ಶೀಘ್ರವೇ ಭಕ್ತಿ ಸಾಹಿತ್ಯ ಸಮ್ಮೇಳನ  ಚನ್ನವೀರಸ್ವಾಮಿ ಹಿರೇಮಠ ಹೇಳಿಕೆ  ಸಾಧಕರಿಗೆ ಪ್ರಶಸ್ತಿ ವಿತರಣೆ

1000127515.jpg
Published on

ದಾವಣಗೆರೆ: ಪಂ. ಪುಟ್ಟರಾಜ ಸೇವಾ ಸಮಿತಿಯಿಂದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಮಾದರಿಯಲ್ಲಿ ಭಕ್ತಿ ಸಾಹಿತ್ಯ ಸಮ್ಮೇಳನ ನಡೆಸಲು ಯೋಜಿಸಲಾಗಿದೆ ಎಂದು ಸಮಿತಿ ಸಂಸ್ಥಾಪಕ ಚನ್ನವೀರಸ್ವಾಮಿ ಹಿರೇಮಠ ಹೇಳಿದರು.
ಸಮಿತಿಯಿಂದ ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪಂ. ಪುಟ್ಟರಾಜ ಗುರುವರ್ಯರ ಅಭಿಮಾನಿ ಭಕ್ತರ ಸಮಾವೇಶ ಸಮಾರೋಪ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭಕ್ತಿ ಸಮ್ಮೇಳನ ನಡೆಸಬೇಕೆಂಬುದು ಸಮಿತಿಯ ಪ್ರಸಕ್ತ ವರ್ಷದ ಯೋಜನೆಯಾಗಿದ್ದು, ಭಕ್ತಿ ಸಂಗೀತ, ವಚನ ಸಂಗೀತ, ತತ್ವಪದ ಹಾಗು ವಚನ ನೃತ್ಯಗಳನ್ನು ಸಮ್ಮೇಳನದಲ್ಲಿ ಗೋಷ್ಠಿಗಳ ರೂಪದಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದು ತಿಳಿಸಿದರು.
ಭಕ್ತಿ ಸಾಹಿತ್ಯ ರಚನೆಯಲ್ಲಿ ತೊಡಗಿದವರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಿದ್ದು, ರಾಜ್ಯದ ಆಯಾ ಪರಿಸರದ ಭಕ್ತಿ ಪಂಥದ ದಾರ್ಶನಿಕರನ್ನು ಸಮ್ಮೇಳನದಲ್ಲಿ ಸ್ಮರಿಸಲಾಗುವುದು. ಮುಂದಿನ ದಿನಗಳಲ್ಲಿ ಸಭೆ ನಡೆಸಿ ಸಮ್ಮೇಳನದ ಬಗ್ಗೆ ತೀರ್ಮಾನಿಸಲಾಗುವುದು ಎಂದರು.
ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಪ್ರಶಸ್ತಿ ಪ್ರದಾನಿಸಿ ಮಾತನಾಡಿ, ಸಂಗೀತ ಕ್ಷೇತ್ರದಲ್ಲಿ ಅದ್ಭುತ ಪರಿಣಿತಿ ಹೊಂದಿದ್ದ ಪಂ. ಪುಟ್ಟರಾಜ ಗವಾಯಿಗಳು ಸಂಗೀತದ ಮೂಲಕ ಅಂಧರಿಗಾಗಿ ತಮ್ಮ ಜೀವನವನ್ನೇ ಮುಡುಪಾಗಿರಿಸಿದ್ದರು ಎಂದು ಸ್ಮರಿಸಿದರು.
ದಾವಣಗೆರೆ ಸಂಗೀತ ಶಿಕ್ಷಕ ಎಂ.ಕೆ. ರೇವಣಸಿದ್ದಪ್ಪ, ಹಾವೇರಿಯ ಶಿವರಾಜ ಹ. ಉಜ್ಜನಿ, ಡಾ.ಗೀತಾ ಸುತ್ತಕೋಟಿ, ಧಾರವಾಡದ ಸೌಮ್ಯಾ ಸತೀಶ್, ಹಳಿಯಾಳದ ಬಸವರಾಜ ಹಡಪದ ಹಾಗೂ ಇಂಡಿಯ ಸರೋಜಿನಿ ಕಾ. ಮಾವಿನಮರ ಇವರಿಗೆ ಗುರು ಸೇವಾ ರತ್ನ ರಾಷ್ಟ್ರೀಯ ಪ್ರಶಸ್ತಿ ಹಾಗೂ ಬಸವರಾಜೇಶ್ವರಿ ಶಿರೂರ, ಪ್ರಶಾಂತ ಸೊಕ್ಕೆ ಮತ್ತು ಹಾವೇರಿಯ ಅಕ್ಕಮಹಾದೇವಿ ಟಿ. ನೀರಲಗಿ ಇವರಿಗೆ ಗುರು ಸಾಹಿತ್ಯ ಸೇವಾ ಶ್ರೀ ರಾಜ್ಯ ಪ್ರಶಸ್ತಿ ಪ್ರದಾನಿಸಲಾಯಿತು.
ಕದಳಿ ವೇದಿಕೆ ರಾಜ್ಯ ಉಪ ಸಂಚಾಲಕಿ ಪ್ರಮೀಳಾ ನಟರಾಜ್, ಸಮಿತಿ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಬಸಯ್ಯ ಚರಂತಿಮಠ, ಜಿಲ್ಲಾಧ್ಯಕ್ಷ ಪಿ.ಬಿ. ವಿನಾಯಕ ಇತರರು ಇದ್ದರು. ಬೆಳಗ್ಗೆಯಿಂದ ರಾಜ್ಯಮಟ್ಟದ ಕವಿಗೋಷ್ಠಿ, ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳು ನಡೆದವು.
----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net