ಈಶ್ವರಪ್ಪ ಹೆಸರಲ್ಲಿ ಪ್ರಶಸ್ತಿ ಸ್ಥಾಪನೆಗೆ ಚಿಂತನೆ        ಜಾನಪದ ಜಂಗಮನಿಗೆ ನುಡಿನಮನ   ಗಣ್ಯರು, ಸಾಹಿತಿಗಳಿಂದ ನೆನಪಿನ ಮರವಣಿಗೆ

1000162538.jpg
Published on

ದಾವಣಗೆರೆ: ಮರೆಯಾದ ಜಾನಪದ ಜಂಗಮ, ಜಿಲ್ಲೆಯ ಸಾಂಸ್ಕೃತಿಕ ವಕ್ತಾರ ಡಾ.ಎಂ.ಜಿ.ಈಶ್ವರಪ್ಪ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಸಂಜೆ ನುಡಿನಮನ ಸಲ್ಲಿಸಲಾಯಿತು.
ಹಲವು ಕ್ಷೇತ್ರದ ಗಣ್ಯರು, ಸಾಹಿತಿಗಳು, ಕಾರ್ಮಿಕ ಮುಖಂಡರು, ಕಲಾವಿದರು ಕನ್ನಡ ಮೇಷ್ಟ್ರು ಮಾಡಿದ ಕಾರ್ಯ ಹಾಗೂ ವ್ಯಕ್ತಿತ್ವದ ಮೆಲುಕು ಹಾಕಿದರು. ಅವರ ನೆನಪಿನ ಮೆರವಣಿಗೆ ಮಾಡಿದರು. ಪ್ರತಿಮಾ ಸಭಾದ ಅಪ್ರತಿಮ ರಂಗಕರ್ಮಿ ಈಶ್ವರಪ್ಪ ಹೆಸರಲ್ಲಿ ಜಿಲ್ಲಾ ಮಟ್ಟದ ಪ್ರಶಸ್ತಿ ಸ್ಥಾಪನೆ ಮಾಡುವ ಚಿಂತನೆಗೆ ಸಭೆ ನಾಂದಿಯಾಡಿತು.
ಪತ್ರಕರ್ತ, ಒಡನಾಡಿ ಬಿ.ಎನ್.ಮಲ್ಲೇಶ್ ಮಾತನಾಡಿ ಈಶ್ವರಪ್ಪನವರು ಒಡನಾಟಕ್ಕೆ ಬಂದವರ ಹೃದಯಕ್ಕೆ ಇಳಿಯುತ್ತಿದ್ದರೇ ಹೊರತಾಗಿ ತಲೆಯಲ್ಲಿ ಕೂರುತ್ತಿರಲಿಲ್ಲ. ಕೆಟ್ಟವರಲ್ಲೂ ಒಳ್ಳೆಯತನ ಕಂಡುಕೊಂಡು ತಮ್ಮತ್ತ ಸೆಳೆಯುವಂಥ ಸೂಜಿಗಲ್ಲಿನ ಸ್ವಭಾವ ಅವರಲ್ಲಿತ್ತು. ಯಾರನ್ನೂ ಹೀಯಾಳಿಸದ, ಎಲ್ಲರೊಳಗೊಂದಾಗುವ ಹೃದಯ ಶ್ರೀಮಂತಿಕೆ ಅವರದಾಗಿತ್ತು. ಅವರು ಇನ್ನೂ 10 ವರ್ಷ ಬದುಕಬೇಕಿತ್ತು ಎಂದರು.  
