

ದಾವಣಗೆರೆ : ಪರಿಸರಕ್ಕೆ ನಾವು ಏನು ಕೊಡುತ್ತೇವೆಯೋ, ಅದನ್ನೇ ನಮಗೆ ಮರಳಿಸುತ್ತದೆ ಎಂದು ಎ.ಕೆ. ಫೌಂಡೇಶನ್ ಅಧ್ಯಕ್ಷ ಕೆ.ಬಿ. ಕೊಟ್ರೇಶ್ ಹೇಳಿದರು.
ಪರಿಸರ ಸಂರಕ್ಷಣಾ ವೇದಿಕೆ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ರಾಜ್ಯ ವಿಜ್ಞಾನ ಪರಿಷತ್ ಸಂಯುಕ್ತ ಆಶ್ರಯದಲ್ಲಿ ನಗರದ ಶರಣ ಮಾಗನೂರು ಬಸಪ್ಪ ಪ್ರೌಢಶಾಲಾ ಮೈದಾನದಲ್ಲಿ ಶನಿವಾರ, ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ‘ಸುರಕ್ಷಾ ದೀಪಾವಳಿ’ ಪ್ರಮಾಣ ವಚನ ಬೋಧನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ವಚ್ಛತೆ ಕಾಪಾಡಿದರೆ ಒಳ್ಳೆಯ ವಾತಾವರಣವೇ ಸಿಗುತ್ತದೆ. ಪರಿಸರವನ್ನು ಮಲಿನ ಮಾಡಿದರೆ ವಿಷಯುಕ್ತ ಗಾಳಿ ದೊರೆಯುತ್ತದೆ ಎಂದರು.
ಮಕ್ಕಳಲ್ಲಿ ಪರಿಸರದ ಬಗ್ಗೆ ಜಾಗೃತಿ ಬೆಳೆಯಬೇಕು. ಯಾವುದೇ ಹಬ್ಬಗಳನ್ನು ಅದರ ಹಿನ್ನೆಲೆ ತಿಳಿದು ಸಂಭ್ರಮ, ಸಡಗರದಿಂದ ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಪ್ರಭಾರ ಪರಿಸರ ಅಧಿಕಾರಿ ಬಿ.ಕೆ. ಸಂತೋಷ್ ಕುಮಾರ್ ಮಾತನಾಡಿ, ರಾಜ್ಯ ಸರ್ಕಾರವು ಹೆಚ್ಚಿನ ಶಬ್ದವುಳ್ಳ, ವಾಯು ಮಾಲಿನ್ಯ ಮಾಡುವ ಪಟಾಕಿಗಳನ್ನು ನಿಷೇಧಿಸಿದ್ದು, ಹಸಿರು ಪಟಾಕಿಗಳನ್ನು ಮಾರಾಟ ಮಾಡಲು ಆದೇಶಿಸಿದೆ ಎಂದು ಹೇಳಿದರು.
ಅತಿಯಾದ ಮಾಲಿನ್ಯದಿಂದ ದೆಹಲಿ ರಾಜ್ಯ ಸರ್ಕಾರವು ಕಠಿಣ ನಿರ್ಧಾರವನ್ನು ತೆಗೆದುಕೊಂಡು ಎಲ್ಲ ರೀತಿಯ ಪಟಾಕಿಗಳನ್ನು ನಿಷೇಧಿಸಿದೆ. ಮಾಲಿನ್ಯದ ಗಂಭೀರತೆಯನ್ನು ಅರಿತ ಸುಪ್ರೀಂ ಕೋರ್ಟ್ ಕೂಡ ದೆಹಲಿ ಸರ್ಕಾರದ ಆದೇಶಕ್ಕೆ ಬೆಂಬಲಿಸಿತ್ತು ಎಂದು ತಿಳಿಸಿದರು.
ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ. ಚಂದ್ರಶೇಖರ್ ಸುಂಕದ್ ಮಾತನಾಡಿ, ಪಟಾಕಿ ಶಬ್ದಕ್ಕೆ ಬೆದರಿ ಪ್ರಾಣಿ ಪಕ್ಷಿಗಳು ಒಂದು ವಾರ ಊಟ ಮಾಡಲು ಶ್ರಮಪಡುತ್ತವೆ. ಸಾಕು ನಾಯಿಗಳು, ಬೀದಿ ನಾಯಿಗಳು ಅತಿಯಾದ ಶಬ್ದದಿಂದ ಬೆಚ್ಚಿ ಬೀಳುತ್ತವೆ ಎಂದು ಹೇಳಿದರು.
ದೀಪಾವಳಿ ಮಾತ್ರವಲ್ಲ, ಯಾವುದೇ ಸಂದರ್ಭದಲ್ಲೂ ಅತಿಯಾದ ಶಬ್ದ, ಹಾಗೂ ವಾಯು ಮಾಲಿನ್ಯದ ಪಟಾಕಿಗಳನ್ನು ಹಚ್ಚದೆ ಸರ್ಕಾರದ ಮಾರ್ಗಸೂಚಿಯಂತೆ ಹಸಿರು ಪಟಾಕಿಗಳನ್ನು ಬಳಸಬೇಕು ಎಂದು ತಿಳಿಸಿದರು.
ಪರಿಸರ ಸಂರಕ್ಷಣಾ ವೇದಿಕೆಯ ಅಧ್ಯಕ್ಷ ಗಿರೀಶ್ ದೇವರಮನಿ ಆಶಯ ನುಡಿಗಳನ್ನಾಡಿ, ಹಲವಾರು ವರ್ಷಗಳಿಂದ ನಮ್ಮ ಸಂಸ್ಥೆಯ ವತಿಯಿಂದ ಪರಿಸರ ಸ್ನೇಹಿ ದೀಪಾವಳಿ ಆಚರಣೆ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸುತ್ತ ಬರುತ್ತಿದ್ದೇವೆ ಎಂದು ಹೇಳಿದರು.
ಈ ಬಾರಿಯೂ ಸಾವಿರಾರು ಮಕ್ಕಳಿಗೆ ಪರಿಸರಕ್ಕೆ ಹಾನಿಯಾಗದಂತೆ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಹಸಿರು ಪಟಾಕಿಗಳನ್ನು ಮಾತ್ರ ಬಳಸಬೇಕಾಗಿ ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದರು.