ಅಗ್ನಿಹೋತ್ರ ವೈಜ್ಞಾನಿಕ ಪ್ರಕ್ರಿಯೆ

1000992947.jpg
Published on

ದಾವಣಗೆರೆ: ಸಿದ್ಧ ಅಗ್ನಿಹೋತ್ರ ಕೇವಲ ಧಾರ್ಮಿಕ ಕ್ರಿಯೆಯಾಗಿರದೆ ವೈಜ್ಞಾನಿಕ ಪ್ರಕ್ರಿಯೆಯಾಗಿದೆ. ಅನೇಕ ಲಾಭಗಳುಳ್ಳ ಇದನ್ನು ಸಂವಿಧಾನದೊಂದಿಗೆ ಸಮೀಕರಿಸಲು ಸಾಧ್ಯವಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ವ್ಯಾಖ್ಯಾನಿಸಿದರು.

ನಂದಿತಾವರೆಯ ಶ್ರೀ ಸಿದ್ಧಲಿಂಗೇಶ್ವರ ಗದ್ದುಗೆ ಮಠ (ಕಾಲಜ್ಞಾನ ಮಠ)ದಿಂದ ನಗರದ ತ್ರಿಶೂಲ್ ಕಲಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಿದ್ಧ ಅಗ್ನಿಹೋತ್ರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾರತದ ಅಖಂಡತೆ, ಏಕತೆ ಮೂಡಿಸಲು ಅಗ್ನಿಹೋತ್ರ ಪರಿಣಾಮಕಾರಿ. ಇಲ್ಲಿ ಸಿಟ್ಟು, ದ್ವೇಷ, ಅಸೂಯೆ, ಲೋಭ, ಮದ, ಮತ್ಸರಕ್ಕೆ ಅವಕಾಶವಿಲ್ಲ. ಸಹೋದರತ್ವ ಭಾವನೆ ಮೂಡಲಿದೆ. ಇದು ಸಂವಿಧಾನದ ಪೀಠಿಕೆಯಲ್ಲೇ ಇದೆ ಎಂದರು.

ಸಂವಿಧಾನ ಎಂಬುದು ಕೇವಲ ಪದಸಮುಚ್ಛಯವಲ್ಲ. ಅದರಲ್ಲಿ ಹೇಳಲಾದ ಮೌಲ್ಯಗಳನ್ನು ಜೀವನ ಮೌಲ್ಯವಾಗಿಸಲು ಹಾಗೂ ಸಾರ್ವಭೌಮತ್ವ, ಸಮಾಜವಾದಿ, ಧರ್ಮನಿರಪೇಕ್ಷತೆ ಹಾಗೂ ಭ್ರಾತೃತ್ವ ಮೂಡಿಸಲು ಅಗ್ನಿಹೋತ್ರ ಉತ್ತಮ ಪ್ರಕ್ರಿಯೆ ಮತ್ತು ಸಂಸ್ಕಾರವಾಗಿದೆ ಎಂದು ವಿಶ್ಲೇಷಿಸಿದರು.

ಸಿದ್ಧ ಅಗ್ನಿಹೋತ್ರ ವೇದ ಕಾಲದ್ದಾಗಿದೆ. ಉಪನಿಷತ್ತಿನಲ್ಲೂ ಪ್ರಸ್ತಾವವಿದೆ. ಶ್ರೀಕೃಷ್ಣನು ಅರ್ಜುನನಿಗೆ ಬೋಧಿಸುವ ಭಗವದ್ಗೀತೆಯ 16 ನೇ ಶ್ಲೋಕದಲ್ಲಿ ಅಗ್ನಿಯನ್ನು ಪೂಜಿಸಿದರೆ ಸಾಮಾನ್ಯನೂ ಪುರುಷೋತ್ತಮ ಆಗಬಹುದೆಂಬ ಉಲ್ಲೇಖವಿದೆ. ಅಗ್ನಿಹೋತ್ರದಿಂದ ವಾತಾವರಣದಲ್ಲಿ ಆಮ್ಲಜನಕ ಬಿಡುಗಡೆಯೂ ಆಗಲಿದೆ ಎಂದರು.