ವೃತ್ತಿರಂಗಭೂಮಿ ಹೊರತಾದ ನಾಟಕಗಳನ್ನು ನೋಡದ ಕಾಲದಲ್ಲಿ ಈಶ್ವರಪ್ಪನವರು ಪ್ರತಿಮಾ ಸಭಾ ಕಟ್ಟಿ, ಅದರ ಸದಸ್ಯತ್ವಕ್ಕೆ ಪೈಪೋಟಿ ಬರುವಂತೆ ಸಾಂಸ್ಕೃತಿಕ ಅಭಿರುಚಿ ಬೆಳೆಸಿದರು. ಸಾಂಸ್ಕೃತಿಕ ಜೀವಂತಿಕೆ ತುಂಬಿದರು. ನನ್ನಂಥಹ ಅನೇಕರನ್ನು ಒಂದು ಸೂತ್ರದಲ್ಲಿ ಬಂಧಿಸಿ ಕೆಲಸ ಮಾಡಿಸುವ ಕ್ರಿಯಾಶೀಲತೆ, ಬದ್ಧತೆ ಅವರಲ್ಲಿತ್ತು. ಅವರ ನಂತರ ಸಾಂಸ್ಕೃತಿಕ ವಾರಸುದಾರರು ಎಂಬ ಪ್ರಶ್ನೆ ಕಾಡುತ್ತಿದೆ. ಅವರ ಹೆಸರಲ್ಲಿ ಪ್ರಶಸ್ತಿ ಸ್ಥಾಪಿಸುವ ಸಂಬಂಧ ಈಶ್ವರಪ್ಪನವರ ಕುಟುಂಬದೊಂದಿಗೆ ಚರ್ಚಿಸಿ ತೀರ್ಮಾನಿಸುವುದಾಗಿ ಹೇಳಿದರು.
ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಮಾತನಾಡಿ ಈಶ್ವರಪ್ಪ ಅವರ ನೇತೃತ್ವದಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸುವ ಆಶಯವಿತ್ತು, ದುರದೃಷ್ಟವಶಾತ್ ಅದು ಸಾಧ್ಯವಾಗುತ್ತಿಲ್ಲ. ಕಾರ್ಯಕ್ರಮಗಳಲ್ಲಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬಂದು ಕೊನೆ ಸಾಲಿನಲ್ಲಿ ಕೂತು ಭಾಗಿಯಾಗುತ್ತಿದ್ದ ಸರಳತೆ ಅವರದಾಗಿತ್ತು ಎಂದರು.
ನಿವೃತ್ತ ಪ್ರಾಧ್ಯಾಪಕ ಡಾ. ಎಚ್.ಎಸ್. ಮಂಜುನಾಥ ಕುರ್ಕಿ ಮಾತನಾಡಿ ಕಳೆದ ವರ್ಷ ಈಶ್ವರಪ್ಪರಿಗೆ ಶಿವಕುಮಾರಸ್ವಾಮಿ ಪ್ರಶಸ್ತಿ ಬಂದಾಗ ಅವರ ಅಭಿನಂದನಾ ಪತ್ರ ಬರೆಯುವ ಸಿಕ್ಕಿದ್ದು ನನ್ನ ಸೌಭಾಗ್ಯ. ಅವರಿಲ್ಲದ ಸಾಂಸ್ಕೃತಿಕ ಕ್ಷೇತ್ರ ಮೌಲ್ಯ ಕಳೆದುಕೊಂಡಂತಾಗಿದೆ ಎಂದು ಹೇಳಿದರು.
ರಂಗಕರ್ಮಿ ಬಾ.ಮಾ. ಬಸವರಾಜಯ್ಯ ಮಾತನಾಡಿ ಬಳ್ಳಾರಿ ಜೈಲಿನಲ್ಲಿದ್ದಾಗಲೂ ಅಲ್ಲಿದ್ದವರಿಂದಲೇ ನಾಟಕ ಮಾಡಿಸಿದ್ದು ಈಶ್ವರಪ್ಪ ಅವರ ಕ್ರಿಯಶೀಲತೆಗೆ ಸಾಕ್ಷಿ. ಭಾಷಾ ತಜ್ಞ, ಜನಪದ ತಜ್ಞ, ರಂಗಕರ್ಮಿ ಹೀಗೆ ಹಲವು ಮಜಲುಗಳಲ್ಲಿ ಪರಿಣತಿ ಹೊಂದಿದ್ದ ಅವರಂಥ ಸಂಕೀರ್ಣ ವ್ಯಕ್ತಿತ್ವ ಕಂಡಿಲ್ಲ ಎಂದರು.
