ಜನಮನ ತಲುಪಲಿ ಅಂಬೇಡ್ಕರ್ ಚಿಂತನೆ

1000542619.jpg
Published on

ದಾವಣಗೆರೆ: ಅಂಬೇಡ್ಕರ್ ವಿಚಾರಧಾರೆಯನ್ನು ಜನರಿಗೆ ತಲುಪಿಸಬೇಕಿದೆ. ಈ ದಿಸೆಯಲ್ಲಿ ಮುಂದಿನ ದಿನದಲ್ಲಿ ಸ್ಮಶಾನದಲ್ಲಿ ಜನಜಾಗೃತಿ ಕಾರ್ಯಕ್ರಮ ಆಯೋಜಿಸಿ ಮೌಢ್ಯ ವಿರುದ್ಧ ಅರಿವು ಮೂಡಿಸಲಾಗುವುದು ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಹೇಳಿದರು.
ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಮಾನವ ಬಂಧತ್ವ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ, ಸಂವಿಧಾನಶಿಲ್ಪಿ ಡಾ. ಬಿ.ಅರ್. ಅಂಬೇಡ್ಕರ್ 68ನೇ ಮಹಾ ಪರಿನಿರ್ವಾಣ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಚಿವ ಸತೀಶ್ ಜಾರಕಿಹೊಳಿ ಅವರು ಮೂಢನಂಬಿಕೆ ವಿರುದ್ಧ ಸ್ಮಶಾನದಲ್ಲಿ ಜನಜಾಗೃತಿ ಮೂಡಿಸುವ ಮೂಲಕ ಅಂಬೇಡ್ಕರ್ ವಿಚಾರಧಾರೆ ಜನರಿಗೆ ಪ್ರಚುರ ಪಡಿಸುತ್ತಿದ್ದಾರೆ. ಅವರ ಹಾದಿಯಲ್ಲಿ ಸಾಗುವುದಾಗಿ ಹೇಳಿದರು.
ಅಂದು ಮನುವಾದಿಗಳು ಬಿಟ್ಟ ಬಾಣ ಶೂದ್ರರ ತಲೆ ಕತ್ತರಿಸಿತು. ಆದರೆ ಅಂಬೇಡ್ಕರ್ ಅವರು ದುಂಡುಮೇಜಿನ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರವು ದಲಿತರು ತಲೆ ಎತ್ತುವಂತೆ ಮಾಡಿತು ಎಂದರು.  
ದಾವಣಗೆರೆಯ ಅಂಬೇಡ್ಕರ್ ವೃತ್ತದಲ್ಲಿ ಬಾಬಾ ಸಾಹೇಬರ ಪುತ್ಥಳಿ ನಿರ್ಮಾಣ ಖುಷಿ ನೀಡಿದೆ. ಜಗಳೂರಿನ ಅಂಬೇಡ್ಕರ್ ವೃತ್ತ ಕೂಡ ಹಸಿರಿನಿಂದ ಕಂಗೊಳಿಸುತ್ತಿದೆ. ಅದನ್ನು ಉಳಿಸಿ, ಬೆಳೆಸಿ ಕಾಪಾಡುವುದು ನಮ್ಮ ಹೊಣೆ. ಅಂಬೇಡ್ಕರ್ ಸಿದ್ಧಾಂತ ಪಾಲಿಸುವ ಪ್ರತಿಯೊಬ್ಬರೂ ಪುತ್ಥಳಿ ಸುತ್ತಲೂ ಸ್ವಚ್ಛಗೊಳಿಸಿ ಪೂಜೆ ಮಾಡಬೇಕು ಎಂದರು.
ದಲಿತ ಮುಖಂಡ ಜಿ.ಎಚ್. ಶಂಭುಲಿಂಗಪ್ಪ ಮಾತನಾಡಿ, ರಾಜಕಾರಣಿಗಳ ಕುಮ್ಮನ್ನಿನಿಂದಾಗಿ ಸಮಾಜದಲ್ಲಿ ಜಾತಿ ವ್ಯವಸ್ಥೆ ಜೀವಂತವಾಗಿದೆ. ದಲಿತ ಸಂಘಟನೆಗಳು ಛಿದ್ರವಾಗುತ್ತಿವೆ ಎಂದರು.  
ತಹಸೀಲ್ದಾರ್ ಸೈಯದ್ ಕಲೀಂ ಉಲ್ಲಾ ಮಾತನಾಡಿ, ಅಂಬೇಡ್ಕರ್ ಬಗ್ಗೆ ತಿಳಿದುಕೊಳ್ಳದವರು ಈ ದೇಶದಲ್ಲಿ ಬದುಕಲು ಅರ್ಹರಲ್ಲ ಎಂದರು.
ಪಿಐ ಎಂ.ಶ್ರೀನಿವಾಸ್‌ರಾವ್ ಮಾತನಾಡಿದರು. ಜಿಪಂ ಮಾಜಿ ಸದಸ್ಯ ಕೆ.ಪಿ. ಪಾಲಯ್ಯ, ಪಪಂ ಅಧ್ಯಕ್ಷ ಕೆ.ಎಸ್. ನವೀನ್‌ಕುಮಾರ್, ತಾಪಂ ಇಒ ಕೆಂಚಪ್ಪ, ಸಮಾಜ ಕಲ್ಯಾಣಾಧಿಕಾರಿ ಪರಮೇಶ್ವರಪ್ಪ, ಬಿ. ಮಹೇಶ್ವರಪ್ಪ, ಕಾಂತರಾಜು, ಪಲ್ಲಾಗಟ್ಟೆ ಶೇಖರಪ್ಪ, ದಸಂಸ ಸಂಚಾಲಕ ಕುಬೇಂದ್ರಪ್ಪ, ಮಲೆಮಾಚಿಕೆರೆ ಸತೀಶ್, ಹಟ್ಟಿತಿಪ್ಪೇಸ್ವಾಮಿ, ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕಾ, ಮಂಜುನಾಥ್, ಧನ್ಯಕುಮಾರ್, ಕುಬೇಂದ್ರಪ್ಪ  ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net