ಸಂಕ್ರಾಂತಿ ಸಂಭ್ರಮಕ್ಕೆ ಯೋಗದ ಮೆರುಗು

IMG_20230115_074545.jpg
Published on

ದಾವಣಗೆರೆ: ಸಂಕ್ರಾಂತಿ ಹಬ್ಬದ ಸಂಭ್ರಮದ ನಡುವೆಯೂ ಅವರೆಲ್ಲ ಬೆಳ್ಳಂಬೆಳಗ್ಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಸೇರಿದ್ದರು. ರಾಜ್ಯಾದ್ಯಂತ ನಡೆದ ಯೋಗಥಾನ್‌ನ ಭಾಗವಾಗಿ 8 ಸಾವಿರ ಆಸಕ್ತರು ಏಕ ಕಾಲದಲ್ಲಿ ಯೋಗಾಭ್ಯಾಸ ಮಾಡುವ ಮೂಲಕ ವಿಶ್ವ ದಾಖಲೆ ಬರೆದರು.
ರಾಜ್ಯ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡೆ, ಆಯುಷ್ ಇಲಾಖೆ, ಜಿಲ್ಲಾ ಯೋಗ ಒಕ್ಕೂಟದ ಸಹಯೋಗದಲ್ಲಿ ಯೋಗಥಾನ್ ಆಯೋಜಿಸಲಾಗಿತ್ತು.
ಯೋಗದ ಮಹತ್ವವನ್ನು ಅರಿತಿದ್ದರಿಂದಲೇ, ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಅವರು ಭಾಗವಹಿಸಿದ್ದರು. ಕ್ರೀಡಾಂಗಣದ ತುಂಬ ಹಸಿರು ಮ್ಯಾಟ್ ಹಾಸಲಾಗಿತ್ತು. ಮಕ್ಕಳು, ಯುವಕರು, ಮಹಿಳೆಯರು ಟಿಶರ್ಟ್ ಧರಿಸಿ ಬಂದಿದ್ದರು. ಜತೆಗೆ ಅಧಿಕಾರಿಗಳು, ಕೆಲವು ವೃದ್ಧರೂ ಉತ್ಸಾಹದಿಂದ ಪಾಲ್ಗೊಂಡಿದ್ದರು.
ಆರಂಭದಲ್ಲಿ ಶ್ವಾಸ ಗುರು ಶ್ರೀ ವಚನಾನಂದ ಸ್ವಾಮೀಜಿ ಯೋಗದ ಟಿಪ್ಸ್ ಹೇಳಿಕೊಟ್ಟರು. 8.15 ರಿಂದ ವಿಶ್ವ ದಾಖಲೆಯ ಯೋಗಥಾನ್‌ಗೆ ಚಾಲನೆ ದೊರೆಯಿತು. ನಮಸ್ಕಾರ ಮುದ್ರೆಯಲ್ಲಿ ಕುಳಿತು ದೀರ್ಘ ಶ್ವಾಸದೊಂದಿಗೆ ಓಂಕಾರ ಮಂತ್ರ ಹೇಳುವ ಮೂಲಕ ಯೋಗಾಭ್ಯಾಸ ಶುರುವಾಯಿತು. ಅವರೆಲ್ಲ 40 ನಿಮಿಷಗಳಿಗೂ ಹೆಚ್ಚು ಕಾಲ ವಿವಿಧ ಆಸನಗಳನ್ನು ಮಾಡಿದರು.
ಪ್ರತಿ 50 ವಿದ್ಯಾರ್ಥಿಗಳಿಗೆ ಒಬ್ಬ ಮೇಲ್ವಿಚಾರಕರು, ಸಾವಿರ ವಿದ್ಯಾರ್ಥಿಗಳಿಗೆ ಒಬ್ಬ ತರಬೇತುದಾರರನ್ನು ನಿಯೋಜಿಸಲಾಗಿತ್ತು. 20 ಚಿಕ್ಕ ವೇದಿಕೆಗಳನ್ನು ಮಾಡಲಾಗಿತ್ತು. ಸೌಂಡ್ ಸಿಸ್ಟಂ, ಪ್ರಥಮ ಚಿಕಿತ್ಸೆ, ಶುದ್ಧ ಕುಡಿಯುವ ನೀರು, ಲಘು ಉಪಾಹಾರದ ಏರ್ಪಾಟಾಗಿತ್ತು.
ಯೋಗಾಸಕ್ತರು ಸೆಲ್ಫಿ ಪಾಯಿಂಟ್‌ನಲ್ಲಿ ನಿಂತು ಕ್ಯಾಮೆರಾಗೆ ಪೋಸ್ ಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net