

ದಾವಣಗೆರೆ : ಲಾರಿಯ ಗಾಲಿಗಳನ್ನು ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ತಂಡವೊಂದನ್ನು ಪತ್ತೆ ಮಾಡಿರುವ ದಾವಣಗೆರೆ ಗ್ರಾಮಾಂತರ ಠಾಣೆಯ ಪೊಲೀಸರು, 5 ಜನ ಆರೋಪಿಗಳನ್ನು ಬಂಧಿಸಿ 30.20 ಲಕ್ಷ ರೂ. ಮೌಲ್ಯದ ಗಾಲಿ, ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಮಹಾರಾಷ್ಟ್ರದ ಉಸ್ಮಾನಾಬಾದ್ ಜಿಲ್ಲೆಯ, ವಾಶಿ ತಾಲೂಕಿನ ಪ್ರಕಾಶ್ ನಾನಾ ಶಿಂಧೆ, ಅನಿಲ್ ಬಬನ್ ಶಿಂಧೆ, ದತ್ತಾ ಗೋವರ್ಧನ್ ಶಿಂಧೆ, ಸಂತೋಷ್ ಹಿಮ್ಮತ್ ಕಾಳೆ, ಉಮೇಶ್ ದಿಗಂಬರ್ ಲಾಖೆ ಬಂಧಿತರು.
ನಗರದ ಖಾಸಗಿ ಕಂಪನಿಯೊಂದರ ವ್ಯವಸ್ಥಾಪಕ ಕೆ.ಎಸ್. ಶಂಕ್ರಪ್ಪ ಎಂಬುವರು ನೀಡಿದ ದೂರು ಆಧರಿಸಿ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ.
ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕಿ ಕನ್ನಿಕಾ ಸಕ್ರೀವಾಲ್, ಪೊಲೀಸ್ ಇನ್ಸ್‌ಪೆಕ್ಟರ್ ಲಿಂಗನಗೌಡ ನೆಗಳೂರು ಮಾರ್ಗದರ್ಶನದಲ್ಲಿ ಪಿ.ಎಸ್.ಐ ಹಾರೂನ್ ಅಖ್ತರ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.
ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ 3, ವಿದ್ಯಾನಗರ ಠಾಣೆಯ 2 ಪ್ರಕರಣಗಳಲ್ಲಿ ಕಳ್ಳತನವಾದ 22 ಟೈರುಗಳು ಮತ್ತು ಎರಡು ಲಾರಿಗಳನ್ನು ವಶಪಡಿಸಿಕೊಳ್ಳಲಾಯಿತು. ಉಳಿದ ಆರೋಪಿತರು ತಲೆಮರೆಸಿಕೊಂಡಿದ್ದು, ಪತ್ತೆ ಕಾರ್ಯ ಮುಂದುವರಿದಿದೆ.