ಸೊಳ್ಳೆ ಪರದೆ, ಆಟಿಕೆ ಸಾಮಗ್ರಿಗಳಿಗೆ ಆಗ್ರಹ   ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

1000286485.jpg
Published on

ದಾವಣಗೆರೆ: ಅಂಗನವಾಡಿ ಕೇಂದ್ರಗಳಿಗೆ ಸೊಳ್ಳೆ ಪರದೆ ಇತರೆ ಅಗತ್ಯ ಸಾಮಗ್ರಿಗಳನ್ನು ವಿತರಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು, ಮುಖಂಡರು ಬುಧವಾರ, ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಮಕ್ಕಳಿಗೆ ಹಾಸುವ ಜಮಖಾನ ಹಳೆಯದಾಗಿವೆ. ಕೆಲವು ಕೇಂದ್ರಗಳಲ್ಲಿ ಹಳೆಯವೂ ಇಲ್ಲ. ಹೊಸ ಆಟಿಕೆ ಸಾಮಗ್ರಿಗಳನ್ನು ಕೊಡಿಸಬೇಕು. ಸೀರೆಗಳು ಉಪಯೋಗಿಸಲು ಯೋಗ್ಯವಾಗಿಲ್ಲ. ಅವುಗಳನ್ನು ಬದಲಾಯಿಸಬೇಕು ಎಂದು ಆಗ್ರಹಿಸಿದರು.
ತಟ್ಟೆ, ಲೋಟ ಮತ್ತು ಪಾತ್ರೆಗಳು ಹಾಳಾಗಿದ್ದು, ಉಪಯೋಗಿಸಲು ಯೋಗ್ಯವಾಗಿಲ್ಲ. ಗೌರವಧನ, ಆಯಾ ತಿಂಗಳು ಖಾತೆಗೆ ಜಮೆ ಆಗುತ್ತಿಲ್ಲ. ವಿತರಿಸುವ ಮೊಟ್ಟೆಯ ಹಣವೂ ಬರುತ್ತಿಲ್ಲ ಎಂದು ದೂರಿದರು.
ಪೌಷ್ಟಿಕಾಂಶಯುಕ್ತ ಆಹಾರ ಧಾನ್ಯಗಳನ್ನು ಸಕಾಲಕ್ಕೆ ವಿತರಿಸಬೇಕು. ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ಕೊಡಿಸಲು ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆ ಬಳಿಕ ಜಿಪಂ ಉಪ ಕಾರ್ಯದರ್ಶಿ ಕೃಷ್ಣಾನಾಯ್ಕ ಅವರಿಗೆ ಮನವಿ ಸಲ್ಲಿಸಲಾಯಿತು.
ಎಐಟಿಯುಸಿ ಸಂಯೋಜಿತ ಕರ್ನಾಟಕ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಸಂಘದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ರಾಜ್ಯ ಸಂಚಾಲಕ ಆವರಗೆರೆ ವಾಸು, ಮುಖಂಡರಾದ ಆವರಗೆರೆ ಚಂದ್ರು, ಕೆ.ಸಿ.ನಿರ್ಮಲಾ, ಗೀತಾ, ಸರ್ವಮ್ಮ, ಸುಧಾ, ಎಚ್.ಜಿ.ಮಂಜುಳಾ, ರೇಣುಕಾ, ಎಸ್.ಎಸ್.ಮಲ್ಲಮ್ಮ, ಕುಸುಮಾ ಪಾಲ್ಗೊಂಡಿದ್ದರು.
--

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net