ಲೇಖಕ ಆನಂದ ಋಗ್ವೇದಿ ಮಾತನಾಡಿ ವಿಜ್ಞಾನದ ವಿದ್ಯಾರ್ಥಿಗಳಲ್ಲಿ ಸಾಹಿತ್ಯ, ಸಾಂಸ್ಕೃತಿಕ ಅಭಿರುಚಿ ಬೆಳೆಸಿದ್ದ ಈಶ್ವರಪ್ಪ, ವ್ಯಕ್ತಿತ್ವವನ್ನೂ ರೂಪಿಸಿದರು. ಅವರ ಶಿಷ್ಯತ್ವ ಪಡೆದದ್ದು ನನ್ನ ಭಾಗ್ಯ ಎಂದು ಸ್ಮರಿಸಿದರು.
ಬಿಐಇಟಿ ಕಾಲೇಜಿನ ನಿರ್ದೇಶಕ ಪ್ರೊ. ವೈ.ವೃಷಭೇಂದ್ರಪ್ಪ ಮಾತನಾಡಿ ಈಶ್ವರಪ್ಪ ಎಡ ಮತ್ತು ಬಲಪಂಥವೂ ಅಲ್ಲದ ಮಧ್ಯ ಪಂಥೀಯ ಚಿಂತಕರಾಗಿದ್ದರು. ಇನ್ನು ಮುಂದೆ ಅವರಂಥ ವಾಗ್ಮಿ ಕೊರತೆ ಕಾಡುತ್ತದೆ ಎಂದರು.
ಪ್ರಾಧ್ಯಾಪಕ ದಾದಾಪೀರ್ ನವಿಲೇಹಾಳ್ ಮಾತನಾಡಿ ಮೇಷ್ಟ್ರಿಗೆ ಹೇಗೆ ಡ್ರೆಸ್ ಸೆನ್ಸ್ ಇರಬೇಕೆಂಬುದಕ್ಕೆ ಈಶ್ವರಪ್ಪ ಮಾದರಿಯಾಗಿದ್ದರು. ಅವರ ಮಾತು ಮೇಲ್ನೋಟಕ್ಕೆ ಸರಳ ಎನಿಸಿದ್ದರೂ ಸೂಕ್ಷ್ಮ ಎಚ್ಚರಿಕೆ ಇರುತ್ತಿತ್ತು ಎಂದು ಸ್ಮರಿಸಿದರು.
ರಂಗಕರ್ಮಿ ಚಿಂದೋಡಿ ಶಂಭುಲಿಂಗಪ್ಪ ಮಾತನಾಡಿ ಈಶ್ವರಪ್ಪ ಅವರ ಶಾಶ್ವತ ಹೆಸರು ಉಳಿಯುವಂತೆ ಯೋಜನೆ ರೂಪಿಸಿದಲ್ಲಿ ನೆರವು ನೀಡುವುದಾಗಿ ಪ್ರಕಟಿಸಿದರು.
ವ್ಯಂಗ್ಯಚಿತ್ರಕಾರ ಎಚ್. ಬಿ.ಮಂಜುನಾಥ್ ಈಶ್ವರಪ್ಪ ಸದಾ ಅಧ್ಯಯನಶೀಲರಾಗಿದ್ದರು. ಶೈಕ್ಷಣಿಕ ನಿರ್ದೇಶಕರಾಗಿ ಶಿಸ್ತಿಗೆ ಪ್ರಾಮುಖ್ಯತೆ ನೀಡಿದ್ದರು ಎಂದು ಹೇಳಿದರು.
ನಿವೃತ್ತ ಪ್ರಾಚಾರ್ಯ ಮಲ್ಲಿಕಾರ್ಜುನ ಕಲಮರಳ್ಳಿ ಮಾತನಾಡಿ ಜನಪದ ಕ್ಷೇತ್ರ ಈಶ್ವರಪ್ಪ ಅವರನ್ನು ಆಪ್ತವಾಗಿ ಅಪ್ಪಿಕೊಂಡಿತ್ತು. ಕೃಷಿಗೆ ಸಂಶೋಧನೆ ಮೂಲಕ ಸಾಂಸ್ಕೃತಿಕ ಅನನ್ಯತೆ ತಂದರು. ಮನುಷ್ಯಪ್ರೀತಿಯ ಒರತೆಯಾಗಿ ಬದುಕಿದ್ದರು ಎಂದರು.
