ದ್ವಿತೀಯ ಪಿಯುಸಿ ಪರೀಕ್ಷೆ ಮೊದಲ ದಿನ ಸುಸೂತ್ರ

dvg-notice-board-9-1.jpg
Published on

ದಾವಣಗೆರೆ : ದ್ವಿತೀಯ ಪಿಯುಸಿ ಪರೀಕ್ಷೆ ಜಿಲ್ಲೆಯ 31 ಕೇಂದ್ರಗಳಲ್ಲಿ ಗುರುವಾರ ಸುಸೂತ್ರವಾಗಿ ಆರಂಭವಾಯಿತು.
 ಕನ್ನಡ ವಿಷಯಕ್ಕೆ 16,178 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದು, ಈ ಪೈಕಿ 15,465 ಮಂದಿ ಪರೀಕ್ಷೆಗೆ ಹಾಜರಾದರು, 713 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು.
 ಸಂಸ್ಕೃತ ವಿಷಯದಲ್ಲಿ 7,151 ವಿದ್ಯಾರ್ಥಿಗಳಲ್ಲಿ 6,723 ಮಂದಿ ಪರೀಕ್ಷೆ ಬರೆದಿದ್ದು, 428 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಅರೇಬಿಕ್ ವಿಷಯದಲ್ಲಿ ಯಾವುದೇ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿಲ್ಲ.
 ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ನಗರದ ಸೀತಮ್ಮ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
 ಪರೀಕ್ಷೆ ಆರಂಭವಾಗಿದ್ದು ಬೆಳಗ್ಗೆ 10.15ಕ್ಕೆ ಆದರೂ, 9 ಗಂಟೆಯಿಂದಲೇ ವಿದ್ಯಾರ್ಥಿಗಳು ತಮಗೆ ನಿಗದಿಯಾದ ಕೇಂದ್ರಗಳಿಗೆ ಬರತೊಡಗಿದರು. ಅವರೊಂದಿಗೆ ಪಾಲಕರೂ ಇದ್ದರು.
 ಇಲ್ಲಿನ ಮೋತಿ ವೀರಪ್ಪ ಕಾಲೇಜಿನ ಗೇಟ್ ಬಳಿ ಸೂಚನಾ ಫಲಕ ಇಡಲಾಗಿತ್ತು. ಅದರಲ್ಲಿ ನೋಂದಣಿ ಸಂಖ್ಯೆಗಳನ್ನು ನೋಡಿಕೊಂಡು ವಿದ್ಯಾರ್ಥಿಗಳು ಒಳಗೆ ತೆರಳಿದರು.
 ಆವರಣದಲ್ಲಿದ್ದ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು. ಮತ್ತೊಬ್ಬ ಸಿಬ್ಬಂದಿ ಧ್ವನಿವರ್ಧಕದ ಮೂಲಕ ಸೂಚನೆಗಳನ್ನು ನೀಡಿದರು. ವಿದ್ಯಾರ್ಥಿಗಳು ತಂದಿದ್ದ ಬ್ಯಾಗ್‌ಗಳನ್ನು ಹೊರಗೆ ಇರಿಸಲಾಯಿತು.
 ಪಾಲಕರು ಹೊರಗೇ ಇದ್ದು ಮಕ್ಕಳಿಗೆ ಶುಭಾಶಯ ಹೇಳುವ ದೃಶ್ಯ ಕಂಡುಬಂದಿತು. ಬಾಲಕರ ಸರ್ಕಾರಿ ಪ್ರೌಢಶಾಲೆ, ರಾಜನಹಳ್ಳಿ ಸೀತಮ್ಮ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲೂ ಇದೇ ದೃಶ್ಯವಿತ್ತು. ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಲಾಗಿತ್ತು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net