23ರಿಂದ ಅಂಬಾಭವಾನಿ ಅಮ್ಮನವರ ಜಾತ್ರೆ   25ಕ್ಕೆ ಕುಸ್ತಿ ಪಂದ್ಯಾವಳಿ ಚಾಲನೆ

1000564807.jpg
Published on

ದಾವಣಗೆರೆ: ಚನ್ನಗಿರಿ ಪಟ್ಟಣದ ಶ್ರೀ ಕುಕ್ಕುವಾಡ ಅಂಬಾಭವಾನಿ ಅಮ್ಮನವರ ಜಾತ್ರೆ ಮತ್ತು ಮಹಾ ಕಾರ್ತಿಕೋತ್ಸವ ಡಿ. 23 ರಿಂದ 28 ರವರೆಗೆ ನಡೆಯಲಿದೆ ಎಂದು ತಾಲೂಕು ಕ್ಷತ್ರಿಯ ಮರಾಠ ಸಮಾಜದ ಅಧ್ಯಕ್ಷ ಎಂ.ಬಿ. ಶಿವಾಜಿರಾವ್ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಾತ್ರೆ ಮತ್ತು ಮಹಾಕಾರ್ತಿಕೋತ್ಸವದ ನಿಮಿತ್ತ ಡಿ.25 ರಿಂದ 27ರವರೆಗೆ ತಾಲೂಕು ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ಬಯಲು ಜಂಗಿ ಕುಸ್ತಿ ಏರ್ಪಡಿಸಲಾಗಿದೆ. ರಾಜ್ಯದ ಬಿರುದಾಂಕಿತ ಪುರುಷ ಹಾಗೂ ಮಹಿಳಾ ಕುಸ್ತಿ ಪಟುಗಳು ಭಾಗವಹಿಸಲಿದ್ದಾರೆ ಎಂದರು.
ಕುಸ್ತಿಯಲ್ಲಿ ಪ್ರಥಮ ಬಹುಮಾನವಾಗಿ ದಿ. ರುದ್ರೋಜಿರಾವ್ ಚವ್ಹಾಣ್ ಅವರ ಸ್ಮರಣಾರ್ಥ 1 ಲಕ್ಷ ರೂ. ನಗದು, ದ್ವಿತೀಯ ಬಹುಮಾನವಾಗಿ ದಿ. ವಾಸಣ್ಣ ಘಾರ್ಗೆ, ಸಿ.ಬಿ. ಪ್ರಕಾಶ್ ಜಾಧವ್, ಎಂ. ಕೋಟೋಜಿರಾವ್ ಅವರ ಜ್ಞಾಪಕಾರ್ಥ 60 ಸಾವಿರ ರೂ. ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಮಾಯಕೊಂಡ  ಶಾಸಕ ಕೆ.ಎಸ್. ಬಸವಂತಪ್ಪ ಅವರು ಡಿ. 25ರ ಸಂಜೆ ಕುಸ್ತಿ ಅಖಾಡದ ಪೂಜೆ ಮತ್ತು ಉದ್ಘಾಟನೆ ಮಾಡುವರು. ರಾಜ್ಯ ಕುಸ್ತಿ ಸಂಸ್ಥೆಯ ಜಂಟಿ ಕಾರ್ಯದರ್ಶಿ ಓಂಕಾರ್, ಜಿಲ್ಲಾ ಕುಸ್ತಿ ಸಂಘದ ಅಧ್ಯಕ್ಷ ಬಿ. ವೀರಣ್ಣ ಉಪಸ್ಥಿತರಿರುವರು.
ಜಾತ್ರಾ ಮಹೋತ್ಸವದ ಧಾರ್ಮಿಕ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ಬೆಂಗಳೂರಿನ ಶ್ರೀ ಗೋಸಾಯಿ ಮಹಾಸಂಸ್ಥಾನ ಮಠದ ಭವಾನಿದತ್ತಪೀಠ ಗವಿಪುರಂ ಜಗದ್ಗುರು ವೇದಾಂತಚಾರ್ಯ ಶ್ರೀ ಮಂಜುನಾಥ ಭಾರತಿ ಸ್ವಾಮೀಜಿ,  ಚನ್ನಗಿರಿ ಹಾಲಸ್ವಾಮಿ ವಿರಕ್ತ ಮಠದ ಶ್ರೀ ಬಸವಜಯಚಂದ್ರ ಸ್ವಾಮೀಜಿ, ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ ಸಮ್ಮುಖ ವಹಿಸುವರು. ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಪ್ರಮುಖರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮರಾಠ ಸಮಾಜದ ಪ್ರಮುಖರಾದ ಎಂ.ಎಂ. ಮಂಜುನಾಥ್ ಜಾಧವ್, ಬಿ.ಎಂ. ಕುಬೇಂದ್ರೋಜಿರಾವ್, ಜಾತ್ರಾ ಸಮಿತಿಯ ಅಧ್ಯಕ್ಷ ಶ್ರೀಕಾಂತ್, ನಾಗರಾಜ್, ದೀಪು ಘಾರ್ಗೆ, ಅಣ್ಣೋಜಿರಾವ್, ಮಂಜುನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net