

ದಾವಣಗೆರೆ: ‘ಮ್ಯಾಂಚೆಸ್ಟರ್’ ಖ್ಯಾತಿಯ ದಾವಣಗೆರೆ ಆ ಪಟ್ಟವನ್ನು ಕಳಚಿಕೊಂಡು ಕೈಗಾರಿಕೆಗಳು ಒಂದೊಂದಾಗಿ ಕಣ್ಮುಚ್ಚಿದ್ದು ಹೇಗೆ, ಕ್ರಮೇಣ ‘ಆಕ್ಸ್ ಫರ್ಡ್’ ಎನಿಸಿಕೊಂಡು ಬೀಗಿದ ಪರಿ ಏನು?, ವಾಣಿಜ್ಯ, ವಹಿವಾಟಿಗೆ ಹೆಸರಾದ ಜಿಲ್ಲೆಯಲ್ಲಿ ಸಾಹಿತ್ಯ, ಸಾಂಸ್ಕೃತಿಕ ಪಲ್ಲಟಗಳು ಹೇಗಾದವು, ರಾಜಕೀಯದಲ್ಲಿ ನಿರೀಕ್ಷಿತ ಮಟ್ಟದಲ್ಲಿ ನಾಯಕತ್ವ ಬೆಳೆಯದಿರಲು ಕಾರಣವೇನು?.
ಕನ್ನಡದ ನಂ. 1 ದಿನಪತ್ರಿಕೆ ವಿಜಯವಾಣಿ, ದಿಗ್ವಿಜಯ 24x7 ವತಿಯಿಂದ ನಗರದ ಕುವೆಂಪು ಕನ್ನಡ ಭವನದಲ್ಲಿ ಗುರುವಾರ ಆಯೋಜಿಸಿದ್ದ, 25 ವರ್ಷದಲ್ಲಿ ಜಿಲ್ಲೆ ನಡೆದು ಬಂದ ದಾರಿ ‘ದಾವಣಗೆರೆ ಬೆಳ್ಳಿಗೆರೆ’ ವಿಚಾರ ಸಂಕಿರಣದಲ್ಲಿ ಇಂಥದೊಂದು ಅರ್ಥಪೂರ್ಣ ಚರ್ಚೆಯಾಯಿತು.
ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಹೋರಾಟಗಾರರು, ವಿದ್ಯಾರ್ಥಿಗಳು, ಸಾರ್ವಜನಿಕರು ಆಸಕ್ತಿಯಿಂದ ಪಾಲ್ಗೊಂಡು ಅಲ್ಲಿ ವ್ಯಕ್ತವಾದ ವಿಚಾರಗಳಿಗೆ ಕಿವಿಯಾದರು. ಜಿಲ್ಲೆ ರಚನೆಯಾದಾಗಿನ ದಿನಗಳಿಗೆ ಹೋಲಿಸಿದರೆ ವಿವಿಧ ಕ್ಷೇತ್ರಗಳಲ್ಲಿ ಏನೆಲ್ಲ ಬದಲಾವಣೆಗಳಾಗಿವೆ, ಮುಂದಿನ ನಮ್ಮ ದಾರಿ ಯಾವುದು ಎನ್ನುವ ಚಿಂತನ ಮಂಥನ ನಡೆಯಿತು.
‘ಜಿಲ್ಲೆಯ ಕೈಗಾರಿಕೆ ವಹಿವಾಟು, ಅಭಿವೃದ್ಧಿ’ ಕುರಿತು ಹಿರಿಯ ಲೆಕ್ಕ ಪರಿಶೋಧಕ ಅಥಣಿ ವೀರಣ್ಣ ವಿಷಯ ಮಂಡಿಸಿ, ಉದ್ಯಮ ವಲಯದ ಏರಿಳಿತದ ಚಿತ್ರಣವನ್ನು ಕಟ್ಟಿಕೊಟ್ಟರು.
