

ದಾವಣಗೆರೆ: ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ನಂಬರ್ ಜೋಡಣೆ ಮೂಲಕ ಖಾಸಗೀಕರಣಗೊಳಿಸಿ ವಿದ್ಯುತ್ ಶುಲ್ಕ ವಿಧಿಸುವ ಯೋಜನೆ ವಿರೋಧಿಸಿ ಸೆ.4 ರಂದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ಬುಧವಾರ ಬೆಳಗ್ಗೆ 11 ಗಂಟೆಗೆ ನಗರದ ಬೆಸ್ಕಾಂ ಸೂಪರಿಂಟೆಂಡೆಂಟ್ ಇಂಜಿನಿಯರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಯಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸರ್ಕಾರ ಯಾವುದೇ ಇಲಾಖೆ ಆಡಳಿತವನ್ನು ಖಾಸಗೀಕರಣ ಮಾಡುವುದು ಸರಿಯಲ್ಲ. ಇದನ್ನು ವಿರೋಧಿಸುತ್ತೇವೆ. ರೈತ ವಿರೋಧಿ ವಿದ್ಯುತ್ ನೀತಿ ತಕ್ಷಣ ಕೈಬಿಡಬೇಕು. ಡಾ.ಸ್ವಾಮಿನಾಥನ್ ವರದಿ ಆಧಾರದ ಮೇಲೆ ರೈತರ ಬೆಳೆಗೆ ನ್ಯಾಯಯುತ ಬೆಲೆ ನಿಗದಿಗೊಳಿಸುವವರೆಗೆ ಕೃಷಿಕ್ಷೇತ್ರಕ್ಕೆ ಸಹಾಯಧನ ಒದಗಿಸಬೇಕು ಎಂದು ಒತ್ತಾಯಿಸಿದರು.
ದೇಶದಲ್ಲಿ ಮೂರು ಕರಾಳ ಕೃಷಿ ಕಾಯ್ದೆ ರದ್ದುಗೊಳಿಸಿದರೂ ರಾಜ್ಯದಲ್ಲಿ ಭೂ ಸುಧಾರಣಾ ಕಾಯ್ದೆ ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆ ಮುಂದುವರಿದಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನ ಪರಿಷತ್‌ನಲ್ಲಿ ಬಹುಮತ ಇಲ್ಲದ ಕಾರಣ ಕಾಯ್ದೆ ವಾಪಸ್ ತೆಗೆಯಲಾಗುತ್ತಿಲ್ಲ ಎಂಬ ಸಬೂಬು ಹೇಳುತ್ತಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಕೃಷಿಭೂಮಿ ಎಲ್ಲರ ಅಕ್ಷಯ ಪಾತ್ರೆ. 1961ರ ಭೂ ಸುಧಾರಣಾ ಕಾಯ್ದೆಯಡಿ ಕೃಷಿ ಭೂಮಿ ಅನ್ಯ ಉದ್ದೇಶಕ್ಕೆ ಬಳಕೆ ಆಗಬಾರದು. ರೈತರಲ್ಲದವರು ಪ್ರವೇಶ ಮಾಡಬಾರದು ಹಾಗೂ ಅವರಿಗೆ ಮಾಲೀಕತ್ವ ಹೋಗಬಾರದೆಂದು ಭದ್ರವಾದ ನೀತಿ ರೂಪಿಸಲಾಗಿತ್ತು. ಆದರೆ, ಬಿಎಸ್‌ವೈ ನೇತೃತ್ವದ ಬಿಜೆಪಿ ಸರ್ಕಾರ ಕೃಷಿಭೂಮಿಯನ್ನು ಯಾರು ಬೇಕಾದರೂ ಖರೀದಿ ಮಾಡಬಹುದು ಎಂದು ಹೇಳಿ ರೈತರಿಗೆ ದ್ರೋಹ ಬಗೆದಿದೆ ಎಂದರು.
ಪ್ರಸ್ತುತ ಭೂಮಿ ಬಹಳ ದೊಡ್ಡ ಪ್ರಮಾಣದಲ್ಲಿ ರೈತರ ಕೈತಪ್ಪಿ ಹೋಗುತ್ತಿದ್ದು, ಈಗಾಗಲೇ 10 ಲಕ್ಷ ರೈತರು ಕೃಷಿಭೂಮಿಯಿಂದ ಹೊರಬಂದಿದ್ದಾರೆ. ಇನ್ನು 10 ವರ್ಷ ಇದೇ ಕಾಯ್ದೆ ಮುಂದುವರಿದರೆ ಶೇ.75 ರಷ್ಟು ರೈತರು ಕೃಷಿಯಿಂದ ಆಚೆ ಹೋಗಲಿದ್ದು, ಇಲ್ಲಿಗೆ ಕಾರ್ಪೋರೇಟ್ ಕಂಪನಿಗಳು ಪ್ರವೇಶಿಸಲಿವೆ ಎಂದು ಹೇಳಿದರು.
ರಾಜ್ಯದಲ್ಲಿ ಸಬ್‌ರಿಜಿಸ್ಟ್ರಾರ್ ಕಚೇರಿ ಕೆಲಸದ ವೇಳೆ 10 ರಿಂದ 7 ಗಂಟೆವರೆಗೆ ವಿಸ್ತರಿಸಲಾಗಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ 26,500 ಕೋಟಿ ಮುದ್ರಾಂಕ ಶುಲ್ಕ ಸರ್ಕಾರದ ಖಜಾನೆಗೆ ಭರ್ತಿಯಾಗಿದೆ. ಇದನ್ನು ಮುಂದಿನ ವರ್ಷ 30 ಸಾವಿರ ಕೋಟಿಗೆ ಹೆಚ್ಚಿಸುವುದು ಸರ್ಕಾರದ ಟಾರ್ಗೆಟ್ ಆಗಿದೆ ಎಂದು ದೂರಿದರು.
ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ರೈತರಿಗೆ ಬಹಳ ಮಾರಕವಾಗಿದ್ದು, ಸಿದ್ದರಾಮಯ್ಯ ಅವರು ಇಂತಹ ಅತಿ ಬುದ್ಧಿವಂತಿಕೆಯ ಮಾತನಾಡುವುದನ್ನು ನಿಲ್ಲಿಸಬೇಕು. ರೈತರ ಬಗ್ಗೆ ಇಚ್ಛಾಶಕ್ತಿ ಹಾಗೂ ಗೌರವ ಇದ್ದರೆ 1961ರ ಭೂ ಸುಧಾರಣಾ ಕಾಯ್ದೆ ಯಥಾ ಪ್ರಕಾರ ಮುಂದುವರಿಸಬೇಕು. ಇಲ್ಲದಿದ್ದರೆ ರೈತರೇ ಸರ್ಕಾರ ಕಿತ್ತೊಗೆಯುವ ಕೆಲಸ ಮಾಡಲಿದ್ದಾರೆ ಎಂದು ಎಚ್ಚರಿಸಿದರು.
ರೈತ ಸಂಘದ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಭೈರೇಗೌಡ, ಉಪಾಧ್ಯಕ್ಷೆ ಮಹದೇವಿ ಬೇವಿನಾಳಮಠ, ಕಾರ್ಯದರ್ಶಿ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಚಿನ್ನಸಮುದ್ರ ಶೇಖರ್‌ನಾಯ್ಕ, ವೀರನಗೌಡ ಪಾಟೀಲ್, ಶತಕೋಟಿ ಬಸಣ್ಣ ಇತರರು ಸುದ್ದಿಗೋಷ್ಠಿಯಲ್ಲಿದ್ದರು.