

ದಾವಣಗೆರೆ: ಬಸವಾಪಟ್ಟಣ ಠಾಣೆ ವ್ಯಾಪ್ತಿಯ ಸುಲಿಗೆ, ಮನೆಗಳ್ಳತನದ ಪ್ರತ್ಯೇಕ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು 12.28 ಲಕ್ಷ ರೂ. ಮೌಲ್ಯದ ಚಿನ್ನ-ಬೆಳ್ಳಿ ಆಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಮಚ್ಚೊಂದನ್ನು ವಶಪಡಿಸಿಕೊಂಡಿದ್ದಾರೆ.
ಚನ್ನಗಿರಿ ತಾಲೂಕಿನ ಚಿರಡೋಣಿಯ ಶಿವಮೂರ್ತಿ ಮುರುಡ, ರಮೇಶ್ ಗಿಡ್ಡ ರಾಮ ಹಾಗೂ ಅವರೊಂದಿಗೆ ಶಾಮೀಲಾಗಿದ್ದ ರುದ್ರೇಶ ಬಂಧಿತರಾಗಿದ್ದಾರೆ.
ಏಪ್ರಿಲ್ 27ರಂದು ಹಂಸತಾರಕಂ ಎಂಬುವರ ಚಿರಡೋಣಿ ಕ್ಯಾಂಪ್‌ನ ಮನೆಯಲ್ಲಿ, ಕುಟುಂಬದವರು ಬೆಂಗಳೂರಿಗೆ ಹೋಗಿದ್ದಾಗ ಕಳ್ಳತನ ನಡೆದಿತ್ತು.
ಕಪ್ಪು ಬಣ್ಣದ ಮಾಸ್ಕ್ ಧರಿಸಿ, ಕೈಯಲ್ಲಿ ಅಡಕೆ ಸುಲಿಯುವ ಕತ್ತಿ, ಚಾಕುಗಳನ್ನು ಹಿಡಿದುಕೊಂಡಿದ್ದ ಆರೋಪಿಗಳು ಆ.14ರಂದು ಚಿರಡೋಣಿ ಕ್ಯಾಂಪ್‌ನ ಮನೆಯೊಂದಕ್ಕೆ ನುಗ್ಗಿ, ಮನೆಯಲ್ಲಿದ್ದ ಸುಮಲತಾ ಹಾಗೂ ಅವರ ಅತ್ತೆ ವೀರಯಮ್ಮ ಅವರ ಮೇಲೆ ಹಲ್ಲೆ ನಡೆಸಿ ಸುಲಿಗೆ ಮಾಡಿದ್ದರು.
ಸಂತೇಬೆನ್ನೂರು ಸಿಪಿಐ ಲಿಂಗನಗೌಡ ನೆಗಳೂರು ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ಕಚೇರಿಯ ನಿರೀಕ್ಷಕ ಇಸ್ಮಾಯಿಲ್, ಪಿಎಸ್‌ಐ ಮಂಜುನಾಥ್, ಬಸವಾಪಟ್ಟಣ ಠಾಣೆಯ ಪಿಎಸ್‌ಐ ಇಮ್ತಿಯಾಜ್, ಸಂತೆಬೆನ್ನೂರು ಠಾಣೆಯ ಪಿಎಸ್‌ಐ ಜಗದೀಶ್ ಮತ್ತವರ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದು ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.