

ದಾವಣಗೆರೆ: ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲು ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಭೂಮಿ ಮಂಜೂರಾತಿ ಸಮಿತಿ ರಚನೆ ಸೇರಿ ಇತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಐಕೆಕೆಎಂಎಸ್ ಜಿಲ್ಲಾ ಸಮಿತಿ ದಾವಣಗೆರೆಯಲ್ಲಿ ಸೋಮವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿತು.
ಜಯದೇವ ವೃತ್ತದಲ್ಲಿ ಜಮಾಯಿಸಿದ ಎಐಕೆಕೆಎಂಎಸ್ ಮುಖಂಡರು, ಕಾರ್ಯ ಕರ್ತರು ಮೆರವಣಿಗೆ ಮೂಲಕ ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ ಧರಣಿ ಆರಂಭಿಸಿದರು.
ಜಿಲ್ಲೆಯಲ್ಲಿ 15 ಸಾವಿರಕ್ಕೂ ಅಧಿಕ ಸಾಗುವಳಿದಾರರು 80 ವರ್ಷಗಳಿಂದ ಕಂದಾಯ ಹಾಗೂ ಅರಣ್ಯದ ಅಂಚಿನಲ್ಲಿ ಭೂಸಾಗುವಳಿ ಮಾಡಿಕೊಂಡು ಬಂದಿದ್ದು ಸರ್ಕಾರ ಈವರೆಗೂ ಹಕ್ಕುಪತ್ರ ನೀಡಿಲ್ಲ ಎಂದುನ ಧರಣಿ ನಿರತರು ದೂರಿದರು.
ಹಕ್ಕುಪತ್ರ ನೀಡದ ಕಾರಣ ಬೆಳೆ -ಕೃಷಿ ಪರಿಕರಗಳಿಗೆ ಸಾಲ ದೊರಕದೆ ರೈತರು ತೊಂದರೆಗೀಡಾಗಿದ್ದಾರೆ. ಅಧಿಕಾರಿಗಳಿಂದಲೂ ಸಾಕಷ್ಟು ಕಿರುಕುಳ ಅನುಭವಿಸುತ್ತಿದ್ದಾರೆ ಎಂದು ಗಮನಸೆಳೆದರು.
ತಕ್ಷಣ ಎಲ್ಲ ತಾಲೂಕುಗಳ ತಹಸೀಲ್ದಾರ್ ಹಾಗೂ ಜನಪ್ರತಿನಿಧಿಗಳ ಸಭೆ ಕರೆದು ಬಗರ್ ಹುಕುಂ ರೈತರಿಗೆ ಹಕ್ಕುಪತ್ರ ನೀಡಲು ವಿಸ್ತೃತ ಚರ್ಚೆ ನಡೆಸ ಬೇಕು. ಈ ಸಭೆಗೆ ರೈತ ಪ್ರತಿನಿಧಿಗಳನ್ನೂ ಆಹ್ವಾನಿಸುವಂತೆ ಜಿಲ್ಲಾಧಿಕಾರಿಗೆ ಒತ್ತಾಯಿಸಿದರು.
ಜಿಲ್ಲೆಯಲ್ಲಿ ಬಾಕಿ ಇರುವ ಅರ್ಜಿ ಪರಿಶೀಲಿಸಿ ಕೂಡಲೇ ಹಕ್ಕುಪತ್ರ ನೀಡಬೇಕು. ಅರಣ್ಯದಂಚಿನಲ್ಲಿ ಸಾಗುವಳಿ ಮಾಡುತ್ತಿರುವ ಸಿ ಮತ್ತು ಡಿ ಗುಂಪಿಗೆ ಸೇರಿದ ಭೂಮಿಯನ್ನು ಕಂದಾಯ ಭೂಮಿಗೆ ಪರಿವರ್ತಿಸಿ ಎಲ್ಲ ರೈತರಿಗೆ ಹಂಚಿಕೆ ಮಾಡುವಂತೆ ಮನವಿ ಮಾಡಿದರು.
ಅರಣ್ಯ ಭೂಮಿಯಲ್ಲಿ ಉಳುಮೆ ಮಾಡುತ್ತಿರುವ ರೈತರಿಗೆ ಕಿರುಕುಳ ನೀಡಬಾರದು. ರೈತರ ಮೇಲೆ ಹಾಕಿರುವ ಎಲ್ಲ ಪ್ರಕರಣ ರದ್ದುಪಡಿಸಬೇಕು. ಸಾಗುವಳಿ ಚೀಟಿ ನೀಡಿರುವ ರೈತರಿಗೆ ಹಕ್ಕುಪತ್ರ ವಿತರಿಸುವಂತೆ ಆಗ್ರಹಿಸಿದರು.
ಗ್ರಾಮ ಪಂಚಾಯಿತಿಗಳ ಮೂಲಕ ರೈತರನ್ನು ಒಕ್ಕಲೆಬ್ಬಿಸಲು ಅರಣ್ಯ ಇಲಾಖೆ ನೋಟಿಸ್ ನೀಡುತ್ತಿರುವುದನ್ನು ತಕ್ಷಣ ನಿಲ್ಲಿಸಬೇಕು. ಹಕ್ಕುಪತ್ರ ನೀಡಿರುವ ಭೂಮಿಗಳಿಗೆ ಕೂಡಲೇ ಪೋಡು ಮಾಡಿಕೊಡುವಂತೆ ಮನವಿ ಮಾಡಿದರು.
ಮೆರವಣಿಗೆಗೆ ಚಾಲನೆ ನೀಡಿದ ಎಐಕೆಕೆಎಂಎಸ್ ರಾಜ್ಯ ಉಪಾಧ್ಯಕ್ಷೆ ನಾಗಮ್ಮಾಳ್ ಮಾತನಾಡಿ, ದೆಹಲಿ ರೈತರ ಹೋರಾಟ ನಮಗೆ ಮಾದರಿಯಾಗಿದ್ದು, ಬೇಡಿಕೆ ಈಡೇರುವವರೆಗೂ ಧರಣಿ ಹಿಂಪಡೆಯುವುದಿಲ್ಲ ಎಂದು ತಿಳಿಸಿದರು.
ಎಐಕೆಕೆಎಂಎಸ್ ರಾಜ್ಯಾಧ್ಯಕ್ಷ ಭಗವಾನ್ ರೆಡ್ಡಿ, ಜಿಲ್ಲಾಧ್ಯಕ್ಷ ಮಧು ತೊಗಲೇರಿ, ಕಾರ್ಯದರ್ಶಿ ನಾಗಸ್ಮಿತಾ, ಉಪಾಧ್ಯಕ್ಷರಾದ ಬಸವರಾಜಪ್ಪ ನೀರ್ಥಡಿ, ಭೀಮಣ್ಣ ಮಾಯಕೊಂಡ, ಮಂಜುನಾಥ ರೆಡ್ಡಿ, ಬುಳ್ಳಾಪುರ ಹನುಮಂತಪ್ಪ ಇತರರು ಭಾಗವಹಿಸಿದ್ದರು.