ದಾವಣಗೆರೆಯಲ್ಲಿ ಒಂದು ಕಾಲಕ್ಕೆ 9 ಜವಳಿ ಮಿಲ್‌ಗಳಿದ್ದವು. 15-20 ಜಿನ್ನಿಂಗ್ ಕಾರ್ಖಾನೆಗಳು, ಎಣ್ಣೆ ಮಿಲ್‌ಗಳಿದ್ದವು. ಈಗ ಆ ಕೈಗಾರಿಕೆಗಳಿಲ್ಲ. ಕಾರ್ಗಿಲ್ ಬಿಟ್ಟರೆ ಕಳೆದ 25 ವರ್ಷಗಳಲ್ಲಿ ಯಾವುದೇ ದೊಡ್ಡ ಉದ್ಯಮವೂ ಜಿಲ್ಲೆಗೆ ಬರಲಿಲ್ಲ ಎಂದು ತಿಳಿಸಿದರು. 1945-48ರ ಅವಧಿಯಲ್ಲಿ ದಾವಣಗೆರೆ ಕಾಟನ್ ಮಿಲ್ ಅಸ್ತಿತ್ವಕ್ಕೆ ಬಂದಿತು. 50 ಸಾವಿರ ಸ್ಪಿಂಡಲ್‌ಗಳು ಕೆಲಸ ಮಾಡುತ್ತಿದ್ದವು. ನಂತರ ಗಣೇಶ ಮಿಲ್, ಶಂಕರ್ ಮಿಲ್ ಹೀಗೆ ಪಟ್ಟಿ ಬೆಳೆಯುತ್ತ ಹೋಯಿತು.
ಈ ಕಾರ್ಖಾನೆಗಳನ್ನು ಸ್ಥಾಪಿಸಿದವರು ಉನ್ನತ ಶಿಕ್ಷಣ ಪಡೆದವರೇನಲ್ಲ, ಎಸ್‌ಎಸ್‌ಎಲ್‌ಸಿ ವರೆಗೆ ಸಾಮಾನ್ಯ ಶಿಕ್ಷಣ ಪಡೆದ, ವಿವಿಧ ಮನೆತನದ ಹಿರಿಯರು ಕೈಗಾರಿಕಾ ಸಾಮ್ರಾಜ್ಯ ಕಟ್ಟಿದರು ಎಂದು ವಿವರಿಸಿದರು. ಆಗಿನ ದಿನಗಳಲ್ಲಿ ನಗರದ ಎಪಿಎಂಸಿ ಆವರಣ ಶೇಂಗಾ, ಹತ್ತಿಯಿಂದ ತುಂಬಿರುತ್ತಿತ್ತು. ಈಗ ಆ ದೃಶ್ಯ ಮಾಯವಾಗಿದೆ ಎಂದರು. ಹರಿಹರದಲ್ಲಿ ಕಿರ್ಲೋಸ್ಕರ್ ಕಾರ್ಖಾನೆ ಕಣ್ಣು ಮುಚ್ಚಿತು. ಅಲ್ಲೊಂದು, ಇಲ್ಲೊಂದು ಸಕ್ಕರೆ ಕಾರ್ಖಾನೆಗಳು ತಲೆ ಎತ್ತಿದವು.
ಆದರೆ ಇತ್ತೀಚಿನ ವರ್ಷಗಳಲ್ಲಿ ಹೇಳಿಕೊಳ್ಳುವಂಥ ದೊಡ್ಡ ಕೈಗಾರಿಕೆಗಳು ಸ್ಥಾಪನೆಯಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಮೆಕ್ಕೆಜೋಳವನ್ನು ಹೆಚ್ಚಾಗಿ ಬೆಳೆಯುವುದರಿಂದ ಅದರ ಉಪ ಉತ್ಪನ್ನಗಳನ್ನು ತಯಾರಿಸುವ, ಆಹಾರ ಸಂಸ್ಕರಣೆ ಮಾಡುವ ಉದ್ಯಮಗಳು ಬರಬೇಕು. ಬಹುರಾಷ್ಟ್ರೀಯ ಕಂಪನಿಗಳು ಬಂಡವಾಳ ಹೂಡಿಕೆ ಮಾಡಬೇಕು. ಸಣ್ಣ ಕೈಗಾರಿಕೆಗಳಿಗೆ ಹೆಚ್ಚು ಉತ್ತೇಜನ ಸಿಗಬೇಕು. ಹಾಗಾದಾಗ ಜಿಲ್ಲೆಯ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರನ್ನು ಬಿಟ್ಟರೆ ರಾಜ್ಯಕ್ಕೆ ದಿಕ್ಸೂಚಿಯಾಗಬಲ್ಲ ನಾಯಕತ್ವ ಜಿಲ್ಲೆಯಲ್ಲಿ ಬೆಳೆಯಲಿಲ್ಲ ಎಂದು ಪತ್ರಕರ್ತ, ಸಾಹಿತಿ ಬಿ.ಎನ್. ಮಲ್ಲೇಶ್ ಅಭಿಪ್ರಾಯಪಟ್ಟರು.
