ಮ್ಯಾನೇಜ್‌ಮೆಂಟ್ ಕೋಟಾ ರದ್ದತಿಗೆ ಆಗ್ರಹಿಸಿ ಎಐಡಿಎಸ್‌ಒ ಮನವಿ

1000373874.jpg
Published on

ದಾವಣಗೆರೆ: ನಗರದ ಯುಬಿಡಿಟಿ ಕಾಲೇಜಿನಲ್ಲಿ ವಿಧಿಸಲಾದ ಶೇ.50ರ ಮ್ಯಾನೇಜ್‌ಮೆಂಟ್ ಕೋಟಾ ರದ್ದತಿಗೆ ಆಗ್ರಹಿಸಿ ಎಐಡಿಎಸ್‌ಒ ಹಾಗೂ ಯುಬಿಡಿಟಿ ಉಳಿಸಿ ಹೋರಾಟ ಸಮಿತಿಯ ವಿದ್ಯಾರ್ಥಿಗಳ ನಿಯೋಗವು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಮನವಿಪತ್ರ ಸಲ್ಲಿಸಿತು.
ಯುಬಿಡಿಟಿ ಕಾಲೇಜಿನಲ್ಲಿ ಶೈಕ್ಷಣಿಕ ವರ್ಷದಿಂದ ಉನ್ನತ ಶುಲ್ಕದ ಅಡಿಯಲ್ಲಿ ಶೇ.50ರಷ್ಟು ಸೀಟುಗಳನ್ನು ಮಾರಲಾಗುತ್ತಿದೆ. ಸರ್ಕಾರಿ ಶುಲ್ಕ 42,866 ರೂ.ಗಳ ಸರ್ಕಾರಿ ಶುಲ್ಕದಡಿ 250 ಸೀಟುಗಳಿಗೆ ಪ್ರವೇಶ ನೀಡಲಾಗುತ್ತಿದೆ. ಇನ್ನುಳಿದ 254 ಸೀಟುಗಳಿಗೆ 97,495 ರೂ. ಶುಲ್ಕ ನಿಗದಿಪಡಿಸಲಾಗಿದೆ ಎಂದು ಸಮಿತಿ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.
ಈ ಭಾಗದ ಲಕ್ಷಾಂತರ ಬಡ-ಮಧ್ಯಮ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳು ಯುಬಿಡಿಟಿಯಲ್ಲಿ ಶಿಕ್ಷಣ ಪಡೆದು ದೇಶ ಹಾಗೂ ವಿದೇಶಗಳಲ್ಲಿ ಅನೇಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 42,866 ರೂ ಶುಲ್ಕವೇ ಬಡ ವಿದ್ಯಾರ್ಥಿಗಳಿಗೆ ದೊಡ್ಡ ಹೊರೆಯಾಗಿರುವಾಗ
ಹೆಚ್ಚಿನ ಶುಲ್ಕಕ್ಕೆ ಸೀಟುಗಳನ್ನು ಹರಾಜು ಮಾಡಿದರೆ ಬಡ ವಿದ್ಯಾರ್ಥಿಗಳು ಶುಲ್ಕ ಭರಿಸಲು ಸಾಧ್ಯವಾಗದೆ ಉನ್ನತ ಶಿಕ್ಷಣದಿಂದ ದೂರವಾಗುವ ಆತಂಕವಿದೆ ಎಂದರು.
ಹಾಸ್ಟೆಲ್ ಸೇರಿ ಶಿಥಿಲಾವಸ್ಥೆಯಲ್ಲಿನ ಹಲವು ಕಟ್ಟಡಗಳು, ಸಿಬ್ಬಂದಿ ಕೊರತೆ ಮೊದಲಾದ ಸಮಸ್ಯೆಗಳಿಂದ ಯುಬಿಡಿಟಿ ಕಾಲೇಜು ತತ್ತರಿಸುತ್ತಿದೆ.  ಕಾಲೇಜಿನ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ಒದಗಿಸಬೇಕು. ಜನರ ತೆರಿಗೆಯಿಂದ ಕಟ್ಟಿರುವ ಈ ಕಾಲೇಜಿನ  ಆರ್ಥಿಕ ಜವಾಬ್ದಾರಿಯನ್ನು ಸರ್ಕಾರವೇ ವಹಿಸಬೇಕು ಎಂದು ಮನವಿ ಮೂಲಕ ಒತ್ತಾಯಿಸಲಾಯಿತು.
ಮನವಿಗೆ ಸ್ಪಂದಿಸಿದ ಸಚಿವರು, ಸಂಸದರು ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಮುಕ್ತ ಅವಕಾಶ ಕಲ್ಪಿಸಬೇಕೇ  ಹೊರತು ಬಾಗಿಲು ಮುಚ್ಚುವಂತಾಗಬಾರದು. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರ ಬಳಿ ಚರ್ಚಿಸುವುದಾಗಿ ಭರವಸೆ ನೀಡಿದರು.
ಎಐಡಿಎಸ್‌ಒ ಜಿಲ್ಲಾಧ್ಯಕ್ಷೆ ಪೂಜಾ ನಂದಿಹಳ್ಳಿ, ಯುಬಿಡಿಟಿ ಉಳಿಸಿ ಸಮಿತಿಯ ಸದಸ್ಯರಾದ ಶ್ರೀನಿವಾಸ್, ಪ್ರಜ್ವಲ್, ರಕ್ಷಿತಾ,ದರ್ಶನ್, ಚಂದನ, ದೀಪಿಕಾ, ಯಶವಂತ್, ಅಭಿಷೇಕ್ ಸಿಂಗ್, ವಿಜಯ್ ಶ್ರವಣ್, ನಾಗೇಂದ್ರ ಇತರರಿದ್ದರು.
----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net