

ದಾವಣಗೆರೆ : ಜಾತಿ ಸಂಘಟನೆ ಹಾಗೂ ಖಾಸಗಿ ಕಂಪನಿಗೆ ಭೂಮಿ ಮಂಜೂರು ಮಾಡಿದ ರಾಜ್ಯ ಸಚಿವ ಸಂಪುಟ ನಿರ್ಧಾರ ಕೈಬಿಡುವಂತೆ ಆಗ್ರಹಿಸಿ ಅಖಿಲ ಭಾರತ ಯುವಜನ ಫೆಡರೇಷನ್ ಜಿಲ್ಲಾ ಮಂಡಳಿ ಸೋಮವಾರ, ಉಪವಿಭಾಗಾಧಿಕಾರಿ ಕಚೇರಿ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿಪತ್ರ ಸಲ್ಲಿಸಿತು.
ಕಲಬುರಗಿಯ ಸರ್ಕಾರಿ ಮಹಾವಿದ್ಯಾಲಯದ 3.07 ಎಕರೆ ಜಮೀನನ್ನು ಕರ್ನಾಟಕ ಪ್ರದೇಶ ಕುರುಬರ ಸಂಘಕ್ಕೆ ಮಂಜೂರು ಮಾಡಿರುವುದು ಸರಿಯಲ್ಲ. ಶೈಕ್ಷಣಿಕ ಚಟುವಟಿಕೆಗೆ ಬಳಸಬೇಕಿದ್ದ ಭೂಮಿಯನ್ನು ಜಾತಿ ಸಂಘಟನೆಗೆ ನೀಡುವುದು ಸರ್ಕಾರದ ಕ್ರಮ ಶಿಕ್ಷಣ ವಿರೋಧಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಳ್ಳರಿಯ ಜಿಲ್ಲೆಯ ತೋರಣಗಲ್ಲು- ಕುರೇಕುಪ್ಪ ಪ್ರದೇಶದಲ್ಲಿನ ಜಿಂದಾಲ್ ಸ್ಟೀಲ್ಸ್ ಕಂಪನಿಗೆ 40 ಸಾವಿರ ಕೋಟಿ ರೂ. ಮೌಲ್ಯದ 3667.31 ಎಕರೆ ಜಮೀನನ್ನು ಕ್ರಯಕ್ಕೆ ನೀಡಲು ಮುಂದಾಗಿರುವುದು ಸಹ ರಾಜ್ಯ ಬೊಕ್ಕಸಕ್ಕೆ ನಷ್ಟವಾಗಲಿದೆ. ಕೂಡಲೆ ಎರಡೂ ಪ್ರಕರಣದಲ್ಲಿ ಭೂಮಿ ನೀಡುವ ನಿರ್ಧಾರ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಕೆಎಎಸ್ 384 ಗೆಜೆಟೆಡ್ ಪೊಬೇಷನರಿ ಹುದ್ದೆಗಳ ನೇಮಕಾತಿಗೆ ನಡೆದ ಪರೀಕ್ಷೆಯ ಪ್ರಶ್ನೆಪತ್ರಿಕೆ ಲೋಪದಿಂದ ಕೂಡಿದ್ದು ಇದು ಕೆಪಿಎಸ್‌ಸಿ ನಿರ್ಲಕ್ಷೃಕ್ಕೆ ಸಾಕ್ಷಿಯಾಗಿದೆ. ಕೂಡಲೆ ಕೆಪಿಎಸ್‌ಸಿ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸಂಘಟನೆಯ ರಾಜ್ಯ ಉಪಾಧ್ಯಕ್ಷ ಆವರೆಗೆರೆ ವಾಸು, ಜಿಲ್ಲಾಧ್ಯಕ್ಷ ಕೆರೆಯಾಗಲಹಳ್ಳಿ ರಾಜು, ಎಚ್. ಪರಶುರಾಮ್, ಪರಶುರಾಮ್ ನಿಟುವಳ್ಳಿ, ಎಂ. ಚೇತನ್, ಅಫ್ರೋಜ್, ರಘು ತುಂಬಿಗೆರೆ ಈ ಸಂದರ್ಭದಲ್ಲಿ ಇದ್ದರು.