

ದಾವಣಗೆರೆ: ಕನ್ನಡ ಸಾಹಿತ್ಯ ಪರಿಷತ್ತು, ಅನುವಾದ ಸಾಹಿತ್ಯಕ್ಕಾಗಿ ಕೊಡಮಾಡುವ 2023ರ ‘ಶ್ರೀಮತಿ ಭಾರತಿ ಮೋಹನ ಕೋಟಿ ದತ್ತಿನಿಧಿ ಪುಸ್ತಕ ಬಹುಮಾನ ಪ್ರಶಸ್ತಿ’ಯನ್ನು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದಾವಣಗೆರೆಯ ಹಿರಿಯ ಸಾಹಿತಿ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಪ್ರೊ. ಎಸ್.ಬಿ. ರಂಗನಾಥ್ ಅವರಿಗೆ ಗುರುವಾರ ಪ್ರದಾನ ಮಾಡಿ ಗೌರವಿಸಲಾಯಿತು.
ಅನಾರೋಗ್ಯ ಕಾರಣದಿಂದಾಗಿ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ರಂಗನಾಥ್ ಭಾಗಿಯಾಗಿರಲಿಲ್ಲ. ಕಸಾಪ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿಯವರ ನಿರ್ದೇಶನದಂತೆ ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಹಾಗೂ ಪದಾಧಿಕಾರಿಗಳು, ಎಸ್.ಬಿ.ರಂಗನಾಥ್ ಅವರ ನಿವಾಸಕ್ಕೆ ತೆರಳಿ ಪ್ರಶಸ್ತಿ ಫಲಕ ಮತ್ತು 10 ಸಾವಿರ ರೂ. ನಗದನ್ನು ನೀಡಿ ಗೌರವಿಸಿದರು.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದ, ಖ್ಯಾತ ಲೇಖಕ ಶಶಿ ತರೂರ್ ಅವರ ‘ಆ್ಯನ್ ಎರಾ ಆಫ್ ಡಾರ್ಕ್‌ನೆಸ್’ (ಕಗ್ಗತ್ತಲ ಕಾಲ) ಕೃತಿಯನ್ನು ರಂಗನಾಥ್ ಅವರು ಕನ್ನಡಕ್ಕೆ ಅನುವಾದಿಸಿದ್ದರು. 2022ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯು ಈ ಕೃತಿಯನ್ನು ಪ್ರಕಟಿಸಿತ್ತು.
ವಾಮದೇವಪ್ಪ ಅವರೊಂದಿಗೆ ಜಿಲ್ಲಾ ಕೋಶಾಧ್ಯಕ್ಷ ಕೆ.ರಾಘವೇಂದ್ರ ನಾಯರಿ, ಜಿಲ್ಲಾ ನಿರ್ದೇಶಕರಾದ ಎಸ್.ಎಂ. ಮಲ್ಲಮ್ಮ, ರುದ್ರಾಕ್ಷಿ ಬಾಯಿ, ತಾಲೂಕು ಅಧ್ಯಕ್ಷೆ ಸುಮತಿ ಜಯಪ್ಪ, ತಾಲೂಕು ಕಾರ್ಯದರ್ಶಿಗಳಾದ ನಾಗರಾಜ ಸಿರಿಗೆರೆ, ದಾಗಿನಕಟ್ಟೆ ಪರಮೇಶ್ವರಪ್ಪ, ನಿರ್ದೇಶಕ ಎಂ.ಷಡಾಕ್ಷರಪ್ಪ ಬೇತೂರು ಹಾಗೂ ಇತರರಿದ್ದರು.
---