ತರಕಾರಿ ಉತ್ಪಾದನೆ ಕುಸಿತ ಆತಂಕಕಾರಿ    ಕೃಷಿ ತರಬೇತಿಯಲ್ಲಿ ವಿಜ್ಞಾನಿ ಎಂ.ಜಿ. ಬಸವನಗೌಡ ಹೇಳಿಕೆ

dvg-kvk-may-24.jpg
Published on

ದಾವಣಗೆರೆ : ಜಿಲ್ಲೆಯಲ್ಲಿ ವಾಣಿಜ್ಯ ಬೆಳೆಗಳ ವಿಸ್ತೀರ್ಣ ಹೆಚ್ಚಾಗಿರುವುದರಿಂದ ಆಹಾರ ಮತ್ತು ತರಕಾರಿ ಬೆಳೆಗಳ ಉತ್ಪಾದನೆ ಕುಸಿದಿದೆ ಎಂದು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಎಂ.ಜಿ. ಬಸವನಗೌಡ ಅಭಿಪ್ರಾಯಪಟ್ಟರು.
ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದಿಂದ ಜಗಳೂರು ತಾಲೂಕು ಬಸಪ್ಪನಹಟ್ಟಿ ಗ್ರಾಮದಲ್ಲಿ ಪರಿಶಿಷ್ಟ ಪಂಗಡ ಉಪಯೋಜನೆಯಡಿ ಗುರುವಾರ ಆಯೋಜಿಸಿದ್ದ ಈರುಳ್ಳಿ ಬೆಳೆಯ ಸಮಗ್ರ ಬೇಸಾಯ ತರಬೇತಿಯಲ್ಲಿ ಮಾತನಾಡಿದರು.
ಜಿಲ್ಲೆಯಾದ್ಯಂತ ತರಕಾರಿ ಬೆಳೆಗಳ ಉತ್ಪಾದನೆ ಕುಸಿತದ ಪರಿಣಾಮವಾಗಿ ಬೆಲೆ ಗಗನಕ್ಕೇರಿದೆ.  ಇದು ಆಹಾರ ಭದ್ರತಾ ವಿಷಯದಲ್ಲಿ ಆತಂಕಕಾರಿ ಬೆಳವಣಿಗೆ ಎಂದು ತಿಳಿಸಿದರು.
ಗ್ರಾಮದ ಆಯ್ದ ರೈತರಿಗೆ ಮುಂಗಾರಿನಲ್ಲಿ ಬಿತ್ತಲು ಅಗ್ರಿಫೌಂಡ್ ಡಾರ್ಕ್ ರೆಡ್ ಈರುಳ್ಳಿ ತಳಿಯನ್ನು ಪರಿಚಯಿಸುತ್ತಿದ್ದು,  ಈ ತಳಿಯು 100-110 ದಿನಗಳ ಅವಧಿಯಾಗಿದ್ದು, ಕೆಂಪು ಗಡ್ಡೆ ಹೊಂದಿರುತ್ತದೆ.  ಬಿತ್ತನೆಗೂ ಮುನ್ನ ಬೀಜವನ್ನು ಪ್ರತಿ ಕೆಜಿಗೆ 4 ಗ್ರಾಂ ಟ್ರೈಕೋಡರ್ಮಾದಿಂದ ಉಪಚರಿಸಿ ಬಿತ್ತುವುದರಿಂದ ಬೀಜದಿಂದ ಹರಡುವ ಶಿಲೀಂದ್ರ ರೋಗಗಳನ್ನು ತಡೆಗಟ್ಟಬಹುದೆಂದರು.
ಗೃಹ ವಿಜ್ಞಾನಿ ಡಾ. ಸುಪ್ರಿಯಾ ಪಿ. ಪಾಟೀಲ್ ಮಾತನಾಡಿ, ಆಹಾರದಲ್ಲಿ ಸಿರಿಧಾನ್ಯ, ತರಕಾರಿಗಳನ್ನು ಬಳಸುವುದರಿಂದ ಆರೋಗ್ಯ ಸಮತೋಲನವನ್ನು ಹೊಂದಬಹುದೆಂದರು. ಮಿತ ಆಹಾರ, ದೈಹಿಕ ವ್ಯಾಯಾಮ ಮತ್ತು ಶುಚಿತ್ವವನ್ನು ತಮ್ಮ ದೈನಂದಿನ ಚಟುವಟಿಕೆಯಲ್ಲಿ ಅಭ್ಯಾಸ ಮಾಡುವುದರಿಂದ ಉತ್ತಮ ಮನಸ್ಥಿತಿ ಬೆಳೆಸಿಕೊಳ್ಳಬಹುದೆಂದರು.
ಕಾರ್ಯಕ್ರಮದಲ್ಲಿ ಬಿದರಕೆರೆ ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿಯ ನಿರ್ದೇಶಕ ಕೃಷ್ಣಮೂರ್ತಿ ಮತ್ತು 20 ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net