ನೀಟ್ ಪರೀಕ್ಷೆಯ ಭ್ರಷ್ಟಾಚಾರಕ್ಕೆ ಆಕ್ರೋಶ    ಎಐಡಿಎಸ್‌ಒ ಸಂಘಟನೆ ಪ್ರತಿಭಟನೆ

1000177449.jpg
Published on

ದಾವಣಗೆರೆ: ವೈದ್ಯಕೀಯ ಕೋರ್ಸ್ ಪ್ರವೇಶಾತಿಗೆ ನಡೆದ ನೀಟ್ ಪರೀಕ್ಷೆಯಲ್ಲಿನ ಭ್ರಷ್ಟಾಚಾರ ವಿರೋಧಿಸಿ ಎಐಡಿಎಸ್‌ಒ ಸಂಘಟನೆ ಅಡಿಯಲ್ಲಿ ಪಿಯು ವಿದ್ಯಾರ್ಥಿಗಳು ಮಂಗಳವಾರ ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಪರೀಕ್ಷಾ ಹಗರಣದಿಂದಾಗಿ 25 ಲಕ್ಷ ನೀಟ್ ಪರೀಕ್ಷಾರ್ಥಿಗಳಿಗೆ ತೊಂದರೆಯಾಗಿದೆ. ಇದನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು. ಹಗರಣದಲ್ಲಿ ಭಾಗಿಯಾದವರಿಗೆ ಶಿಕ್ಷೆ ವಿಧಿಸಬೇಕು. ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.
ಎಐಡಿಎಸ್‌ಒ ರಾಜ್ಯ ಕಚೇರಿ ಕಾರ್ಯದರ್ಶಿ ಮಹಾಂತೇಶ್ ಬೀಳೂರು ಮಾತನಾಡಿ ನೀಟ್ ಪರೀಕ್ಷಾ ಹಗರಣಕ್ಕೆ ಸರ್ಕಾರವೇ ಮುನ್ನುಡಿ ಬರೆದಿದೆ. ಸರ್ಕಾರದ ಗಮನವಿಲ್ಲದಲೇ ಇದು ನಡೆದಿಲ್ಲ. ನೀಟ್ ಪರೀಕ್ಷೆ ಫಲಿತಾಂಶ ವಿವಾದದಿಂದಾಗಿ 25 ಲಕ್ಷ ವಿದ್ಯಾರ್ಥಿಗಳ ಕಗ್ಗೊಲೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಋಣಾತ್ಮಕ ಅಂಕಗಳಿದ್ದಾಗ್ಯೂ ಈ ಬಾರಿಯ ನೀಟ್ ಪರೀಕ್ಷೆ ಫಲಿತಾಂಶದಲ್ಲಿ 67 ಅಭ್ಯರ್ಥಿಗಳು ಪೂರ್ಣ 720 ಅಂಕಗಳನ್ನು ಪಡೆದಿರುವುದು ಅಕ್ರಮದ ವಾಸನೆಗೆ ಕಾರಣವಾಗಿದೆ. ಆದರೆ, ಹಲವು ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಿದ್ದಾಗಿ ಎನ್‌ಟಿಎ ಸಮಜಾಯಿಷಿ ನೀಡಿದೆ. ಆದರೆ ಕೃಪಾಂಕಗಳ ಬಗ್ಗೆ ಈ ಹಿಂದೆ ಎಲ್ಲಿಯೂ ಎನ್‌ಟಿಎ ಒಂದು ನಿರ್ದಿಷ್ಟ್ಟ ಮಾದರಿಯನ್ನು ನೀಡಿಲ್ಲ ಎಂದು ಹೇಳಿದರು.
ಪ್ರಶ್ನೆಪತ್ರಿಕೆ ತಡವಾಗಿ ನೀಡಿದ್ದಕ್ಕಾಗಿ ಕೃಪಾಂಕ ಕೊಟ್ಟ ಅಸಂಬದ್ಧ ಕಾರಣವಿತ್ತ ಎನ್‌ಟಿಎಗೆ ಲಕ್ಷಾಂತರ ವಿದ್ಯಾರ್ಥಿಗಳ ಬಗೆಗಿನ  ನಿಷ್ಕಾಳಜಿಗೆ ಸಾಕ್ಷಿಯಾಗಿದೆ. ಈ ಹಿಂದೆ ರಾಜ್ಯವಾರು ವೈದ್ಯಕೀಯ, ಇಂಜಿನಿಯರಿಂಗ್ ಪ್ರವೇಶಾತಿಗೆ ನಡೆಯುತ್ತಿದ್ದ ಜಂಟಿ ಸಿಇಟಿ ಪರೀಕ್ಷೆಯಲ್ಲಿನ ಭ್ರಷ್ಟಾಚಾರ ತಡೆಯಲು ಒಂದು ದೇಶಕ್ಕೆ ಒಂದು ನೀಟ್ ಪರೀಕ್ಷೆ ತಂದರೂ ಆತಂಕ ನಿಂತಿಲ್ಲ ಎಂದು ಹೇಳಿದರು.
ಕೇಂದ್ರದ ರಾಷ್ಟ್ರೀಯ ಜ್ಞಾನ ಸಮಿತಿ ಸರ್ಕಾರಿ ಶಾಲಾ-ಕಾಲೇಜುಗಳಿಗೆ ಹಣ ನೀಡದೆಯೇ ಕಾಲಕ್ರಮೇಣ ಮುಚ್ಚುವ ಬಗ್ಗೆ ಸಲಹೆ ನೀಡಿದೆ. ಶಿಕ್ಷಣ ಕೂಡ ಇಂದು ರಾಜಕೀಯಕರಣಗೊಂಡಿದೆ. ನೀಟ್ ಪರೀಕ್ಷೆ ರದ್ದುಪಡಿಸಬವೇಕು ಎಂದು ಆಗ್ರಹಿಸಿದರು.
ದಾವಣಗೆರೆ ಜಿಲ್ಲಾಧ್ಯಕ್ಷೆ ಪೂಜಾ ನಂದಿಹಳ್ಳಿ ಮಾತನಾಡಿ ನೀಟ್ ಪರೀಕ್ಷಾ ಹಗರಣದ ಸಂಬಂಧ ಸುಪ್ರೀಂಕೋರ್ಟ್ ಮಧ್ಯ ಪ್ರವೇಶ ಮಾಡಬೇಕು. ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ ನೀಡಬೇಕು. ಎಲ್ಲ ಅಭ್ಯರ್ಥಿಗಳಿಗೂ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಟಿ.ಎಸ್.ಸುಮನ್, ಉಪಾಧ್ಯಕ್ಷರಾದ ಬಿ. ಕಾವ್ಯಾ, ಯೋಗೇಶ್, ನಂದೀಶ್, ಗೌತಮ್, ಆಕಾಶ್, ವಿದ್ಯಾರ್ಥಿಗಳಾದ ರಕ್ಷಿತಾ, ದೀಪಿಕಾ, ಯಶವಂತ್, ಮಾರುತಿ, ಮನೋಜ್, ಚೇತನ್ ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net