‘ಜಿಲ್ಲೆಯ ರಾಜಕೀಯ ಬೆಳವಣಿಗೆ’ ಕುರಿತು ವಿಚಾರ ಮಂಡಿಸಿದ ಅವರು, ಇಲ್ಲಿನ ರಾಜಕಾರಣಿಗಳಿಗೆ ರಾಜ್ಯಮಟ್ಟದಲ್ಲಿ ಪ್ರಭಾವಶಾಲಿಯಾಗಿ ಬೆಳೆಯುವ ಸಾಮರ್ಥ್ಯವಿದ್ದರೂ ಅವರು ಶಾಸಕ, ಸಚಿವ ಸ್ಥಾನಗಳನ್ನು ಪಡೆದು ಅಲ್ಪತೃಪ್ತರಾಗಿದ್ದಾರೆ. ಹಾಗೆ ನೋಡಿದರೆ ಎಸ್.ಎಸ್. ಮಲ್ಲಿಕಾರ್ಜುನ್, ಮಹಿಮ ಪಟೇಲ್ ಅವರಿಗೆ ಆ ಛಾತಿಯಿದೆ. ಇತರ ಪಕ್ಷಗಳಲ್ಲೂ ಅಂಥವರು ಇರಬಹುದು, ಒಟ್ಟಿನಲ್ಲಿ ನಮ್ಮ ಜಿಲ್ಲೆಯ ಜನಪ್ರತಿನಿಧಿಗಳು ರಾಜಕೀಯವಾಗಿ ಎತ್ತರಕ್ಕೆ ಬೆಳೆದು ಜಿಲ್ಲೆಯನ್ನು ಹೆಚ್ಚು ಅಭಿವೃದ್ಧಿ ಮಾಡಬೇಕು ಎಂದು ಹೇಳಿದರು.
ಮಾಜಿ ಸಿಎಂ ಜೆ.ಎಚ್. ಪಟೇಲ್ ಇಡೀ ರಾಜ್ಯವೇ ನನ್ನ ಕ್ಷೇತ್ರ ಎಂಬ ದೂರದೃಷ್ಟಿಯೊಂದಿಗೆ ಕೆಲಸ ಮಾಡಿದರು ಎಂದು ನೆನಪು ಮಾಡಿಕೊಂಡರು. ಜಿಲ್ಲೆಯ ರಾಜಕಾರಣದಲ್ಲಿ ಕಳೆದ 25 ವರ್ಷಗಳಲ್ಲಿ ಆಗಿರುವ ರಾಜಕೀಯ ಬದಲಾವಣೆಗಳ ಚಿತ್ರಣವನ್ನು ಸಂಕ್ಷಿಪ್ತವಾಗಿ ಕಟ್ಟಿಕೊಟ್ಟರು. ಒಂದು ಕಾಲದಲ್ಲಿ ಕಮ್ಯುನಿಸ್ಟ್ ಪಕ್ಷದ ವಶದಲ್ಲಿದ್ದ ದಾವಣಗೆರೆ ನಂತರ ಕಾಂಗ್ರೆಸ್ ತೆಕ್ಕೆಗೆ ಜಾರಿತು. ಜನತಾ ಪರಿವಾರವೂ ಜಿಲ್ಲೆಯ ರಾಜಕಾರಣದಲ್ಲಿ ಹೆಜ್ಜೆಗುರುತುಗಳನ್ನು ಹೊಂದಿದೆ. ಈಗ ಬಿಜೆಪಿ ಆಡಳಿತವಿದೆ ಎಂದು ತಿಳಿಸಿದರು.
‘ಜಿಲ್ಲೆಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು’ ವಿಷಯವಾಗಿ ಸಾಹಿತಿ ಬಾ.ಮ. ಬಸವರಾಜಯ್ಯ ಮಾತನಾಡಿ, ಜಾಗತೀಕರಣದ ಪ್ರಭಾವದಿಂದ ನಮ್ಮ ಸಾಹಿತ್ಯ ಮತ್ತು ಸಾಂಸ್ಕೃತಿಕ ಬದುಕು ಹಿನ್ನಡೆ ಕಂಡಿದೆ ಎಂದು ವಿಷಾದಿಸಿದರು.
‘ಸುಲಿದ ಬಾಳೆಯ ಹಣ್ಣಿನಂದದಿ’ ಎಂದು ಬರೆದ ಮಹಲಿಂಗರಂಗರು, 17ನೇ ಶತಮಾನದಲ್ಲಿ ಬರೆಯುತ್ತಿದ್ದ ಅಸಗೋಡಿನ ಮಲ್ಲೇಶ್ ಅವರಿಂದ ಹಿಡಿದು, ಡಾ.ಎಂ. ಚಿದಾನಂದ ಮೂರ್ತಿ, ಜಿ.ಎಸ್. ಶಿವರುದ್ರಪ್ಪ, ಟಿ. ಗಿರಿಜಾ, ಡಾ.ಎಚ್. ಗಿರಿಜಮ್ಮ ಮತ್ತಿತರರು ಬರೆದ ಕೃತಿಗಳನ್ನು ಇಂದಿನ ಯುವಜನರು ಓದುವ ಅಗತ್ಯವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಓದುವ ಹವ್ಯಾಸವೇ ಕ್ಷೀಣಿಸಿದೆ ಎಂದು ತಿಳಿಸಿದರು.
ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿದ್ದ ದೊಡ್ಡಾಟ, ಸಣ್ಣಾಟ, ಡೊಳ್ಳು, ವೀರಗಾಸೆ, ಕರಡಿಮಜಲು, ಚರ್ಮವಾದ್ಯಗಳು ಮುಂತಾದ ಕಲೆಗಳು ಮಾಯವಾಗಿವೆ. ಅವುಗಳನ್ನು ಮರುಸ್ಥಾಪಿಸಿ ಇಂದಿನ ಯುವ ಪೀಳಿಗೆಗೆ ಅವುಗಳನ್ನು ಪರಿಚಯಿಸುವ ಕೆಲಸ ಶಾಲಾ ಕಾಲೇಜುಗಳಿಂದ ಆಗಬೇಕಿದೆ ಎಂದು ಸಲಹೆ ನೀಡಿದರು.
ಒಂದು ಕಾಲದಲ್ಲಿ ವರನಟ ಡಾ. ರಾಜಕುಮಾರ್ ಅವರಿಗೆ ಮರುಜನ್ಮ ನೀಡಿದ ನೆಲ ದಾವಣಗೆರೆ. ಇಂಥ ನೆಲದಲ್ಲಿ ರಂಗಭೂಮಿ ಕಳೆಗುಂದಿದೆ. ಇಲ್ಲಿಗೆ ಮಂಜೂರಾಗಿರುವ ವೃತ್ತಿ ರಂಗಭೂಮಿ ರಂಗಾಯಣ ಕುಂಟುತ್ತಿದೆ. ಮಹಲಿಂಗ ರಂಗಮಂದಿರ ಕಟ್ಟಡವನ್ನು ರೈಲು ನಿಲ್ದಾಣದ ಬಳಿ ಕಟ್ಟಿದ್ದು ಗೋಡೌನ್ ರೀತಿಯಲ್ಲಿದೆ. ದಾವಣಗೆರೆಯಲ್ಲಿ ಸುಸಜ್ಜಿತ ರಂಗಮಂದಿರ ನಿರ್ಮಾಣಕ್ಕೆ ಜನಪ್ರತಿನಿಧಿಗಳು ಸಂಕಲ್ಪ ಮಾಡಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯ ನಿರ್ಮಾತೃ ಜೆ.ಎಚ್.ಪಟೇಲರನ್ನು ನಾವು ನೆನೆಯುವ ಜತೆಗೆ ಜಿಲ್ಲೆಯ ಎಲ್ಲ ನಾಯಕರು ಪಕ್ಷಭೇದ ಮರೆತು ಅಭಿವೃದ್ಧಿ ಮಂತ್ರ ಪಠಿಸಬೇಕು. ಕೇಂದ್ರ-ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರಿ ದಾವಣಗೆರೆಯಲ್ಲಿ ಅಭಿವೃದ್ಧಿಯ ಬೆಳ್ಳಿಗೆರೆ ಎಳೆಯಲು ಸಂಕಲ್ಪ ಮಾಡೋಣ.| ಡಾ.