ಬಸವಾದಿ ಶರಣರ ವಚನಗಳು ಮಾನವ ಕುಲದ ಆಸ್ತಿ

IMG-20220823-WA0027.jpg
Published on

ದಾವಣಗೆರೆ : ಬಸವಾದಿ ಶರಣರ ವಚನಗಳು ಕನ್ನಡಿಗರಿಗೆ, ಲಿಂಗಾಯತರಿಗೆ ಸೀಮಿತವಲ್ಲ, ಅವು ಮಾನವ ಕುಲದ ಆಸ್ತಿಯಾಗಿವೆ ಎಂದು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಹೇಳಿದರು.
ನಗರದ ವಿರಕ್ತಮಠದಲ್ಲಿ ಮಂಗಳವಾರ, ಮಕ್ಕಳಿಗಾಗಿ ವಚನ ಕಂಠಪಾಠ ಸ್ಪರ್ಧೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಬದುಕನ್ನು ಸುಭದ್ರವಾಗಿ ಕಟ್ಟಿಕೊಡುವ ಶಕ್ತಿ ವಚನಗಳಿಗೆ ಇದೆ ಎಂದು ತಿಳಿಸಿದರು.
ಕಾಯಕ, ದಾಸೋಹ, ಸಮಾನತೆ, ವೈಚಾರಿಕತೆ, ಮಾನವೀಯತೆ ಮುಂತಾದ ತತ್ವಗಳನ್ನು ವಚನಗಳು ತಿಳಿಸುತ್ತವೆ. ಇಂತಹ ಅಮೂಲ್ಯ ವಿಚಾರಗಳನ್ನು ಮಕ್ಕಳಿಗೆ ಕಲಿಸಬೇಕು. ಅವರ ಮನಸ್ಸು ಹದವಾದ ಭೂಮಿ ಇದ್ದಂತೆ. ಅಲ್ಲಿ ಒಳ್ಳೆಯ ಸಂಸ್ಕಾರ, ಸಂಸ್ಕೃತಿಯನ್ನು ಕಲಿಸಬೇಕು. ಆಗ ಮಾತ್ರ ಸಮಾಜಕ್ಕೆ ಒಳ್ಳೆಯ ವ್ಯಕ್ತಿಗಳು ಸಿಗುತ್ತಾರೆ ಎಂದರು.
ವಿದ್ಯಾವಂತರು, ವೈದ್ಯರು, ಇಂಜಿನಿಯರ್, ವಿಜ್ಞಾನಿಗಳು, ಅಧಿಕಾರಿಗಳು ಬಹಳ ಜನ ಸಿಗುತ್ತಾರೆ, ಆದರೆ ಒಳ್ಳೆಯ ವ್ಯಕ್ತಿ ಸಿಗುತ್ತಿಲ್ಲ, ವಚನಗಳನ್ನು ಕಲಿಸಿದಾಗ ಮಾತ್ರ ಅಂಥ ವ್ಯಕ್ತಿತ್ವಗಳು ನಿರ್ಮಾಣವಾಗುತ್ತವೆ ಎಂದು ಹೇಳಿದರು.
ಎಲ್ಲ ಜನಾಂಗದವರು ವಚನಗಳನ್ನು ಓದಬೇಕು, ಕಲಿಯಬೇಕು, ಪಾಲಿಸಬೇಕು. ವಚನಗಳು ನಮ್ಮ ಬದುಕಿಗೆ ಮನಸಾಕ್ಷಿಯನ್ನು ಕಲಿಸುತ್ತವೆ. ಬಸವಣ್ಣ, ಬುದ್ಧ, ಗಾಂಧೀಜಿ ಇವರೆಲ್ಲರೂ ಮನಸಾಕ್ಷಿಯಂತೆ ಬದುಕಿದ್ದರಿಂದ ದೊಡ್ಡವರಾದರು. ಇಂದು ಅಂಥ ಪ್ರವೃತ್ತಿ ಇಲ್ಲದಿರುವ ಕಾರಣ ಸಮಾಜದಲ್ಲಿ ಅಪರಾಧಗಳು ಹೆಚ್ಚಾಗಿ ನಡೆಯುತ್ತಿವೆ ಎಂದು ವಿಷಾದಿಸಿದರು.
ಅಪರಾಧಗಳನ್ನು ನಿಯಂತ್ರಣ ಮಾಡಲು ವಚನಗಳು ಹೇಳಿದಂತೆ ಬದುಕಬೇಕಾಗಿದೆ. ವಚನಗಳ ಆಶಯವೇ ಸಮಾನತೆಯ ಸಮಾಜವನ್ನು ಕಟ್ಟುವುದಾಗಿದೆ. ಅವುಗಳ ಅನುಷ್ಠಾನದಿಂದ ಸಮ ಸಮಾಜವನ್ನು ಕಟ್ಟಲು ಸಾಧ್ಯ ಎಂದು ಸ್ವಾಮೀಜಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net