ಅಗ್ನಿಹೋತ್ರ ಪುರಾತನದ ಕಾಲದಿಂದ ಬಂದ ಬ್ರಹ್ಮವಿದ್ಯೆ. ಇದನ್ನು ಮಾಡುವುದರಿಮದ ಆರೋಗ್ಯ ಸಮಸ್ಯೆ, ಮನೆಯಲ್ಲಿನ ನಕಾರಾತ್ಮಕ ಶಕ್ತಿ ದೂರಾಗಲಿದೆ. ಉದ್ಯೋಗ, ವ್ಯಾಪಾರ ಅಭಿವೃದ್ಧಿಯಾಗಲಿದೆ. ಮುಖದಲ್ಲಿ ತೇಜಸ್ಸು ಬರದಲಿದೆ. ಕೃಷಿಯಲ್ಲಿ ಉತ್ತಮ ಫಲ ಸಿಗಲಿದೆ. ನನ್ನ ವೈಯಕ್ತಿಕ ಜೀವನದಲ್ಲೂ ಇದು ಅನುಭವಕ್ಕೆ ಬಂದಿದೆ ಎಂದು ಹೇಳಿದರು.

ನಿತ್ಯ 10 ನಿಮಿಷ ಅಗ್ನಿಹೋತ್ರ ಮಾಡಬೇಕಿದೆ. ಮೆಕಾಲೆ ಶಿಕ್ಷಣದ ಪರಿಣಾಮ ನಾವಿಂದು ನಮ್ಮತನ ಕಳೆದುಕೊಂಡಿದ್ದೇವೆ. ಸನಾತನ ಧರ್ಮವನ್ನು ಮುಂದಿನ ಪೀಳಿಗೆಗಾಗಿ ಉಳಿಸಬೇಕು. ಇದರ ಮೂಲಕ ಭಾರತವನ್ನು ವಿಶ್ವಗುರು ಮಾಡಬೇಕಿದೆ. ಇಲ್ಲವಾದಲ್ಲಿ ನಮ್ಮ ಪೀಳಿಗೆ ಕ್ಷಮಿಸುವುದಿಲ್ಲ ಎಂದು ಹೇಳಿದರು.

ಶಾಸಕ ಬಿ.ಪಿ. ಹರೀಶ್ ಮಾತನಾಡಿ ಭಾರತೀಯ ಸಂಸ್ಕೃತಿ- ಪರಂಪರೆಯು ಮೂಢನಂಬಿಕೆಯಲ್ಲ. ಋಷಿಮುನಿಗಳ ಕಾಲದಿಂದ ವೈಜ್ಞಾನಿಜ ಕಾರಣಗಖಿಂದ ಆರಂಭವಾದ ಜ್ಯೋತಿಷ್ಯ ಕೂಡ ಮೌಢ್ಯವಲ್ಲ. ವಿಜ್ಞಾನಿಗಳೂ ಕೂಡ ನಮ್ಮ ದೇಶದ ಜ್ಯೋತಿಷ್ಯಕ್ಕೆ ಮಾರು ಹೋಗುತ್ತಿದ್ದಾರೆ ಎಂದರು.

ಮಾಜಿ ಮೇಯರ್ ಎಸ್. ಟಿ. ವೀರೇಶ್ ಮಾತನಾಡಿ ಯೋಗ, ಆಯುರ್ವೇದದಂತೆಯೇ ನಮ್ಮ ಪೂರ್ವಜರು ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಸನಾತನ ಧರ್ಮದ ಉಳಿವಿಗೆ ಹಿರಿಯರು ತ್ಯಾಗ ಪರಿಶ್ರಮ ಮಾಡಿದ್ದರೆ ಇಂದಿನ ಸ್ವಾರ್ಥ ಮನೋಭಾವದಿಂದಾಗಿ ಸಾಮಾಜಿಕ ವ್ಯವಸ್ಥೆ ಹದಗೆಡುತ್ತಿದೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಸಾಮೂಹಿಕ ಕಾರ್ಯಕ್ರಮ

