ಹೆಚ್ಚುತ್ತಿರುವ ಕೌಟುಂಬಿಕ ಬಿರುಕು

1000503418.jpg
Published on

ದಾವಣಗೆರೆ: ಸಂಸ್ಕಾರದ ಕೊರತೆ ಹಾಗೂ ಸ್ವಾವಲಂಬಿ ಬದುಕಿನ ಆಲೋಚನೆ ಕಾರಣಕ್ಕೆ ಕೌಟುಂಬಿಕ ಬಿರುಕು, ವಿವಾಹ ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿವೆ ಎಂದು ಶಿವಮೊಗ್ಗದ ಸಾಹಿತಿ ದೀಪಾ ಕುಬುಸದ್ ಬೇಸರ ವ್ಯಕ್ತಪಡಿಸಿದರು.
ನಗರದ ವನಿತಾ ಸಮಾಜದಲ್ಲಿ  ಹಮ್ಮಿಕೊಂಡಿದ್ದ ವನಿತಾ ಸಾಹಿತ್ಯ ವೇದಿಕೆಯ 30ನೇ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಣ ಹಾಗೂ ಔದ್ಯೋಗಿಕ ಕ್ಷೇತ್ರದಲ್ಲಿ ಮಹಿಳೆಯರಿಗೆ ಅನುಕೂಲತೆ ಆಗಿದ್ದರೂ ಸಾಮಾಜಿಕವಾಗಿ ಬದಲಾವಣೆ ಆಗಬೇಕಿದೆ. ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರ ಹೆಚ್ಚಿದ್ದು ಸುರಕ್ಷತೆ ಸವಾಲಾಗಿದೆ. ಹೀಗಾಗಿ ಮಹಿಳೆಯರ ಮೇಲಿನ ಹಿಂಸೆ, ದೌರ್ಜನ್ಯದ ವಿರುದ್ಧ್ಧ ಕಾನೂನುಗಳು ಇನ್ನಷ್ಟು ಕಠಿಣ ಆಗಬೇಕಿವೆ ಎಂದು ಆಶಿಸಿದರು.
ಇಂದು ಅವಿಭಕ್ತ ಕುಟುಂಬ ವ್ಯವಸ್ಥೆ ಮಾಯವಾಗಿದೆ. ಇಂದಿನ ಸಾಮಾಜಿಕ ವ್ಯವಸ್ಥೆ ಸರಿಪಡಿಸುವ ಭಾಗವಾಗಿ ತಾಯಂದಿರು ಮಕ್ಕಳಿಗೆ ಸಂಸ್ಕೃತಿ ಪಾಠ ಕಲಿಸಬೇಕಿದೆ. ಸ್ತ್ರೀ ಸಬಲೀಕರಣಕ್ಕೆ ಸರ್ಕಾರ ಗಮನ ನೀಡಬೇಕಿದೆ ಎಂದರು.
ಮಾತೃ ಭಾಷೆ ನಮ್ಮ ಹೃದಯದ ಭಾಷೆಯಾಗಿದೆ. 2 ಸಾವಿರ ವರ್ಷದ ಇತಿಹಾಸ ಹೊಂದಿದ ಕನ್ನಡ, ಕರ್ನಾಟಕದಿಂದ ಕಣ್ಮರೆಯಾಗುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ. ಕನ್ನಡಿಗರ ಅಭಿಮಾನ ನವೆಂಬರ್‌ಗೆ ಸೀಮಿತವಾಗಿದೆ. ಕನ್ನಡ ಉಳಿವಿಗಾಗಿ ಹೋರಾಟ ಮಾಡಬೇಕೆ ಎಂಬುದು ಉತ್ತರ ಸಿಗದ ಪ್ರಶ್ನೆಯಾಗಿದೆ ಎಂದು ಹೇಳಿದರು.
ಹೊನ್ನೇನಹಳ್ಳಿ ಹನುಮಕ್ಕ ನಂಜಪ್ಪ ಮೆಳ್ಳ್ಳೇಕಟ್ಟೆ ಅವರ ಸ್ಮರಣಾರ್ಥವಾಗಿ ನೀಡುವ ಜಿಲ್ಲಾ ವನಿತಾ ಸಾಹಿತ್ಯಶ್ರೀ ಪ್ರಶಸ್ತಿಯನ್ನು ಪಾಂಡೋಮಟ್ಟಿಯ ಸಾಹಿತಿ ಸರೋಜಾ ನಾಗರಾಜ್ ಅವರಿಗೆ ಪ್ರದಾನ ಮಾಡಲಾಯಿತು.
ವನಿತಾ ಸಾಹಿತ್ಯ ವೇದಿಕೆ, ಜನತಾವಾಣಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಯಶೀಲಾ ಷಡಾಕ್ಷರಪ್ಪ,  ವನಿತಾ ಸಾಹಿತ್ಯ ವೇದಿಕೆಯ ಅಧ್ಯಕ್ಷೆ ಮಲ್ಲಮ್ಮ ನಾಗರಾಜ್, ಕಾರ್ಯದರ್ಶಿ ಪದ್ಮ ಪ್ರಕಾಶ್, ಚಿನ್ನ-ಬೆಳ್ಳಿ ಉದ್ಯಮಿ ನಲ್ಲೂರು ಲಕ್ಷ್ಮ್ಮಣರಾವ್, ಲೇಖಕಿ ಟಿ.ಎಸ್. ಶೈಲಜಾ, ವೀಣಾ ಕೃಷ್ಣಮೂರ್ತಿ ಇದ್ದರು. ಕಾರ್ಯಕ್ರಮಕ್ಕೂ ಮುನ್ನ ಆಯೋಜಿಸಿದ್ದ ಕವಿಗೋಷ್ಠಿಯಲ್ಲಿ 20ಕ್ಕೂ ಹೆಚ್ಚು ಕವಿಗಳು ಕವಿತೆ ವಾಚಿಸಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net