

ದಾವಣಗೆರೆ: ಹಳೆಯ ಖಾಸಗಿ ಶಿಕ್ಷಣ ಸಂಸ್ಥೆಗಳ ಮಾನ್ಯತೆ ನವೀಕರಣಕ್ಕೆ ಕೇಂದ್ರ ಸರ್ಕಾರ ನಿಬಂಧನೆಗಳನ್ನು ಕೈಬಿಡಬೇಕು. ಈ ಸಂಬಂಧ ಮುಖ್ಯಮಂತ್ರಿ ಜತೆ ಸಮಾಲೋಚಿಸಲಾಗುವುದು ಎಂದು ಎಂಎಲ್ಸಿ ಡಿ.ಟಿ.ಶ್ರೀನಿವಾಸ್ ಭರವಸೆ ನೀಡಿದರು.
ದಾವಣಗೆರೆ ಜಿಲ್ಲಾ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದಿಂದ ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ, ಜಿಲ್ಲಾ ಅತ್ಯುತ್ತಮ ಶಿಕ್ಷಕ ಸೇವಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
30-40 ವರ್ಷ ಸೇವೆ ಸಲ್ಲಿಸಿದ ಖಾಸಗಿ ಶಾಲೆಗಳಿಗೆ ಶಾಶ್ವತ ಮಾನ್ಯತೆ ನವೀಕರಣಕ್ಕೆ ಕಟ್ಟಡ, ಅಗ್ನಿ ಸುರಕ್ಷತೆ ಇತ್ಯಾದಿ ಎನ್‌ಒಸಿ ಪತ್ರ ತರುವ ಷರತ್ತುಗಳು ಅನಗತ್ಯ. ಇದು ಆಡಳಿತ ಮಂಡಳಿ ಹಾಗೂ ಮುಖ್ಯ ಶಿಕ್ಷಕರಿಗೆ ಹೊರೆಯಾಗಲಿದೆ. ಭ್ರಷ್ಟಾಚಾರವೂ ಹೆಚ್ಚಲಿದೆ. ಸುಪ್ರೀಂಕೋರ್ಟ್ ನಿರ್ದೇಶನದಂತೆ 2018ನೇ ಇಸವಿಗೂ ಪೂರ್ವದಲ್ಲಿನ ಖಾಸಗಿ ಶಾಲೆಗಳಿಗೆ ಇದರಿಂದ ವಿನಾಯ್ತಿ ನೀಡಬೇಕು. ಹೊಸ ಶಾಲೆಗಳಿಗೆ ಷರತ್ತನ್ನು ಅನ್ವಯ ಮಾಡಲಿ ಎಂದು ಒತ್ತಾಯಿಸಿದರು.
ಶಿಕ್ಷಕರ ಕಲ್ಯಾಣ ನಿಧಿಗೆ ಖಾಸಗಿ ಶಾಲಾ ಟೀಚರ್‌ಗಳಿಂದ ವಾರ್ಷಿಕವಾಗಿ ಸಂಗ್ರಹಿಸುವ 25 ರೂ.ಗಳ ಹಣವನ್ನು ಅದೇ ಶಿಕ್ಷಕರ ಒಳಿತಿಗೆ ಬಳಸಬೇಕು. ಖಾಸಗಿ ಶಿಕ್ಷಕರಿಗಾಗಿ ಆರೋಗ್ಯ ವಿಮೆ ಜಾರಿ ತರುವ ಹೇಳಿಕೆಗೆ ಈಗಲೂ ಬದ್ಧನಿದ್ದೇನೆ. ಇದನ್ನು ಪ್ರಾಮಾಣಿಕವಾಗಿ ಈಡೇರಿಸಲಾಗುವುದು ಎಂದು ಹೇಳಿದರು.
ಸರ್ಕಾರ ಈಗಾಗಲೆ ಏಳನೇ ವೇತನ ಆಯೋಗ ಜಾರಿ ಮಾಡಿದೆ. ಶಿಕ್ಷಕರ ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಹಳೆಯ ಪಿಂಚಣಿ ಜಾರಿಗೆ ತೀರ್ಮಾನಿಸಿದೆ. ಎಕ್ಸ್‌ಗ್ರೇಷಿಯಾ ತಿದ್ದುಪಡಿ ಸಂಬಂಧ ನೇಮಿಸಲಾದ ಸಮಿತಿ ವರದಿ ನೀಡಬೇಕಿದೆ ಎಂದ ಅವರು, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ದಾವಣಗೆರೆ ಜಿಲ್ಲೆ 23ರಿಂದ ಐದನೇ ಸ್ಥಾನಕ್ಕೆ ಬರಬೇಕಾದರೆ ಸರ್ಕಾರಿ ಶಾಲೆಗಳ ಜತೆಗೆ ಖಾಸಗಿ ಶಾಲಾ ಶಿಕ್ಷಕ ಒಗ್ಗೂಡಿ ಕೆಲಸ ಮಾಡಬೇಕಿದೆ ಎಂದು ಆಶಿಸಿದರು.