ಕಲಾವಿದ ನಾ. ರೇವನ್, ವಕೀಲ ಎಲ್.ಎಚ್. ಅರುಣ್‌ಕುಮಾರ್, ಸುಭಾಷ್ ಚಂದ್ರ, ಎಂ. ಶ್ರೀಧರ್, ಕೆ.ಎಲ್.ಭಟ್,ಶೈಲಜಾ,  ಎಸ್.ಎಂ.ಮಲ್ಲಮ್ಮ, ಹೆಗ್ಗೆರೆ ರಂಗಪ್ಪ, ಮಂಜುನಾಥಾಚಾರ್ ಮೊದಲಾದವರು ಮಾತನಾಡಿದರು.
ಅಂತಿಮ ದರ್ಶನ ಪಡೆದ ಜನಸಮೂಹ
ಬೆಂಗಳೂರಿನಲ್ಲಿ ಶನಿವಾರ ನಿಧನರಾದ ಜಾನಪದ ತಜ್ಞ ಡಾ.ಎಂ.ಜಿ.ಈಶ್ವರಪ್ಪ ಅವರ ಪಾರ್ಥಿವ ಶರೀರವನ್ನು ದಾವಣಗೆರೆಯ ವಿದ್ಯಾನಗರದ ಅವರ ನಿವಾಸದಲ್ಲಿ ಇರಿಸಲಾಗಿತ್ತು. ಅಂತಿಮ ದರ್ಶನಕ್ಕೆ ಜನಸಮೂಹವೇ ಹರಿದುಬಂದಿತ್ತು. ಕೆಲವರು ಸ್ಥಳದಲ್ಲಿ ಕಣ್ಣೀರಾದರು.
ಸಿರಿಗೆರೆಯ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸಾಣೇಹಳ್ಳಿಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಶಿವಮೊಗ್ಗದ ಡಾ.ಬಸವ ಮರುಳಸಿದ್ಧ ಸ್ವಾಮೀಜಿ, ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ಸಂಸದ ಜಿ ಎಂ ಸಿದ್ದೇಶ್ವರ, ಶಾಸಕ ಬಿ.ಪಿ. ಹರೀಶ್, ಮಾಜಿ ಸಚಿವ ಎಸ್. ಎ.ರವೀಂದ್ರನಾಥ, ಗಣ್ಯರಾದ ಅಣಬೇರು ರಾಜಣ್ಣ, ಅಥಣಿ ವೀರಣ್ಣ ಅವರು ಅಂತಿಮ ದರ್ಶನ ಪಡೆದರು.
ಸಾಹಿತಿಗಳಾದ ಡಾ. ಬಿ. ರಾಜಶೇಖರಪ್ಪ, ಡಾ. ಲೋಕೇಶ್ ಅಗಸನಕಟ್ಟೆ, ಕುಂ.ವೀರಭದ್ರಪ್ಪ, ಕಂನಾಡಿಗ ನಾರಾಯಣ, ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ, ಡಾ. ಆನಂದ ಋಗ್ವೇದಿ, ವ್ಯಂಗ್ಯಚಿತ್ರಕಾರ ಎಚ್.ಬಿ.ಮಂಜುನಾಥ್, ಬಾತಿ ಬಸವರಾಜ್, ಬಾ.ಮ.ಬಸವರಾಜಯ್ಯ, ಬಿ ಎನ್. ಮಲ್ಲೇಶ್, ಕೆ ಎಸ್ ಈಶ್ವರಪ್ಪ, ನಾ ರೇವನ್, ನಾಗರಾಜ ಸಿರಿಗೆರೆ, ಎನ್.ಟಿ. ಮಂಜುನಾಥ್, ಎಸ್.ಎಸ್. ಸಿದ್ದರಾಜು, ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ,  ತಾಲೂಕು ಅಧ್ಯಕ್ಷೆ ಸುಮತಿ ಜಯಪ್ಪ, ಪರಮೇಶ್ವರಪ್ಪ, ಪರಮೇಶ್ವರಪ್ಪ ಇತರರು ಕೂಡ ನಮನ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net