

ದಾವಣಗೆರೆ: ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದಿದ್ದೇವೆ, ಮುಂದಿನ ತರಗತಿಗಳಲ್ಲೂ ತೇರ್ಗಡೆಯಾಗುತ್ತೇವೆ ಎಂಬ ಹುಂಬತನ, ಅತಿಯಾದ ಆತ್ಮವಿಶ್ವಾಸ ವಿದ್ಯಾರ್ಥಿಗಳಲ್ಲಿ ಬೇಡ ಎಂದು ಚಂದನ ವಾಹಿನಿಯ ನಿರೂಪಕ ಎಚ್. ರಾಜಶೇಖರ್ ಕಿವಿಮಾತು ಹೇಳಿದರು.
ಎಸ್ಸೆಸ್ಸೆಲ್ಸಿಯ ಕನ್ನಡ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯಿಂದ ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಶುಕ್ರವಾರ ಕನ್ನಡ ಕುವರ-ಕುವರಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಅತ್ಯುತ್ತಮ ಅಂಕ ಪಡೆದಿದ್ದಕ್ಕೆ ಕುಟುಂಬ ಸದಸ್ಯರ ವಿಶೇಷ ದೃಷ್ಟಿಕೋನಕ್ಕೆ ಪಾತ್ರರಾಗುವ ವಿದ್ಯಾರ್ಥಿಗಳು, ಅಲ್ಲಿ ಸಾಧಿಸಿದ ಗುರಿಯನ್ನು ಎತ್ತರಕ್ಕೆ ಕೊಂಡೊಯ್ಯಬೇಕೇ ಹೊರತಾಗಿ ಕೆಳಹಂತಕ್ಕೆ ಇಳಿಯಬಾರದು. ಮುಂದಿನ ತರಗತಿಗಳ ಕಲಿಕೆಗೆ ಬೇಕಾದ ಸಿದ್ಧತೆ, ಬದ್ಧತೆ ರೂಢಿಸಿಕೊಳ್ಳಬೇಕು. ಬದಲಾಗಿ ಅತಿ ಆತ್ಮವಿಶ್ವಾಸದಲ್ಲಿ ಮುಳುಗಬಾರದು ಎಂದು ಹೇಳಿದರು.
ವಿದ್ಯಾರ್ಥಿ ಹಂತದಲ್ಲಿನ ಆಯ್ಕೆಗಳು ಹೆಚ್ಚಾದಾಗ ಗೊಂದಲಗಳು ಸಹಜ. ಪಿಯು ನಂತರ ಏನನ್ನು ಮಾಡಬೇಕೆಂಬ ಬಗ್ಗೆ ಮಾರ್ಗದರ್ಶಕರ ಸಲಹೆ ಪಡೆಯಬೇಕು. ಪ್ರತಿ ಓದಿಗೂ ತಕ್ಕದಾದ ದಾರಿ ಇದ್ದೇ ಇದೆ. ಶಿಕ್ಷಣದಲ್ಲಿನ ಆಳ ಅಧ್ಯಯನದಿಂದ ಜ್ಞಾನ ಹೆಚ್ಚಲಿದೆ. ಸಂತೃಪ್ತಿಯೂ ಸಿಗಲಿದೆ ಎಂದರು.
ಶಿಕ್ಷಣ ಇರುವುದು ಜ್ಞಾನಾರ್ಜನೆಗಾಗಿಯೇ ಹೊರತು ಕೇವಲ ಉದ್ಯೋಗಾವಕಾಶಕ್ಕಾಗಿ ಅಲ್ಲ. ಮುಂದಿನ ಹಂತದ ಓದಿಗೆ ಯಾವ ಕೋರ್ಸ್ ಆಯ್ಕೆ ಮಾಡಿಕೊಂಡರೂ ಓದು ಕರಗತ ಮಾಡಿಕೊಳ್ಳಬೇಕು. ಜ್ಞಾನ ವೃದ್ಧಿಸಿಕೊಂಡಲ್ಲಿ ಉದ್ಯೋಗ ಅರಸಿ ಬರಲಿದೆ ಎಂದು ಹೇಳಿದರು.
ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಮೈಸೂರು ಜಿಲ್ಲಾಧ್ಯಕ್ಷ ಡಾ. ನಾಗರಾಜ್ ಬೈರಿ ಮಾತನಾಡಿ ಇಂಗ್ಲಿಷ್ ಒಂದೇ ನಮ್ಮ ಬದುಕು ಸೃಷ್ಟಿಸಲಿದೆ, ಕನ್ನಡದಿಂದ ಅದು ಆಗದು ಎಂಬ ಮನೋಭಾವವನ್ನು ಕನ್ನಡದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ತಳ್ಳಿ ಹಾಕಿದ್ದಾರೆ. ಎಲ್ಲರಲ್ಲೂ ಇಂದು ಕನ್ನಡಾಭಿಮಾನ ಬೇಕು ಎಂದರು.