ಶಾಮನೂರು ಶಿವಶಂಕರಪ್ಪ ಶಾಸಕರುಪ್ರಬಂಧ ಸ್ಪರ್ಧೆ ನಮ್ಮಂತಹ ಯುವ ಜನತೆಗೆ ಪ್ರೋತ್ಸಾಹ ನೀಡುವಂತಿದೆ. ಪ್ರಥಮ ಬಹುಮಾನದ ನಿರೀಕ್ಷೆಯಿರಲಿಲ್ಲ. ಬಹುಮಾನ ಖುಷಿಯಾಯಿತು. ದಾವಣಗೆರೆ ಬಗ್ಗೆ ಪ್ರೀತಿ ಹೆಚ್ಚಾಯಿತು. ಜಿಲ್ಲೆಯ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಲು ಅನುಕೂಲವಾಯಿತು.| ಸುಹಾಸ್ ದಾವಣಗೆರೆದಾವಣಗೆರೆ ಕಸಮುಕ್ತ ನಗರವಾಗಬೇಕು. ಪತ್ರಿಕೆ ಮೂಲಕ ಪ್ರಬಂಧ ಮಂಡಿಸಿದರೆ ನನ್ನ ಕನಸಿನ ದಾವಣಗೆರೆ ಅಭಿವೃದ್ಧಿಗೆ ಅಳಿಲು ಸೇವೆ ಸಲ್ಲಿಸಿದಂತಾಗುತ್ತದೆ ಎಂದು ಭಾವಿಸಿದ್ದೆ. ಬಹುಮಾನ ದೊರೆತದ್ದು ಸಂತಸವಾಗಿದೆ. | ಬಿಬಿ ಅಮೀನಾ ದಾವಣಗೆರೆನಮ್ಮ ದಾವಣಗೆರೆಯನ್ನು ಹೇಗೆ ಅಭಿವೃದ್ಧಿ ಮಾಡಬೇಕೆಂಬ ಬಗ್ಗೆ ಬೆಳಕು ಚೆಲ್ಲಲು ಕಾರಣವಾಯಿತು. ನನ್ನ ಜೀವನದ ಗುರಿ ಏನು ಎಂಬಷ್ಟೇ ಪ್ರಮುಖವಾಗಿ ನನ್ನ ಊರು, ನನ್ನ ಜಿಲ್ಲೆಯ ಅಭಿವೃದ್ಧಿಗೂ ಜಾಗೆ ಇರಬೇಕು. ಜಿಲ್ಲೆಯ ಜತೆಗೆ ಎಲ್ಲ ತಾಲೂಕುಗಳೂ ಅಭಿವೃದ್ಧಿ ಸಾಧಿಸಬೇಕು. | ಡಾ. ಶಿವಯ್ಯ ದಾವಣಗೆರೆನಗರದ ಅವ್ಯವಸ್ಥೆಗೆ ಯಾರು ಕಾರಣ ಎಂಬುದರ ಆತ್ಮಾವಲೋಕನ ಮಾಡಿಕೊಳ್ಳಲು ಪ್ರಬಂಧ ಸ್ಪರ್ಧೆ ನೆರವಾಯಿತು. ಪತ್ರಿಕೆ ಆಯೋಜಿಸಿದ್ದ ಬೆಳ್ಳಿಹಬ್ಬ ಕಾರ್ಯಕ್ರಮ ಮಾದರಿಯದಾಗಿತ್ತು. ಪ್ರಬಂಧ ಬರೆದ ಎಲ್ಲರ ಉತ್ತಮ ಅಂಶಗಳು ಸಾಕಾರವಾಗಿ ದಾವಣಗೆರೆ ಸುಂದರ ನಗರಿಯಾಗಲಿ.| ಅಂಜಿನಪ್ಪ ದಾವಣಗೆರೆಮನೆಯಲ್ಲಿಯೇ ಕುಳಿತು ನಮ್ಮ ಜಿಲ್ಲೆಯ ಅಭಿವೃದ್ಧಿಗೆ ಹೇಗೆ ಸಲಹೆ ನೀಡಬಹುದು ಎಂಬುದಕ್ಕೆ ಪ್ರಬಂಧ ಸ್ಪರ್ಧೆ ವೇದಿಕೆಯಾಯಿತು. ನಾವು ಕಂಡ ಅಭಿವೃದ್ಧಿಯ ಕನಸು ಆದಷ್ಟು ಬೇಗ ಈಡೇರಲಿ.| ಗಾಯತ್ರಿ ವಿಜಯಕುಮಾರ್ ದಾವಣಗೆರೆ
ದಾವಣಗೆರೆ , 25 ವರ್ಷ , ಸಂಭ್ರಮಾಚರಣೆ , ವಿಜಯವಾಣಿ, Davangere, 25 years, Celebration, Vijayavani,