

ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಸಾವಿರಾರು ವರ್ಷಗಳಷ್ಟು ಪುರಾತನ ಪಾರಂಪರಿಕ ದೇಗುಲಗಳು ಶಿಥಿಲಾವಸ್ಥೆಯಲ್ಲಿದ್ದು ಅವುಗಳನ್ನು ಸಂರಕ್ಷಿಸಿ ನವೀಕರಣಗೊಳಿಸುವ ಹಾಗೂ ಪ್ರವಾಸಿ ತಾಣ ಆಗಿಸುವ ಅಗತ್ಯವಿದೆ ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಎಲ್.ಪಿ.ಮಧುಗೌಡ ಹೇಳಿದರು.
ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ದೃಶ್ಯಕಲಾ ಕಾಲೇಜಿನ ಸಹಯೋಗದಲ್ಲಿ ದೃಶ್ಯಕಲಾ ಕಾಲೇಜಿನಲ್ಲಿ ಶುಕ್ರವಾರ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ‘ಪ್ರವಾಸೋದ್ಯಮ ಮತ್ತು ಶಾಂತಿ’ ಚಿತ್ರಕಲಾ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು.
ಸುಮಾರು 6ರಿಂದ 8ನೇ ಶತಮಾನದ ಅವಧಿಯಲ್ಲಿನ ದೇವಸ್ಥಾನಗಳಿವೆ. ಅಂದಿನ ಮೂಲ ಸ್ಥಿತಿಯಂತೆ ನಿರ್ಮಾಣ ಮಾಡಲು ಆಗದಿದ್ದರೂ ಶಿಥಿಲಾವಸ್ಥೆಯ ದೇವಸ್ಥಾನಗಳನ್ನು ಸಂರಕ್ಷಿಸುವ ಅಗತ್ಯವಿದೆ ಎಂದು ಹೇಳಿದರು. ಆನೆಕೊಂಡದ ಬಸವೇಶ್ವರ ಸೇರಿ ಕೆಲ ದೇಗುಲಗಳನ್ನು ನವೀಕರಣಗೊಳಿಸಲಾಗುತ್ತಿದೆ ಎಂದರು.
ರಾಜ್ಯದಲ್ಲಿ ಹೊಸ ಪ್ರವಾಸೋದ್ಯಮ ನೀತಿ ಜಾರಿಯಾಗುತ್ತಿದೆ. ಪ್ರವಾಸಿ ಕ್ಷೇತ್ರಗಳಲ್ಲಿನ ದೊಡ್ಡ ಮಟ್ಟದ ಹೋಟೆಲ್, ರೆಸಾರ್ಟ್‌ಗಳಲ್ಲಿ ತಂಗುವ ಪ್ರವಾಸಿಗರಿಗೆ ಈಗಾಗಲೆ ಮೂಲ ಸೌಕರ್ಯ ಕಲ್ಪಿಸುವ ದಿಸೆಯಲ್ಲಿ ಸಬ್ಸಿಡಿ ನೀಡಲಾಗುತ್ತಿದೆ. ಇದನ್ನು ಇತರೆ ಹೋಟೆಲ್‌ಗಳಲ್ಲಿಯೂ ಮುಂದುವರಿಸಬೇಕಿದೆ. ಹೀಗಾದಲ್ಲಿ ಪ್ರವಾಸೋದ್ಯಮ ಇಲಾಖೆಗೆ ಅನುಕೂಲ ಆಗಲಿದೆ ಎಂದು ಹೇಳಿದರು.
ದೃಶ್ಯಕಲಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಸತೀಶ್‌ಕುಮಾರ್ ಪಿ. ವಲ್ಲೇಪುರೆ ಮಾತನಾಡಿ ದಾವಣಗೆರೆಯ ದೃಶ್ಯಕಲಾ ಕಾಲೇಜು ಪಾರಂಪರಿಕ ಕಲಾ ಕಾಲೇಜಾಗಿದೆ. 6 ದಶಕಗಳಲ್ಲಿ ಕಲಾವಿದರ ಕಲಾಕೃತಿ ಒಳಗೊಂಡ ಕಲಾಗ್ಯಾಲರಿ, ಸಮಕಾಲೀನ ಶಿಲ್ಪ ಕಲಾಕೃತಿಗಳು ಇಲ್ಲಿವೆ ಎಂದು ಹೇಳಿದರು.
ಚಿತ್ರಕಲಾ ಶಿಬಿರದ ಮೂಲಕ ಜಿಲ್ಲೆಯ ಗತವೈಭವ ಸಾರುವ ಪ್ರವಾಸಿ ತಾಣ, ವಾಸ್ತುಶಿಲ್ಪಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ. ಈ ಚಿತ್ರ ಕಲಾಕೃತಿಗಳ ಮೂಲಕ ಇತರೆಡೆಯ ಜನರಿಗೆ ಈ ತಾಣಗಳ ಬಗ್ಗೆ ತಿಳಿಯುವ ಮತ್ತು ನೋಡಬೇಕೆಂಬ ಹಂಬಲ ಬೆಳೆಯಲಿದೆ ಎಂದರಲ್ಲದೆ ಚಿತ್ರಕಲಾ ಮಾಧ್ಯಮದ ಮೂಲಕವಾಗಿಯೂ ಪ್ರವಾಸೋದ್ಯಮಕ್ಕೆ ಉತ್ತೇಜನ ತುಂಬುವ ಕೆಲಸ ಆಗಬೇಕಿದೆ ಎಂದು ಆಶಿಸಿದರು.
ಕಾಲೇಜಿನ ಪ್ರಾಚಾರ್ಯ ಡಾ. ಜೈರಾಜ ಎಂ. ಚಿಕ್ಕಪಾಟೀಲ ಮಾತನಾಡಿ ಗಾಜಿನಮನೆಯಲ್ಲಿ ಚಿತ್ರಕಲಾ ಪ್ರದರ್ಶನ ಆದ ನಂತರದಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳಿಂದ ವಿವಿಧ ಯೋಜನೆ, ಶೀರ್ಷಿಕೆಯಡಿಯ ಚಿತ್ರಕಲಾ ರಚನೆಗೆ ಬೇಡಿಕೆ ಬರುತ್ತಿವೆ. ಇದು ಆಶಾದಾಯಕ ಬೆಳವಣಿಗೆ ಎಂದರು.
ಕಾಲೇಜಿನ ವಜ್ರಮಹೋತ್ಸವ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ನಿರಂತರವಾಗಿ ಸಂಘಟಿಸಲಾಗುತ್ತಿದೆ ಎಂದ ಅವರು, ಪ್ರವಾಸೋದ್ಯಮ ಇಲಾಖೆ ಮುಂದಿನ ವರ್ಷದಲ್ಲಿ ಪ್ರವಾಸಿ ತಾಣಗಳಲ್ಲೇ ಕಲಾ ವಿದ್ಯಾರ್ಥಿಗಳ ಮೂರು ದಿನಗಳ ಚಿತ್ರಕಲಾ ಶಿಬಿರ ಆಯೋಜಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಬೋಧನಾ ಸಹಾಯಕ ದತ್ತಾತ್ರೇಯ ಎನ್. ಭಟ್ಟ, ಎ. ನವೀನ್‌ಕುಮಾರ್ ಇದ್ದರು. ಡಾ. ಸಂತೋಷ್‌ಕುಮಾರ್ ಕುಲಕರ್ಣಿ, ಡಾ. ಎಂ.ಕೆ. ಗಿರೀಶ್‌ಕುಮಾರ್, ಶಾಂತಯ್ಯ ಪರಡಿಮಠ, ಶಿವಶಂಕರ್ ಸುತಾರ್, ಚಂದ್ರಶೇಖರ ಸಂಗಾ ಸೆರಿ 10 ಮಂದಿ ಕಲಾವಿದರು ಬರೆದ ವಿವಿಧ ಪ್ರವಾಸಿ ಕ್ಷೇತ್ರಗಳ ಕಲಾಕೃತಿಗಳು ಪ್ರದರ್ಶಿತವಾದವು.