ಮಾಸಾಂತ್ಯದೊಳಗೆ ಅಂಬೇಡ್ಕರ್ ಭವನಕ್ಕೆ ಅಡಿಗಲ್ಲು      ಇಲ್ಲವಾದಲ್ಲಿ ದಾವಣಗೆರೆ ಬಂದ್‌ಗೆ ಎಚ್ಚರಿಕೆ

1000238092.jpg
Published on

ದಾವಣಗೆರೆ: ಬಹುವರ್ಷದಿಂದ ನನೆಗುದಿಗೆ ಬಿದ್ದಿರುವ ಡಾ. ಬಿ.ಆರ್.ಅಂಬೇಡ್ಕರ್ ಸಮುದಾಯ ಭವನಕ್ಕೆ ಮಾಸಾಂತ್ಯದೊಳಗೆ ಶಂಕುಸ್ಥಾಪನೆ ಮಾಡದಿದ್ದಲ್ಲಿ ದಾವಣಗೆರೆ ಬಂದ್‌ಗೆ ಕರೆ ನೀಡಿ ಪ್ರತಿಭಟನೆಗಿಳಿಯಲು ಜಿಲ್ಲಾ ಮಾದಿಗ ದಂಡೋರ ಜಿಲ್ಲಾ ಸಮಿತಿ ನಿರ್ಧರಿಸಿದೆ.
ಮಾದಿಗ ದಂಡೋರ ಜಿಲ್ಲಾ ಸಮಿತಿ ಅಧ್ಯಕ್ಷ ಎಚ್.ಸಿ.ಗುಡ್ಡಪ್ಪ ಅಧ್ಯಕ್ಷತೆಯಲ್ಲಿ ಅಶೋಕ ರಸ್ತೆಯ ಸಮಿತಿ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪದಾಧಿಕಾರಿಗಳ ಸಭೆಯಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲೆಯ ಜನಪ್ರತಿನಿಧಿಗಳ ಧೋರಣೆ ವಿರುದ್ಧ ಪ್ರತಿಭಟನೆ ನಡೆಸಲು ನಿರ್ಣಯಿಸಲಾಯಿತು.
ಜಿಲ್ಲಾಧ್ಯಕ್ಷ ಎಚ್.ಸಿ. ಗುಡ್ಡಪ್ಪ ಮಾತನಾಡಿ ದಾವಣಗೆರೆಯಲ್ಲಿ ಸಂವಿಧಾನಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಕಳೆದ 20 ವರ್ಷಗಳಿಂದ ಮಾದಿಗ ದಂಡೋರ, ದಲಿತ ಸಂಘರ್ಷ ಸಮಿತಿ ಹಾಗೂ ಸಾರ್ವಜನಿಕರು ಹೋರಾಟಗಳನ್ನು ಮಾಡುತ್ತಾ ಜಿಲ್ಲಾಡಳಿತಕ್ಕೆ ಮತ್ತು ಜಿಲ್ಲೆಯ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ ಫಲಪ್ರದವಾಗಿಲ್ಲ ಎಂದು ಹೇಳಿದರು.
ಸಂವಿಧಾನ ಕರ್ತೃ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರಿನಲ್ಲಿ ದಾವಣಗೆರೆ ನಗರದಲ್ಲಿ ಎಲ್ಲಾ ಸಮುದಾಯಗಳ ಉಪಯೋಗಕ್ಕಾಗಿ, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ಬಡವರು ಮದುವೆ ಮತ್ತು ಇತರೆ ಕಾರ್ಯಗಳನ್ನು ಕಡಿಮೆ ವೆಚ್ಚದಲ್ಲಿ ಮಾಡುವ ಉದ್ದೇಶದಿಂದ ಭವನ ನಿರ್ಮಿಸಲು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರೂ ಜಿಲ್ಲಾಡಳಿತ ವಿಳಂಬ ನೀತಿ ಪ್ರದರ್ಶಿಸುತ್ತಿದೆ. ಜು. 31ರ ಒಳಗಾಗಿ ಜಿಲ್ಲಾಡಳಿತ ಸೂಕ್ತ ತೀರ್ಮಾನ ತೆಗೆದುಕೊಳ್ಳದಿದ್ದರೆ ವಿವಿಧ ಸಂಘಟನೆಗಳ ಮುಖಂಡರೊಂದಿಗೆ ಚರ್ಚಿಸಿ ಹೋರಾಟದ ರೂಪುರೇಷೆ ನಿರ್ಧರಿಸಲಾಗುವುದು ಎಂದು ತಿಳಿಸಿದರು.
ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದ ಎಚ್. ಆಂಜನೇಯ ಅವರು ದಾವಣಗೆರೆ ಉಪವಿಭಾಗಾಧಿಕಾರಿಗಳ ಕಚೇರಿ ಪಕ್ಕದ ಲೋಕೋಪಯೋಗಿ ಇಲಾಖೆಯ ಸ್ವಾಧೀನದಲ್ಲಿರುವ ನಿವೇಶನವನ್ನು ಸಮಾಜ ಕಲ್ಯಾಣ ಇಲಾಖೆಗೆ ಹಸ್ತಾಂತರಿಸುವಂತೆಯೂ, ಅಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಕ್ರಮವಹಿಸಲು ಸೂಚಿಸಿದ್ದರು. ಅಂದಿನ ಲೋಕೋಪಯೋಗಿ ಇಲಾಖೆ ಸಚಿವ ಎಚ್.ಸಿ. ಮಹದೇವಪ್ಪ ಹಾಗೂ ದಾವಣಗೆರೆ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಇದನ್ನು ಕಾರ್ಯರೂಪಕ್ಕೆ ತರದೆ ಈ ಕಾರ್ಯವನ್ನು ಅಲ್ಲಿಗೇ ನಿಲ್ಲಿಸಿದವು. ಅಲ್ಲಿಂದ ಇಲ್ಲಿಯವರೆಗೂ ಸ್ಥಳ ಗುರುತು ಮಾಡದೆ ಬರಿ ಆಶ್ವಾಸನೆಗಳನ್ನು ಕೊಡುತ್ತಾ ಇಡೀ ದಲಿತ ಸಮುದಾಯವನ್ನು ಅವಮಾನ ಮಾಡುತ್ತಾ ಬರುತ್ತಿರುವ ಜಿಲ್ಲಾಡಳಿತದ ಕ್ರಮ ಸರಿಯಲ್ಲ. ರಾಜ್ಯ ಸರ್ಕಾರದ ಗಮನ ಸೆಳೆಯಲು ಮುಂದಿನ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದರು. ಜಿಲ್ಲಾ ಮಾದಿಗ ದಂಡೋರ ಉಪಾಧ್ಯಕ್ಷ ಎಚ್. ಚಿದಾನಂದಪ್ಪ ಮಾತನಾಡಿ ಮಾದಿಗ ಸಮುದಾಯದ ಹಿರಿಯ ಮುಖಂಡರಾದ ರಮೇಶ್ ಜಿಗಜಿಣಗಿ ಯವರು ಏಳು ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾದರೂ ಕೇಂದ್ರದಲ್ಲಿ ಸಚಿವ ಸ್ಥಾನ ನೀಡದೆ ಮಾದಿಗ ಸಮಾಜವನ್ನು ಕೇಂದ್ರದ ಎನ್‌ಡಿಎ ಸರ್ಕಾರ ಮತ್ತು ಬಿಜೆಪಿ ಪಕ್ಷ ಅವಮಾನಿಸಿದೆ. ಕೂಡಲೇ ಬಿಜೆಪಿ ನಾಯಕರು ರಮೇಶ್ ಜಿಗಜಿಣಗಿ ರವರನ್ನು ಕೇಂದ್ರ ಸಂಪುಟಕ್ಕೆ ಸೇರಿಸಿಕೊಳ್ಳುವುದರ ಮೂಲಕ ಮಾದಿಗ ಸಮಾಜಕ್ಕೆ ಸಾಮಾಜಿಕ ನ್ಯಾಯ ಕಲ್ಪಿಸಬೇಕೆಂದು ಕೋರಿದರು.
ಸಭೆಯಲ್ಲಿ ಜಿಲ್ಲಾ ಸಮಿತಿ ಪದಾಧಿಕಾರಿಗಳಾದ ಬಿ. ಮಲ್ಲೇಶಪ್ಪ, ಎಂ. ಡಿ ಶಿವಕುಮಾರ್, ಹುಚ್ಚವ್ವನಹಳ್ಳಿ ಚಂದ್ರಪ್ಪ, ಕಳವೂರು ರಂಗಪ್ಪ ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net