

ದಾವಣಗೆರೆ : ಬೇಸಿಗೆಯಲ್ಲಿ ಸಂಭವಿಸಬಹುದಾದ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸಲು 2 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ ಇಟ್ನಾಳ್ ಹೇಳಿದರು. ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಸ್ತುತ 1 ಗ್ರಾಮದಲ್ಲಿ ಮಾತ್ರ ಖಾಸಗಿ ಕೊಳವೆಬಾವಿಯನ್ನು ಬಾಡಿಗೆಗೆ ಪಡೆಯಲಾಗಿದೆ. ಉಳಿದಂತೆ ಎಲ್ಲೂ ಸಮಸ್ಯೆ ಇಲ್ಲ ಎಂದು ತಿಳಿಸಿದರು. ಮುಂಬರುವ ದಿನಗಳಲ್ಲಿ 197 ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆ ಉಂಟಾಗಬಹುದು ಎಂದು ಅಂದಾಜಿಸಲಾಗಿದೆ. ಈಗಾಗಲೇ 126 ಖಾಸಗಿ ಬೋರ್‌ಗಳನ್ನು ಗುರುತಿಸಲಾಗಿದೆ. ಅಗತ್ಯವನ್ನು ಆಧರಿಸಿ ರೀಡ್ರಿಲ್, ಹೈಡ್ರೋ ಫ್ರಾೃಕ್ಚರಿಂಗ್ ಇನ್ನಿತರ ಕೆಲಸಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು. ಜಲಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 881 ಕಾಮಗಾರಿ ಕೈಗೊಂಡಿದ್ದು 630 ಪೂರ್ಣಗೊಂಡಿವೆ. ದಾವಣಗೆರೆ ತಾಲೂಕಿನ 20 ಕಡೆಗಳಲ್ಲಿ ಕೈಗೊಂಡ ಕಾಮಗಾರಿಗಳು ತೃಪ್ತಿದಾಯಕವಾಗಿ ಇಲ್ಲದ ಕಾರಣ ಲೋಪಗಳನ್ನು ಸರಿಪಡಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು. ಮಾ. 14 ಮತ್ತು 15 ರಂದು ಎಲ್ಲ ಬ್ಯಾಂಕುಗಳ ಮೂಲಕ ನಾಗರಿಕರಿಗೆ ಪ್ರಧಾನಮಂತ್ರಿ ಜೀವನ್ ಜ್ಯೋತಿ, ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಗೆ ನೋಂದಾಯಿಸಲು ಬೃಹತ್ ಶಿಬಿರ ಮಾಡಲಾಗುತ್ತಿದೆ. ಈ ಎರಡೂ ವಿಮೆ ಮಾಡಿಸುವುದರಿಂದ ಅಪಘಾತಕ್ಕೀಡಾದಾಗ ಅಥವಾ ಮರಣ ಹೊಂದಿದಾಗ ಪರಿಹಾರ ಸಿಗಲಿದೆ ಎಂದರು. ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾತನಾಡಿ, ವಿವಿಧೆಡೆ ಜಾತ್ರೆಗಳು ನಡೆಯುತ್ತಿದ್ದು ನೀರಿನಿಂದ ಹರಡಬಹುದಾದ ರೋಗಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ನೆರೆಯ ಜಿಲ್ಲೆಯಲ್ಲಿ ಕೋಳಿಜ್ವರದ ಪ್ರಕರಣಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಲ್ಲಿ 3 ಕಡೆ ಚೆಕ್‌ಪೋಸ್ಟ್ ಸ್ಥಾಪಿಸಲಾಗಿದೆ ಎಂದು ಹೇಳಿದರು. ಜಿಲ್ಲೆಯ ವಿವಿಧೆಡೆ ರಸ್ತೆ ಬದಿಗಳಲ್ಲಿ ಪ್ರಚಾರ ಫಲಕಗಳ (ಹೋರ್ಡಿಂಗ್) ಹಾವಳಿ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು ಈ ಕುರಿತು ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು. ಕಳೆದ ವರ್ಷಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಅಪಘಾತಗಳ ಪ್ರಮಾಣ ಶೇ. 25 ರಷ್ಟು ಕಡಿಮೆಯಾಗಿದೆ. ಹೆದ್ದಾರಿ ಬದಿಯಲ್ಲಿ ಲಾರಿಗಳನ್ನು ನಿಲ್ಲಿಸುವುದರಿಂದ ಅಪಘಾತಗಳು ಸಂಭವಿಸುತ್ತವೆ. ಆ ರೀತಿ ನಿಲ್ಲಿಸುವ ಲಾರಿಗಳನ್ನು ವಶಕ್ಕೆ ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದರು