ಕಲಾವಿದರಿಗೆ ಬೇಕು ತಾಳ್ಮೆಯ ಕುಂಚ ಲಲಿತಕಲಾ ಅಕಾಡೆಮಿಯಿಂದ ಚಿತ್ರಕಲಾ ಶಿಬಿರ

1000386711.jpg
Published on

ದಾವಣಗೆರೆ: ಸಾಕಷ್ಟು ತಂತ್ರಜ್ಞಾನ ಬಂದಿವೆ. ಕೆಲವು ಕಲಾವಿದರು ತಾಳ್ಮೆ ಕಳೆದುಕೊಂಡು ಕಲಾ ಕ್ಷೇತ್ರದಿಂದ ವಿಮುಖರಾಗಿ ಚಾಲಕರಾಗಿರುವ ನಿದರ್ಶನಗಳಿವೆ. ತಾಳ್ಮೆ ಇದ್ದಷ್ಟೂ ಕಲಾವಿದರು ಬೆಳೆಯಲು ಸಾಧ್ಯ.
ಮಂಗಳೂರಿನ ಚಿತ್ರ ಕಲಾವಿದ ರಾಮಕೃಷ್ಣ ನಾಯ್ಕ ಹೇಳಿದ ಮಾತುಗಳಿವು. ಕರ್ನಾಟಕ ಲಲಿತಕಲಾ ಅಕಾಡೆಮಿ ವತಿಯಿಂದ ಶುಕ್ರವಾರ ಆರಂಭವಾದ ಮೂರು ದಿನಗಳ ರಾಜ್ಯ ಮಟ್ಟದ ಚಿತ್ರಕಲಾ ಶಿಬಿರದ ಶಿಬಿರಾರ್ಥಿಯಾಗಿ ಪತ್ರಿಕೆ ಜತೆ ಅನಿಸಿಕೆ ಹಂಚಿಕೊಂಡರು.
ನಾವು ಹುಟ್ಟುವ ಮುನ್ನ ಹ್ಯಾಂಡ್ ವರ್ಕ್‌ಗಳಿಗೆ ತುಂಬಾ ಬೆಲೆ ಇತ್ತು. ಕಲಾವಿದರಿಗೆ ಗೌರವವಿತ್ತು. ಕಲಾಕೃತಿಗಳಿಗೂ ಮಾರುಕಟ್ಟೆ ಇತ್ತು. ಆದರೆ ಇಂದು ಅಂತಹ ಕಾಲವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇಂದು ಕಲಾಕೃತಿಯ ಶೇ.90ರಷ್ಟು ಭಾಗ, ಕೃತಕ ಬುದ್ಧಿಮತ್ತೆಯಂಥ ತಂತ್ರಜ್ಞಾನದಿಂದಾಗಿ ತಯಾರಾಗುತ್ತದೆ. ಕೆಲವರು ಅದಕ್ಕೆ ನಾಮ್‌ಕೇವಾಸ್ತೆ ಎಂಬಂತೆ ಅಂತಿಮ ಸ್ಪರ್ಶ ನೀಡುತ್ತಾರೆ. ಹೀಗಾಗಿ ಕಲಾಕೃತಿಗಳ ಮೌಲ್ಯ 1 ಲಕ್ಷ ರೂ.ಗಳಿಂದ ಇಂದು 5 ಸಾವಿರ ರೂ.ಗೆ ಇಳಿದಿದೆ. ನಿಜವಾದ ಕಲಾವಿದರು ಬೆಳಕಿಗೆ ಬರಲು, ಕಲಾಕೃತಿಗಳಿಗೆ ಮೆರುಗು ಸಿಗಲು ಇನ್ನೂ 25ರಿಂದ 40 ವರ್ಷವಾದರೂ ಬೇಕು ಎಂದು ಹೇಳಿಕೊಂಡರು.
ಬೆಂಗಳೂರಿನ ಮಮತಾ ಉಪಾಸನಾ ಬೋರಾ ಮಾತನಾಡಿ ಈಗೆಲ್ಲ ಸರಳವಾಗಿ ತಯಾರಾಗುವ ಡಿಜಿಟಲ್ ಕಲೆ ಬಂದಿದೆ. ಇದರಿಂದಾಗಿ ನೈಜ ಚಿತ್ರಗಳಿಗೆ ಮಾರುಕಟ್ಟೆ ಕಡಿಮೆ ಇರಬಹುದು. ಆದರೆ ಕೈ ಬರಹದ ಕಲಾವಿದರಿಗೆ ಎಂದಿಗೂ ಖದರ್ ಇದ್ದೇ ಇದೆ. ಜನರು ಇಂದು ರಿಯಲಿಸ್ಟಿಕ್ ಬದಲಾಗಿ ವಿಭಿನ್ನ ಚಿತ್ರಕಲೆ ಬಯಸುತ್ತಿದ್ದಾರೆ. ಕಲೆ ಉತ್ತಮವಾಗಿದ್ದರೆ ಗ್ರಾಹಕರೂ ಕೊಂಡುಕೊಳ್ಳುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಆರಂಭದಲ್ಲಿ ಫಾರ್ಮಸಿ ಓದಿದೆ. ಮದುವೆಯಾದ ಬಳಿಕ ಕಲಾ ಕ್ಷೇತ್ರದಲ್ಲಿ ಪದವಿ ಪಡೆದು, ನಂತರ ವಿವಿಧ ಕೋರ್ಸ್‌ಗಳನ್ನು ಅಭ್ಯಾಸ ಮಾಡಿದೆ. ಸ್ವಂತ ಸ್ಟುಡಿಯೋ ಇದೆ. ಕ್ರಿಯೇಟಿವ್ ಎಜುಕೇಷನ್ ಸೊಸೈಟಿ ಶಾಲೆಯ ಮೂಲಕ ಏಳು ರಾಷ್ಟ್ರಗಳ ಮಕ್ಕಳಿಗೆ ಆನ್‌ಲೈನ್ ಮೂಲಕ ಚಿತ್ರಕಲೆ ತರಬೇತಿ ನೀಡುತ್ತಿದ್ದೇನೆ. ವಿಶೇಷವಾಗಿ ದೈಹಿಕ ವಿಕಲಾಂಗರನ್ನೂ ಕೇಂದ್ರೀಕರಿಸಿದ್ದೇನೆ ಎಂದು ಹೇಳಿಕೊಂಡರು.
ದಾವಣಗೆರೆಯ ದೃಶ್ಯಕಲಾ ಮಹಾವಿದ್ಯಾಲಯದ ವಜ್ರ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಶಿಬಿರದಲ್ಲಿ ಕಲಾವಿದರು ಕ್ಯಾನವ್ಯಾಸ್ ಮೇಲೆ ಕುಂಚವಾಡಿಸಿದರು. ವಿದ್ಯಾರ್ಥಿಗಳು ಅವರೊಂದಿಗೆ ಸಂವಾದ ನಡೆಸಿದರು.
ಧಾರವಾಡದ ಎಫ್.ವಿ. ಚಿಕ್ಕಮಠ, ತುಮಕೂರಿನ ಶಾಂತಕುಮ್, ಬೀದರ್‌ನ ಸಂಗಮೇಶ್ ಚಿಲ್ಲಶೆಟ್ಟಿ, ಹುಬ್ಬಳ್ಳಿಯ ಗಂಗಾಧರ ಬಂಡಣ್ಣನವರ್, ಬೆಂಗಳೂರಿನ ಶ್ರೀನಿವಾಸರೆಡ್ಡಿ, ಬೆಂಗಳೂರಿನ ವೀಣಾ ಆರ್. ನಂದಿ, ಮೈಸೂರಿನ ಎಸ್. ವಿನೋದ್, ಯಾದಗಿರಿಯ ಗಾಯತ್ರಿ ಮಂತ ಸೇರಿ 10 ಮಂದಿ ಕಲಾವಿದರು ಭಾಗಿಯಾಗಿದ್ದಾರೆ.
ಕ್ಯಾನವಾಸ್ ಮೇಲೆ ಚಿತ್ರ ಬಿಡಿಸುವ ಮೂಲಕ ಶಿಬಿರ ಉದ್ಘಾಟಿಸಿದ ದಾವಣಗೆರೆಯ ದೃಶ್ಯಕಲಾ ಕಾಲೇಜಿನ ಪ್ರಾಚಾರ್ಯ ಡಾ.ಜೈರಾಜ ಎಂ.ಚಿಕ್ಕ ಪಾಟೀಲ ಮಾತನಾಡಿ ಕಲಾಶಿಬಿರದ ಮೂಲಕ ಕಾಲೇಜಿನ ವಿದ್ಯಾರ್ಥಿಗಳಿಗೆ ಕಲಾ ತಿಳಿವಳಿಕೆ ಹಾಗೂ ಜ್ಞಾನ ವೃದ್ಧಿಯಾಗಲಿದೆ ಎಂದರು.
ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದ ಉಪಾಧ್ಯಕ್ಷ ಗಣಪತಿ ಎಸ್ ಹೆಗಡೆ ಮಾತನಾಡಿ ನಮ್ಮ ಕಾಲೇಜು ನಮಗೆಲ್ಲ ಕಲಾಶಿಕ್ಷಣ ನೀಡಿ ಕಲಾವಿದರನ್ನಾಗಿ ರೂಪಿಸಿದ ಹೆಮ್ಮೆಯ ತಾಯಿ. ಇದು ವಜ್ರ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಶಿಬಿರ,ಕಲಾ ಸಂವಾದ,ಪ್ರಾತ್ಯಕ್ಷಿಕೆ ಆಯೋಜಿಸುವ ಮೂಲಕ ತನ್ನದೇ ಆದ ರೀತಿಯಲ್ಲಿ ಗೌರವ ಸಲ್ಲಿಸುವ ಆಶಯ ಹೊಂದಿದೆ ಎಂದು ಹೇಳಿದರು.
   ವೇದಿಕೆಯಲ್ಲಿ ಸಂಘದ  ಕಾರ್ಯದರ್ಶಿ ಸುರೇಶ್  ವಾಘ್ಮೋರೆ,  ಕರ್ನಾಟಕ ಲಲಿತಕಲಾ ಅಕಾಡೆಮಿಯ ರಿಜಿಸ್ಟ್ರಾರ್ ಬಿ.ನೀಲಮ್ಮ, ಸದಸ್ಯ ಸಂಚಾಲಕಿ ನೂರ್ ಫಾತೀಮಾ, ನಿವೃತ್ತ ಪ್ರಾಧ್ಯಾಪಕರು  ಇದ್ದರು. ಕಲಾವಿದ ಅಚ್ಯುತಾನಂದ ಪ್ರಾರ್ಥನೆ ಹಾಡಿದರು. ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಸತೀಶ್ ಕುಮಾರ್ ಪಿ.ವಲ್ಲೇಪುರೆ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net