ವಿಶ್ವದ 200 ರಾಷ್ಟ್ರಗಳಲ್ಲಿ ಇಂಗ್ಲಿಷ್ ಬಳಕೆಯ ದೇಶಗಳಿರುವುದು 47 ಮಾತ್ರ. ಉಳಿದ ರಾಷ್ಟ್ರಗಳಲ್ಲಿ ತಮ್ಮದೇ ಮಾತೃಭಾಷೆಯಲ್ಲಿ ಲ್ಲಿನ ಜನರು ಬದುಕು ಕಟ್ಟಿಕೊಂಡಿದ್ದಾರೆ. ಇಂದಿನ ಎಐ ತಂತ್ರಜ್ಞಾನ ಹಾಗೂ ಇತರೆ ಆ್ಯಪ್‌ಗಳಿಂದಾಗಿ ಆಯಾ ಭಾಷೆಗೆ ತರ್ಜುಮೆ ಮಾಡುವುದು ಸುಲಭವಾಗಿದೆ.
ಇಂಗ್ಲಿಷ್‌ನಿಂದಲೇ ಬದುಕಿದೆ ಎಂಬ ಬೂಟಾಟಿಕೆ ಸರಿಯಲ್ಲ. ಬೆಂಗಳೂರು ಹೊರತಾಗಿ ರಾಜ್ಯದ ಉಳಿದೆಲ್ಲ ಜಿಲ್ಲೆಗಳಲ್ಲೂ ಕನ್ನಡವನ್ನೇ ಜನರು ಬದುಕಾಗಿಸಿಕೊಂಡಿದ್ದಾರೆ. ಅದರಿಂದಲೇ ವ್ಯವಹಾರ ಮಾಡುತ್ತಿದ್ದಾರೆ ಎಂದರು.
ಕನ್ನಡ ಭಾಷೆ ತಮಿಳಿನಿಂದಲೇ ಹುಟ್ಟಿದ್ದು ಎಂಬುದಾಗಿ ಚಿತ್ರನಟ ಕಮಲ್‌ಹಾಸನ್ ನೀಡಿದ್ದ ಹೇಳಿಕೆ ರಾಜ್ಯದಲ್ಲಿ ಕೋಲಾಹಲದ ವಾತಾವರಣ ಸೃಷ್ಟಿಸಿತು. ಆತನ ಚಿತ್ರವನ್ನು ಆರಂಭದಲ್ಲಿ ನಿಷೇಧಿಸಲಾಯಿತು. ಕನ್ನಡದ ಇತಿಹಾಸವನ್ನು ಕೆಲವರು ಹೆಕ್ಕಿ ತೆಗೆಯಲು ಅವಕಾಶ ಸೃಷ್ಟಿಯಾಯಿತು. ನಿಂದಕರಿರಬೇಕು ಎಂಬ ವಚನದಂತೆ ಆತನ ವಿವಾದಿತ ಹೇಳಿಕೆಯಿಂದ ರಾಜ್ಯಕ್ಕೆ ಅನುಕೂಲವೇ ಆಯಿತು ಎಂದು ಹೇಳಿದರು.
600ಕ್ಕೂ ಹೆಚ್ಚು ಮಕ್ಕಳಿಗೆ ಪ್ರಶಸ್ತಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕಲಾಕುಂಚ ಸಂಸ್ಥೆಯ ಸಂಸ್ಥಾಪಕ ಸಾಲಿಗ್ರಾಮ ಗಣೇಶ ಶೆಣೈ, ಅಧ್ಯಕ್ಷ ಕೆ.ಎಚ್. ಮಂಜುನಾಥ್, ಗೌರವಾಧ್ಯಕ್ಷ ಶಾಂತಪ್ಪ ಪೂಜಾರಿ, ಮಹಿಳಾ ವಿಭಾಗದ ಅಧ್ಯಕ್ಷೆ ಹೇಮಾ ಶಾಂತಪ್ಪ ಪೂಜಾರಿ, ಜ್ಯೋತಿ ಗಣೇಶ್ ಶೆಣೈ, ವಾಸಂತಿ ಮಂಜುನಾಥ್, ಕೆ.ಸಿ. ಉಮೇಶ್ ಇದ್ದರು.