ಕಾಂಗ್ರೆಸ್‌ನಿಂದ ಮತದಾರರಿಗೆ ಸೀರೆ, ಕುಕ್ಕರ್ ಆಮಿಷ

YASHWANTH RAO JADAV
Published on

ದಾವಣಗೆರೆ: ದಾವಣಗೆರೆ ಉತ್ತರ ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದವರು ಮತದಾರರಿಗೆ ಸೀರೆ, ಕುಕ್ಕರ್ ಹಂಚಿ ಆಮಿಷವೊಡ್ಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಯಶವಂತರಾವ್ ಜಾಧವ್ ಆರೋಪಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನಾಗರಕಟ್ಟೆ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರ ಮನೆಯಲ್ಲಿಯೇ ಹಂಚಿದ್ದ ಕುಕ್ಕರ್ ಸ್ಫೋಟಗೊಂಡು ವ್ಯಕ್ತಿಯೊಬ್ಬರ ಕಣ್ಣಿಗೆ ಹಾನಿಯಾಗಿದೆ. ಆ ಪಕ್ಷದವರು ಉತ್ತಮ ಗುಣಮಟ್ಟದ ಕುಕ್ಕರ್‌ಗಳನ್ನಾದರೂ ಹಂಚಲಿ. 10-15 ಸಾವಿರ ರೂ. ಮೌಲ್ಯದ ರೇಷ್ಮೆ ಸೀರೆ ನೀಡಲಿ ಎಂದು ಹೇಳಿದರು.

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಈ ಬಾರಿ ಮತದಾರರು ಎಚ್ಚೆತ್ತುಕೊಂಡಿದ್ದಾರೆ. ಕಾಂಗ್ರೆಸ್‌ನ ಕುತಂತ್ರ ರಾಜಕಾರಣ ಅವರಿಗೆ ಗೊತ್ತಾಗಿದೆ. ಸುಳ್ಳು ಆಶ್ವಾಸನೆ ನಂಬಿ ಮತ ಹಾಕುತ್ತಿದ್ದ ಕ್ಷೇತ್ರದಲ್ಲಿರುವ 75 ಸಾವಿರ ಅಲ್ಪಸಂಖ್ಯಾತ ಮತದಾರರೂ ಬಿಜೆಪಿ ಬಗ್ಗೆ ಒಲವು ತೋರಿಸುತ್ತಿದ್ದಾರೆ. ಸಾವಿರಾರು ಜನರು ಬಿಜೆಪಿ ಸೇರುತ್ತಿದ್ದಾರೆ ಎಂದು ಹೇಳಿದರು.

ಬಿಜೆಪಿ ಮುಖಂಡರಾದ ಲೋಕಿಕೆರೆ ನಾಗರಾಜ್, ಸೋಗಿ ಶಾಂತಕುಮಾರ್, ರಾಜನಹಳ್ಳಿ ಶಿವಕುಮಾರ್, ಗೋಪಾಲರಾವ್ ಮಾನೆ, ಶಿವನಗೌಡ ಟಿ. ಪಾಟೀಲ್, ಟಿಂಕರ್ ಮಂಜಣ್ಣ, ಪಿ.ಸಿ. ಶ್ರೀನಿವಾಸ್, ಎಲ್.ಡಿ. ಗೋಣೆಪ್ಪ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net