ಹಸ್ತದ ಗುರುತಿನ 16.65 ಲಕ್ಷ ರೂ.ಮೌಲ್ಯದ ಗೃಹಬಳಕೆ ವಸ್ತುಗಳು ವಶ

Davangere, assembly, election,
Published on

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನಾಲಾಬಂದ್ ರಸ್ತೆಯಲ್ಲಿನ ಶೆಡ್‌ನಲ್ಲಿ ಮತದಾರರಿಗೆ ಹಂಚಲು ಅಕ್ರಮವಾಗಿ ದಾಸ್ತಾನು ಮಾಡಿದ್ದ 16.65 ಲಕ್ಷ ರೂ. ಮೌಲ್ಯದ ಗೃಹಬಳಕೆ ವಸ್ತುಗಳನ್ನು ಭಾನುವಾರ ಬೆಳಗಿನ ಜಾವ ವಶಪಡಿಸಿಕೊಳ್ಳಲಾಗಿದೆ.

ಗಾಂಧಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ನಾಲಾಬಂದ್ ರಸ್ತೆಯಲ್ಲಿನ ಮಾಲತೇಶ ಜಾಧವ್ ಎಂಬುವರ ಶೆಡ್‌ನಲ್ಲಿ ಅವು ಪತ್ತೆಯಾಗಿವೆ.

597 ರಟ್ಟಿನ ಬಾಕ್ಸೃ್ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳ ಮೇಲೆ ಎಸ್.ಎಸ್, ಎಸ್.ಎಸ್.ಎಂ. ಅಭಿಮಾನ ಬಳಗ, ಹಸ್ತದ ಗುರುತು ಇರುವ ಮತ್ತು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಭಾವಚಿತ್ರ ಅಂಟಿಸಿರುವುದು ಕಂಡುಬಂದಿದೆ.

ಪತ್ತೆಯಾದ ಬಾಕ್ಸೃ್ಗಳ ಒಳಗೆ ಗೃಹ ಬಳಕೆಗೆ ಸಂಬಂಧಿಸಿದ ನಾನ್‌ಸ್ಟಿಕ್ ಕೋಟಿಂಗ್ ಇರುವ ಕಡಾಯಿ, ಫ್ರೈ ಪ್ಯಾನ್, ಕ್ಯಾರೋಲ್, ವುಡ್ ಸ್ಟಿಕ್‌ಗಳು ಕಂಡುಬಂದಿವೆ.

ಮತದಾರರಿಗೆ ಹಂಚಲು ದಾಸ್ತಾನು ಮಾಡಿರುವ ಅನುಮಾನ ವ್ಯಕ್ತವಾಗಿದ್ದು, ಶೆಡ್‌ನ ಮಾಲೀಕ ಮಾಲತೇಶ ಜಾಧವ್ ಸ್ಥಳಕ್ಕೆ ಬಂದು ಸಹಕರಿಸದ ಕಾರಣ ದಾಸ್ತಾನು ಮಾಡಿದ ಶೆಡ್ ಅನ್ನು ಸೀಲ್ ಮಾಡಿ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ದಾವಣಗೆರೆ ದಕ್ಷಿಣ ಮತ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಬಿ.ಎಂ. ಮಾನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳಾದ ಅನಿಲ್ ಕುಮಾರ್, ಡಿ.ಶಿವಾನಂದ ಹಾಗೂ ಪೊಲೀಸರ ಸಮಕ್ಷಮದಲ್ಲಿ ಪಂಚನಾಮೆ ನಡೆಸಿ ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net