ಜ. 5 ರೊಳಗೆ ದಾವಣಗೆರೆ ಬಸ್ ನಿಲ್ದಾಣ ಉದ್ಘಾಟನೆ

IMG_20221107_122219.jpg
Published on

ದಾವಣಗೆರೆ : ಸ್ಮಾರ್ಟ್‌ಸಿಟಿ ಯೋಜನೆಯಡಿ ನಿರ್ಮಾಣವಾಗುತ್ತಿರುವ ನಗರದ ಕೆ.ಎಸ್.ಆರ್.ಟಿ.ಸಿ ಮತ್ತು ಖಾಸಗಿ ಬಸ್ ನಿಲ್ದಾಣಗಳನ್ನು ಮುಂದಿನ ವರ್ಷ ಜ. 5 ರೊಳಗೆ ಉದ್ಘಾಟನೆ ಮಾಡಲಾಗುವುದು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.
ಎರಡೂ ನಿಲ್ದಾಣಗಳಿಗೆ ಸೋಮವಾರ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣವನ್ನು 108 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಡಿಸೆಂಬರ್ ಅಂತ್ಯಕ್ಕೆ ಆ ಯೋಜನೆ ಮುಗಿಯಬೇಕಿದೆ ಎಂದು ತಿಳಿಸಿದರು.
ಖಾಸಗಿ ಬಸ್ ನಿಲ್ದಾಣವು 25 ಕೋಟಿ ರೂ. ಯೋಜನಾ ವೆಚ್ಚ ಹೊಂದಿದ್ದು 2020ರ ಜೂನ್‌ನಲ್ಲಿ ಗುತ್ತಿಗೆ ನೀಡಲಾಗಿತ್ತು. ಕಾಮಗಾರಿಯನ್ನು 18 ತಿಂಗಳಲ್ಲಿ ಪೂರೈಸಬೇಕಿತ್ತು. ಈ ನಡುವೆ ನನಗೆ ಮಾಹಿತಿ ಇಲ್ಲದೇ ಅಧಿಕಾರಿಗಳು 1 ವರ್ಷ ವಿಸ್ತರಣೆ ಮಾಡಿದ್ದಾರೆ, ಇದು ತಪ್ಪು ಎಂದು ಅಸಮಾಧಾನ ವ್ಯಕ್ತಪಡಿಸಿ, ವಿಸ್ತರಣೆಯ ಅವಧಿಗೆ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.
ವಿಸ್ತರಣೆಯ ಅವಧಿಯೂ ನ. 30ಕ್ಕೆ ಮುಕ್ತಾಯವಾಗಲಿದೆ. ಆ ಗಡುವಿನೊಳಗಾಗಿ ಹಗಲು-ರಾತ್ರಿ ಕೆಲಸ ಮಾಡಿ ಮುಕ್ತಾಯಗೊಳಿಸಬೇಕು ಎಂದು ತಾಕೀತು ಮಾಡಿದರು.
ನ. 22ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಿಲ್ಲೆಗೆ ಭೇಟಿ ನೀಡಲಿದ್ದು ಅದೇ ದಿನ ಸಾಧ್ಯವಾದರೆ ಖಾಸಗಿ ಬಸ್ ನಿಲ್ದಾಣವನ್ನು ಲೋಕಾರ್ಪಣೆ ಮಾಡಲಾಗುವುದು. ನಿಲ್ದಾಣಗಳ ಉದ್ಘಾಟನೆ ಸಮಾರಂಭಕ್ಕೆ ಸಾರಿಗೆ ಸಚಿವ ಬಿ. ಶ್ರೀರಾಮುಲು, ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಅವರನ್ನೂ ಆಹ್ವಾನಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net