

ದಾವಣಗೆರೆ: ರಾಜ್ಯದ ಬರಪೀಡಿತ 223 ತಾಲೂಕುಗಳಲ್ಲಿ ತುರ್ತು ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳುವಂತೆ ಆಗ್ರಹಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ಜಿಲ್ಲಾ ಸಮಿತಿ ಪದಾಧಿಕಾರಿಗಳು ಸೋಮವಾರ ಮಹಾತ್ಮಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ನಂತರ ಕೆಲವರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಚುನಾವಣಾ ತಹಸೀಲ್ದಾರ್ ಉಪೇಂದ್ರ ಅವರ ಮೂಲಕ ಡಿಸಿಗೆ ಮನವಿ ಸಲ್ಲಿಸಲಾಯಿತು.
ಮಾಧ್ಯಮಗಳ ವರದಿ ಪ್ರಕಾರ 29 ಜಿಲ್ಲೆಗಳ 149 ತಾಲೂಕುಗಳ 1,920 ಗ್ರಾಮಗಳಲ್ಲಿ ಕುಡಿವ ನೀರಿಗೆ ಹಾಹಾಕಾರವಿದೆ. ಕೊಳವೆ ಬಾವಿಗಳು ಬತ್ತಿ ಹೋಗಿವೆ. ಕೆರೆಗಳಲ್ಲಿ ನೀರಿಲ್ಲ. ಜಿಲ್ಲಾಡಳಿತ ಸಮರ್ಪಕವಾಗಿ ನೀರು ಪೂರೈಸುತ್ತಿಲ್ಲ. ರೈತ ಸಮುದಾಯ ಮತ್ತು ಕೃಷಿ ಕಾರ್ಮಿಕರು ತೀವ್ರ ಬರದಲ್ಲಿ ನರಳುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು. ಕಳೆದ ವರ್ಷ ಕೂಡ ಸರಿಯಾದ ಬೆಳೆಯಾಗದೇ ರೈತರಿಗೆ ಮೇವು ಸಂಗ್ರಹಿಸಿಕೊಳ್ಳಲೂ ಸಾಧ್ಯವಾಗಿಲ್ಲ. ಮೇವಿನ ಕೊರತೆಯ ಜತೆಗೆ ವಿಪರೀತ ಬೆಲೆ ಏರಿಕೆಯಾಗುತ್ತಿದ್ದು, ಜಾನುವಾರುಗಳಿಗೆ ಮೇವು ಒದಗಿಸುವುದು ಕಷ್ಟವಾಗಿದೆ.
ಮೇವು ಬ್ಯಾಂಕುಗಳು ಅಗತ್ಯವಿರುವಷ್ಟಿಲ್ಲ. ಜತೆಗೆ ರೈತರಿಗೆ ಸರಿಯಾಗಿ ವಿತರಣೆಯಾಗುತ್ತಿಲ್ಲ. ಜಾನುವಾರುಗಳಿಗೆ ಪಶು ಆಹಾರ ನೀಡಲೂ ಹಣಕಾಸಿನ ತೊಂದರೆಯಿದೆ ಎಂದು ಹೇಳಿದರು.
ಗ್ರಾಮೀಣ ಪ್ರದೇಶದಲ್ಲಿ ಕೃಷಿ ಕೆಲಸಗಳು ನಡೆಯುತ್ತಿಲ್ಲ. ಹೀಗಾಗಿ ಕೆಲವರು ಗುಳೆ ಹೋಗುವ ಪ್ರಮೇಯ ಬಂದಿದೆ. ನರೇಗಾ ಯೋಜನೆಯಡಿ ಉದ್ಯೋಗ ಒದಗಿಸುವಲ್ಲಿ ಮತ್ತು ಹಣ ಬಿಡುಗಡೆ ಮಾಡುವುದರಲ್ಲಿ ವ್ಯತ್ಯಯವಾಗುತ್ತಿದೆ. ಗ್ರಾಮೀಣ ಪ್ರದೇಶದ ಜನರು ಆದಾಯವಿಲ್ಲದೆ ಸಂಕಷ್ಟದಲ್ಲಿದ್ದಾರೆ ಎಂದರು.
ಬೆಳೆ ನಷ್ಟಕ್ಕೆ ಸಮರ್ಪಕ ಪರಿಹಾರ ನೀಡಬೇಕು. ಬಗರ್‌ಹುಕುಂ ಸಾಗುವಳಿದಾರರಿಗೂ ಬರಪರಿಹಾರ ನೀಡಬೇಕು. ಬೆಳೆ ನಷ್ಟದ ಸಮೀಕ್ಷೆ ನಡೆಸಬೇಕು. ಎಲ್ಲಾ ಬ್ಯಾಂಕುಗಳಲ್ಲಿನ ರೈತರ ಸಾಲ ಮನ್ನಾ ಮಾಡಬೇಕು. ನರೆಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು ಮತ್ತು ಕೃಷಿ ಕಾರ್ಮಿಕರಿಗೆ ಉದ್ಯೋಗವನ್ನು ಖಚಿತಪಡಿಸಬೇಕು.
ಕೊಳವೆ ಬಾವಿ ಕೊರೆಸುವ ವೆಚ್ಚ ಇಳಿಸಬೇಕು. ಮೈಕ್ರೋ ಫೈನಾನ್ಸ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಕನಿಷ್ಠ ಬೆಂಬಲ ಬೆಲೆ ಯೋಜನೆಯಲ್ಲಿ ಖರೀದಿಸಲಾದ ಬೆಳೆಗಳ ಹಣ ಕೂಡಲೇ ಪಾವತಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ರಾಷ್ಟ್ರೀಯ ಉಪಾಧ್ಯಕ್ಷ ಡಾ. ಬಿ.ಎಸ್. ಸುನಿತ್ ಉಮಾರ್, ಜಿಲ್ಲಾಧ್ಯಕ್ಷ ಮಧು ತೊಗಲೇರಿ, ಜಿಲ್ಲಾ ಕಾರ್ಯದರ್ಶಿ ನಾಗಸ್ಮಿತಾ, ಮಂಜುನಾಥರೆಡ್ಡಿ, ಚೌಡಪ್ಪ ಹುಣಸೇಕಟ್ಟೆ, ರುದ್ರಪ್ಪ, ಭೀಮಣ್ಣ, ಮಾಯಕೊಂಡ ನಾಗರಾಜ್, ನಲ್ಕುಂದ ಶಿವಲಿಂಗಪ್ಪ ಇತರರಿದ್ದರು