಿಕರ ಕೈಗೆಟುಕಲಿದೆ. ನಾವು ಆಯುಷ್‌ಗಾಗಿ, ಆಯುಷ್ ಎಲ್ಲರಿಗಾಗಿ ಎಂಬ ಮಾತಿಗೆ ಬಲ ಬರಲಿದೆ.
---
ಶಾರೀರಿಕ ಆರೋಗ್ಯ ರಕ್ಷಣೆಯಲ್ಲಿ ಆಯುಷ್ ವೈದ್ಯ ಪದ್ಧತಿಗಳು ಪರಿಣಾಮ ಬೀರಲಿವೆ. ಪದ್ಧತಿಗಳ ಚಿಕಿತ್ಸೆಯನ್ನು ಒಂದೇ ಸೂರಿನಲ್ಲಿ ನೀಡುವ ಸಂಯುಕ್ತ ಆಯುಷ್ ಆಸ್ಪತ್ರೆ ಜೂ. 16ರಂದು ಉದ್ಘಾಟನೆಯಾಗಲಿದೆ. ಜಿಲ್ಲೆಯ ಜನರಿಗೆ ಉಚಿತ ಹಾಗೂ ಉತ್ಕೃಷ್ಟ ಚಿಕಿತ್ಸೆ ಸೌಲಭ್ಯಗಳು ಇಲ್ಲಿ ಸಿಗಲಿವೆ.
ಡಾ. ಬಿ.ಯು. ಯೋಗೇಂದ್ರ ಕುಮಾರ್
ಜಿಲ್ಲಾ ಆಯುಷ್ ಅಧಿಕಾರಿ, ದಾವಣಗೆರೆ
-----------------