ಸಿದ್ಧ ಅಗ್ನಿಹೋತ್ರ ವಿಶ್ವಕ್ಕೇ ಪರಿಚಯವಾಗಬೇಕಿದೆ. ಶೀಘ್ರದಲ್ಲೇ ಬೆಂಗಳೂರಿನಲ್ಲಿ 1,11,111 ಜನರಿಂದ ಏಕಕಾಲಕ್ಕೆ ಸಾಮೂಹಿಕ ಅಗ್ನಿಹೋತ್ರ ಕಾರ್ಯಕ್ರಮ ನಡೆಸಲಾಗುವುದು ಎಂದು ಸಾನ್ನಿಧ್ಯ ವಹಿಸಿದ್ದ ನಂದಿತಾವರೆಯ ಸಿದ್ದಲಿಂಗೇಶ್ವರ ಗದ್ದುಗೆ ಮಠದ ಡಾ. ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಭೋಪಾಲ್ ಅನಿಲ ದುರಂತದಲ್ಲಿ 10 ಕಿಮೀ ದೂರದ ಜನರು ಸಾವಿಗೀಡಾದರು. 900 ಮೀ. ದೂರದಲ್ಲಿದ್ದ 4 ಅರ್ಚಕರ ಕುಟುಂಬಕ್ಕೆ ಯಾವುದೇ ಅಪಾಯವಾಗಲಿಲ್ಲ. ವಿಷಶಾಸ್ತ್ರ ಸಂಶೋಧಕರ ಅಧ್ಯಯನದಲ್ಲೂ ಮಾಹಿತಿ ತಿಳಿಯಲಿಲ್ಲ. ಅರ್ಚಕರು ನಿತ್ಯ ಹೋಮ ಮಾಡುತ್ತಿದ್ದುದಾಗಿ ಜರ್ಮನ್‌ನ ವೈದ್ಯರ ತಂಡ ಕಂಡುಕೊಂಡಿತು. ಅವರು ಅಗ್ನಿಹೋತ್ರ ಕುರಿತ ಪುಸ್ತಕವನ್ನೇ ಹೊರತಂದರು ಎಂದು ಸ್ಮರಿಸಿದರು.

ಸಂತೆಯಲ್ಲಿ ಟೊಮ್ಯಾಟೋವನ್ನು ಮೂರ್ನಲ್ಕು ಬಾರಿ ನೋಡಿ ಕೊಳ್ಳುತ್ತೇವೆ. ಬೆಂಡೆಕಾಯಿ ಮುರಿಯುತ್ತೇವೆ. ಮಕ್ಕಳಿಗೆ ಶಿಕ್ಷಣದ ಜತೆಗೆ ಭಾರತೀಯ ಸಂಸ್ಕಾರ ನೀಡುವತ್ತ ಪಾಲಕರು ಯೋಚಿಸುತ್ತಿಲ್ಲ. ಇಂಗ್ಲಿಷ್ ಶಿಕ್ಷಣದ ಪ್ರಭಾವದಿಂದಾಗಿ ಮಕ್ಕಳು ಇಂಗ್ಲಿಷ್ ಕಲಿತು ವಿದೇಶಕ್ಕೆ ಹೋಗುತ್ತಿದ್ದಾರೆ. ಮಠಗಳು ವೃದ್ಧಾಶ್ರಮಗಳಾಗಿ ವೃದ್ಧರನ್ನು ಸಾಕುವಂತಾಗಿದೆ ಎಂದು ವಿಷಾದಿಸಿದರು.

ಪ್ರತಿ ಮನೆಯಲ್ಲೂ ಸಿದ್ಧ ಅಗ್ನಿ ಹೋತ್ರ ಮಾಡಬೇಕು. ಇದಕ್ಕಾಗಿ ದಿನದಲ್ಲಿ 10 ನಿಮಿಷ ಮೀಸಲಿಡಬೇಕು. ಮಕ್ಕಳು ನಿತ್ಯದ ದಿಚರಿಯಲ್ಲಿ ಇದನ್ನು ಅನುಸರಿಸಿದಲ್ಲಿ ಸ್ಮರಣೆ ಶಕ್ತಿ, ಏಕಾಗ್ರತೆ ಬರಲಿದೆ. ತನ್ಮೂಲಕ ಭವ್ಯ ಭಾರತ ಕಟ್ಟಲು ಸಾಧ್ಯವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಧಾರವಾಡದ ಉದ್ಯಮಿ ಜಗದೀಶ್ ಶೇಖರನಾಯಕ್, ಕೆ.ಆರ್. ಶಿವಕುಮಾರ್, ಚಿತ್ರದುರ್ಗದ ಆಹಾರ ಇಲಾಖೆ ಉಪನಿರ್ದೇಶಕ ಸಿದ್ರಾಮ ಮಾರಿಹಾಳ್, ಡಿಡಿಪಿಐ ಜಿ. ಕೊಟ್ರೇಶ್, ಬಿಇಒ ದುರುಗಪ್ಪ, ಮುರುಗೇಶಪ್ಪ ಬನ್ನಯ್ಯ ಸ್ವಾಮಿ ಇತರರಿದ್ದರು.

----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net