ಮಧ್ಯ ಕರ್ನಾಟಕದಲ್ಲಿ 500 ಇ-ಹುಂಡಿ ಸ್ಥಾಪನೆ ಗುರಿ

IMG_20220919_153225_BURST2.jpg
Published on

ದಾವಣಗೆರೆ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಮಧ್ಯ ಕರ್ನಾಟಕದಲ್ಲಿ ಇದುವರೆಗೆ 300 ಇ-ಹುಂಡಿಗಳನ್ನು ಸ್ಥಾಪಿಸಲಾಗಿದ್ದು ಈ ಸಂಖ್ಯೆಯನ್ನು 500ಕ್ಕೆ ಹೆಚ್ಚಿಸುವ ಗುರಿಯಿದೆ ಎಂದು ಬ್ಯಾಂಕಿನ ಮುಖ್ಯ ಪ್ರಧಾನ ವ್ಯವಸ್ಥಾಪಕ ನಂದ ಕಿಶೋರ್ ಹೇಳಿದರು.
ನಗರದ ಹಳೇಪೇಟೆ ವೀರಭದ್ರೇಶ್ವರ ದೇವಸ್ಥಾನದಲ್ಲಿ ಸೋಮವಾರ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ 108 ಇ-ಹುಂಡಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಪ್ರದಾಯದಂತೆ ಹುಂಡಿಗಳಲ್ಲಿ ಭಕ್ತರು ಹಾಕಿದ ಹಣವನ್ನು ಎಣಿಕೆ ಮಾಡಿ, ಬ್ಯಾಂಕಿನಲ್ಲಿ ಠೇವಣಿ ಮಾಡುವ ಪದ್ಧತಿಯಿದೆ. ಇ-ಹುಂಡಿ ಸ್ಥಾಪನೆ ಮಾಡಿರುವ ಕಡೆಗಳಲ್ಲಿ ಭಕ್ತರು ಕ್ಯೂಆರ್ ಕೋಡ್ ಸ್ಕಾೃನ್ ಮಾಡಿ ಹಣದ ಮೊತ್ತವನ್ನು ನಮೂದಿಸಿ ನೇರವಾಗಿ ದೇವಸ್ಥಾನದ ಟ್ರಸ್ಟ್‌ಗೆ ಹೋಗುವ ವ್ಯವಸ್ಥೆಯಿದೆ ಎಂದರು.
ಭಾರತ ಸರ್ಕಾರದ ‘ಡಿಜಿಟಲ್ ಇಂಡಿಯಾ’ ಆಶಯಕ್ಕೆ ಅನುಗುಣವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೂಡಾ ಡಿಜಿಟಲ್ ತಂತ್ರಜ್ಞಾನದೊಂದಿಗೆ ಹೆಜ್ಜೆ ಹಾಕುತ್ತಿದೆ. ದೇವಸ್ಥಾನ ಇನ್ನಿತರ ಧಾರ್ಮಿಕ ಸ್ಥಳಗಳಲ್ಲಿ ಇ-ಹುಂಡಿ ಸ್ಥಾಪಿಸುವುದರಿಂದ ಬಹಳಷ್ಟು ಅನುಕೂಲಗಳಿವೆ. ಹಣದ ವರ್ಗಾವಣೆ ವೇಗವಾಗಿ ನಡೆಯುತ್ತದೆ ಎಂದು ತಿಳಿಸಿದರು.
ಭಕ್ತರು ನೀಡಿದ ತಕ್ಷಣ ಖಾತೆಗೆ ಜಮಾ ಆಗುವುದರಿಂದ ಟ್ರಸ್ಟ್‌ನವರು ದೇವಸ್ಥಾನಕ್ಕೆ ಅಗತ್ಯವಾದ ಹೂವು, ಊದುಬತ್ತಿ ಇನ್ನಿತರ ಪದಾರ್ಥಗಳನ್ನು ಖರೀದಿಸಲು, ವ್ಯಾಪಾರಸ್ಥರಿಗೆ ಹಣ ಪಾವತಿಸಲು ಅನುಕೂಲವಾಗುತ್ತದೆ ಎಂದು ವಿವರಿಸಿದರು.
ಬ್ಯಾಂಕಿನ ಮಂಡಿಪೇಟೆ ಶಾಖೆಯ ಮುಖ್ಯ ಪ್ರಬಂಧಕ ಸುರೇಶ್ ಮಾತನಾಡಿ, ದೇವಸ್ಥಾನಗಳು ಮಾತ್ರವಲ್ಲದೆ ವಿವಿಧ ಧಾರ್ಮಿಕ ಸ್ಥಳಗಳಲ್ಲಿ ಇ-ಹುಂಡಿ ಸ್ಥಾಪಿಸಲಾಗಿದೆ. ಭಕ್ತರು ಈ ವ್ಯವಸ್ಥೆಯನ್ನು ಉಪಯೋಗಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಸಂದೀಪ್ ಭಟ್ನಾಗರ್, ಉಪ ಪ್ರಧಾನ ವ್ಯವಸ್ಥಾಪಕ ಪ್ರದೀಪ್ ನಾಯರ್, ಸಹಾಯಕ ಪ್ರಧಾನ ವ್ಯವಸ್ಥಾಪಕ ಅನಿಲ್ ಬಿಹಾರಿ, ದೇವಸ್ಥಾನದ ಟ್ರಸ್ಟಿಗಳು ಇದ್ದರು. ಸುಜಯಾ ನಾಯಕ್ ಪ್ರಾರ್ಥಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net