ದೌರ್ಜನ್ಯ ತಡೆ ಕಾಯ್ದೆಯಡಿ 60 ಸಂತ್ರಸ್ತರಿಗೆ ಪರಿಹಾರ

1000974142.jpg
Published on

ದಾವಣಗೆರೆ: ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ, ಪ.ಪಂಗಡದವರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಸಕ್ತ ವರ್ಷದಲ್ಲಿ ಜೂ. 25ರ ವರೆಗೆ 32 ಪ್ರಕರಣಗಳು ದಾಖಲಾಗಿದ್ದು 60 ಸಂತ್ರಸ್ತರಿಗೆ 50.45 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದೌರ್ಜನ್ಯ ತಡೆ ಕಾಯ್ದೆಯಡಿ 1 ಕೊಲೆ, 4 ಪೋಕ್ಸೋ, 27 ಇತರೆ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 6 ದೋಷಾರೋಪ ಪಟ್ಟಿ ನೀಡುವ ಹಂತದಲ್ಲಿವೆ. ಸಂತ್ರಸ್ತರಿಗೆ ಎಫ್‌ಐಆರ್ ಹಂತದಲ್ಲಿ 37.95 ಲಕ್ಷ ರೂ., ಚಾರ್ಜ್‌ಶೀಟ್ ಹಂತದಲ್ಲಿ 12 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. ಇದರಲ್ಲಿ 42 ಎಸ್ಸಿ, 18 ಎಸ್ಟಿ ಜನರಿದ್ದಾರೆ ಎಂದು ವಿವರಿಸಿದರು.

ಹದಡಿ ಠಾಣಾ ವ್ಯಾಪ್ತಿಯ ಪೋಕ್ಸೋ ಪ್ರಕರಣವೊಂದರಲ್ಲಿ ಸಂತ್ರಸ್ತೆ ಕುಟುಂಬಕ್ಕೆ 1.5 ಲಕ್ಷ ರೂ. ಪರಿಹಾರ ನೀಡಲಾಗಿತ್ತು. ಬಾಲಕಿಗೆ 18 ವರ್ಷ ತುಂಬಿರದ ಕಾರಣ ಹುಡುಗನನ್ನು ಪೋಕ್ಸೋದಡಿ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಗಿತ್ತು. 18 ವರ್ಷದ ನಂತರ ಹುಡುಗ ಮತ್ತು ಹುಡುಗಿಗೆ ಕುಟುಂಬದವರ ರಾಜಿ ಸಂಧಾನದ ಮೂಲಕ ಮದುವೆ ಮಾಡಿಸಲಾಗಿದೆ.

ಈ ಪ್ರಕರಣದಲ್ಲಿ ದಾಖಲಾಗಿದ್ದ ಪೋಕ್ಸೋ ಪ್ರಕರಣದ ತನಿಖಾ ವರದಿಯ ಬಿ.ರಿಪೋರ್ಟನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ನ್ಯಾಯಾಲಯ ಇದನ್ನು ಪರಿಶೀಲಿಸಿ ಪ್ರಕರಣ ಸಾಬೀತಾಗದ ಹಿನ್ನೆಲೆಯಲ್ಲಿ, ಪರಿಹಾರದ ಮೊತ್ತ ಹಿಂಪಡೆಯುವ ಬಗ್ಗೆ ಕೋರ್ಟ್ ಆದೇಶಿಸಿದ್ದರ ಬಗ್ಗೆ ಸಭೆಯಲ್ಲಿ ಚರ್ಚೆಯಾಯಿತು.

2025 ರಲ್ಲಿ ಮಾರ್ಚ್‌ನಿಂದ ಇದುವರೆಗೆ ದಾಖಲಾದ 32 ದೌರ್ಜನ್ಯ ಪ್ರಕರಣಗಳಲ್ಲಿ 11 ವಿಚಾರಣೆ, 2 ಬಿ ರಿಪೋರ್ಟ್ ಹಾಗೂ 17 ತನಿಖಾ ಹಂತದಲ್ಲಿವೆ. ಕಳೆದ ನಾಲ್ಕು ತಿಂಗಳಲ್ಲಿ ದಾವಣಗೆರೆ- 19, ಹೊನ್ನಾಳಿ-2, ಚನ್ನಗಿರಿ-8, ಹರಿಹರ ಹಾಗೂ ನ್ಯಾಮತಿ ತಾಲೂಕಿನಲ್ಲಿ ತಲಾ ಒಂದೊಂದು ಪ್ರಕರಣ ದಾಖಲಾಗಿವೆ ಎಂದು ಅಧಿಕಾರಿಗಳು ತಿಳಿಸಿದರು.

ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳು;

2025 ರ ಏಪ್ರಿಲ್ ನಲ್ಲಿ 138 ಬಾಕಿ ಇದ್ದ ಪ್ರಕರಣಗಳ ಜತೆಗೆ 7 ಹೊಸ ಕೇಸ್‌ಗಳು ಸೇರಿವೆ. ಇದರಲ್ಲಿ 1 ರಲ್ಲಿ ಬಿಡುಗಡೆಯಾಗಿದೆ. ಮೇ ತಿಂಗಳಲ್ಲಿ 144 ಪ್ರಕರಣಳ ಜತೆಗೆ 4 ಹೊಸ ಪ್ರಕರಣಗಳು ಸೇರಿದ್ದು, 5 ರಲ್ಲಿ ಬಿಡುಗಡೆಯಾಗಿದೆ. ಜೂನ್ ನಲ್ಲಿ 143 ಪ್ರಕರಣಗಳೊಂದಿಗೆ 6 ಹೊಸವು ಸೇರಿ 149 ಪ್ರಕರಣಗಳಿವೆ. ಇದರಲ್ಲಿ 2 ರಲ್ಲಿ ಶಿಕ್ಷೆಯಾಗಿದ್ದು 1ರಲ್ಲಿ ಬಿಡುಗಡೆಯಾಗಿತ್ತು.

ಬಾಕಿ 146 ಪ್ರಕರಣಗಳು ನ್ಯಾಯಾಲಯದಲ್ಲಿವೆ. ಹೆಚ್ಚು ಶಿಕ್ಷೆಯಾಗುವಂತೆ ಇದಕ್ಕೆ ಬೇಕಾದ ಸಾಕ್ಷ್ಯಾಧಾರಗಳನ್ನು ಸರಿಯಾಗಿ ಒದಗಿಸಲು ತನಿಖಾಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು. ನ್ಯಾಯಾಲಯದಲ್ಲಿ ಬಾಕಿ ಇರುವ 146 ಪ್ರಕರಣಗಳಲ್ಲಿ ಈ ವರ್ಷದ 21 ಕೇಸ್‌ಗಳಿವೆ ಎಂದು ಸರ್ಕಾರಿ ಅಭಿಯೋಜಕರು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಹುಲ್ಮನಿ ತಿಮ್ಮಣ್ಣ, ಜಿಪಂ ಮುಖ್ಯ ಯೋಜನಾಧಿಕಾರಿ ಮಲ್ಲಾನಾಯ್ಕ, ಪಾಲಿಕೆ ಆಯುಕ್ತೆ ರೇಣುಕಾ, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಮಹಾಂತೇಶ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನಾಗರಾಜ್, ಸಮಿತಿ ಸದಸ್ಯರಾದ ಕುಂದುವಾಡ ಮಂಜುನಾಥ, ಬಿ.ಎನ್.ಉಮಾ, ಆವರಗೆರೆ ವಾಸು, ಡಿ.ಎಸ್.ಬಾಬಣ್ಣ, ಅಣಜಿ ಅಂಜಿನಪ್ಪ, ಡಾ.ಪಿ..ಎಸ್. ಅರವಿಂದನ್, ಪಿ.ಎಂ.ನಾಗರಾಜ, ರೆಹಮತ್ ಉರ್ ರೆಹಮಾನ್ ಇದ್ದರು.

-------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net