ಶಿಕ್ಷಕ ವೃತ್ತಿ ಇಂದಿಗೂ ಪಾವಿತ್ರೃತೆ ಉಳಿಸಿಕೊಂಡಿದೆ. ಹಿಂದಿನಂತೆ ಗೌರವವನ್ನು ಎತ್ತಿ ಹಿಡಿಯುವ ಜವಾಬ್ದಾರಿ ಶಿಕ್ಷಕರ ಹೆಗಲ ಮೇಲಿದೆ ಎಂದ ಅವರು, ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದಿಂದ ಸಹಕಾರ ಬ್ಯಾಂಕ್ ಆರಂಭಿಸುವಂತೆಯೂ ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮಾತನಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಉತ್ತಮಪಡಿಸುವ ಅಗತ್ಯವಿದೆ. ಇದರ ಜತೆಗೆ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಯೂ ಆಗಬೇಕಿದೆ. ಪಾಠದೊಂದಿಗೆ ಆಟಗಳಿಗೂ ಆದ್ಯತೆ ನೀಡಬೇಕೆಂದರು.
ಎಷ್ಟೋ ಪದವೀಧರರು ಹಾಗೂ ವೃತ್ತಿಪರರಿಗೆ ಹಣಕಾಸು ವ್ಯವಹಾರಗಳ ತಿಳಿವಳಿಕೆ ಇರುವುದಿಲ್ಲ. ಅಂಕ ಗಳಿಕೆಯ ಭರಾಟೆಯಲ್ಲಿ ಉಳಿದ ಕೌಶಲಗಳನ್ನು ಕಡೆಗಣಿಸುವುದೇ ಇದಕ್ಕೆ ಕಾರಣವಾಗಿದೆ. ಜೀವನಕ್ಕೆ ಅಗತ್ಯ ಜ್ಞಾನವನ್ನು ಕೊಡುವುದು ಶಿಕ್ಷಕರ ಹೊಣೆಗಾರಿಕೆಯಾಗಿದೆ ಎಂದು ಹೇಳಿದರು.
ಮಕ್ಕಳ ಮನಸ್ಸು ಕಚ್ಚಾ ಆಗಿರುತ್ತದೆ. ಶಿಕ್ಷಕರ ವರ್ತನೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಹೀಗಾಗಿ ಶಿಕ್ಷಕರು ತಾವೇ ಪುಸ್ತಕ ಅಧ್ಯಯನದ ಹವ್ಯಾಸ ಬೆಳೆಸಿಕೊಂಡಾಗ, ಅದು ವಿದ್ಯಾರ್ಥಿಗಳಲ್ಲಿ ಓದಿಗೆ ಉತ್ತೇಜನ ನೀಡಲಿದೆ. ಮೇಷ್ಟ್ರು ಕೈಯಲ್ಲಿ ಸದಾ ಒಂದು ಪುಸ್ತಕ ಇರಬೇಕು ಎಂದು ಕಿವಿಮಾತು ಹೇಳಿದರು.
ಇದೇ ವೇಳೆ 100 ಮಂದಿ ಖಾಸಗಿ ಶಾಲಾ ಶಿಕ್ಷಕರಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಸೇವಾ ಪ್ರಶಸ್ತಿ ನೀಡಲಾಯಿತು. ಎಸ್ಸೆಸ್ಸೆಲ್ಸಿಯ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಪಂ ಮುಖ್ಯ ಯೋಜನಾಧಿಕಾರಿ ಮಲ್ಲಾನಾಯ್ಕ, ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ, ಡಿಡಿಪಿಐ ಜಿ. ಕೊಟ್ರೇಶ್, ದಕ್ಷಿಣ ವಲಯ ಬಿಇಒ ಪುಷ್ಪಲತಾ, ಜಿಲ್ಲಾ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಎಂ.ಎಸ್. ಸಂತೋಷ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಕೆ.ಎಸ್. ಮಂಜುನಾಥ್ ಅಗಡಿ ಇತರರಿದ್ದರು.
---